ನವದೆಹಲಿ(ಸೆ.12): ಹಿರಿಯ ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರನ್ನು ಲೋಕಸಭೆಯ ನೀತಿ ಸಂಹಿತೆ ಸಮಿತಿಯ ಮುಖ್ಯಸ್ಥರನ್ನಾಗಿ ಸ್ಪೀಕರ್ ಸುಮಿತ್ರಾ ಮಹಾಜನ್ ಪುನರ್ ನೇಮಕಗೊಳಿಸಿದ್ದಾರೆ.

ಸಂಸತ್ ಸದಸ್ಯರ ಅಶಿಸ್ತಿಗೆ ಸಂಬಂಧಿಸಿದ ದೂರುಗಳನ್ನು ಈ ಸಮಿತಿ ಪರಿಶೀಲನೆ ನಡೆಸಲಿದೆ. ಸದಸ್ಯರು ಶಿಸ್ತು , ಅಶಿಸ್ತಿಗೆ ಸಂಬಂಧಿಸಿದಂತೆ ಈ ಸಮಿತಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಲು ಮುಕ್ತ ಅವಕಾಶ ಹೊಂದಿದ್ದು, ತನ್ನ ಸಲಹೆ ಶಿಫಾರಸ್ಸು ಮಾಡಬಹುದು ಎಂದು ಹೇಳಲಾಗಿದೆ.

ಈ ಮಧ್ಯೆ ರಮೇಶ್ ಪೊಖ್ರಿಯಾಲ್ ನಿಶಾಂಕ್ ಅವರನ್ನು  ಸರ್ಕಾರದ ಭರವಸೆಯ ಸಮಿತಿಯ ಮುಖ್ಯಸ್ಥರನ್ನಾಗಿ,  ಪಿ. ಕರುಣಾಕರನ್ ಅವರನ್ನು ಹಾಲಿ ಸದನದಿಂದ  ಗೈರಾದ ಸದಸ್ಯರ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ.

ಅದರಂತೆ ಚಂದ್ರಕಾಂತ್ ಬಿ, ಖೈರ್ ಅವರನ್ನು  ಕಾಗದ ಪತ್ರಗಳ ಮಂಡನೆ ಸಮಿತಿ ಹಾಗೂ ದಿಲೀಪ್ ಕುಮಾರ್ ಮನ್ಸುಕ್ ಲಾಲ್ ಗಾಂಧಿ ಅವರನ್ನು ಅಧೀನ ಶಾಸನ ಸಮಿತಿ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ ಎಂದು ಲೋಕಸಭೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.