ಕೇರಳ ಶತಮಾನದ ಭೀಕರ ಮಳೆಗೆ ಅಕ್ಷರಶಃ ತತ್ತರಿಸಿದೆ. ಕೇರಳದ ಪ್ರವಾಹ 370 ಜನರನ್ನು ಬಲಿಪಡೆಯುವ ಮೂಲಕ ಶಾಂತಗೊಂಡಿದೆ. ಇತ್ತ ಕರ್ನಾಟಕದ ಕೊಡಗು ಜಿಲ್ಲೆ ಕೂಡ ಪ್ರವಾಹದಿಂದ ತತ್ತರಿಸಿದೆ. ಆದರೆ, ಇದಕ್ಕಿಂತಲೂ ಭೀಕರವಾದ ಪ್ರವಾಹ, ಪ್ರಕೃತಿ ವಿಕೋಪಗಳು ಈ ಹಿಂದೆ ಜರುಗಿವೆ. ಸಹಸ್ರ ಸಹಸ್ರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಇಂತಹ ಹೃದಯ ವಿದ್ರಾವಕ ಘಟನೆಗಳ ಚಿತ್ರಣ ಇಲ್ಲಿದೆ.

1987ರ ಬಿಹಾರ ಪ್ರವಾಹ, ಕೋಸಿ ನದಿಯ ಪ್ರವಾಹಕ್ಕೆ ಬಿಹಾರವೇ ಮುಳುಗಡೆ: ಬಿಹಾರದ ಕಣ್ಣೀರಿನ ನದಿ ಎಂದೇ ಕರೆಸಿಕೊಳ್ಳುವ ಕೋಸಿ ನದಿ 1987ರಲ್ಲಿ ರೌದ್ರಾವತಾರ ತಾಳಿತ್ತು. ಆಗಿನ ಭೀಕರ ಪ್ರವಾಹದಲ್ಲಿ 1,399 ಜನರು ಪ್ರಾಣ ಕಳೆದುಕೊಂಡಿದ್ದರು. 5,302 ಪ್ರಾಣಿಗಳು ಸಾವನ್ನಪ್ಪಿದ್ದವು. ಪ್ರವಾಹದಿಂದ 30 ಜಿಲ್ಲೆಗಳ 2.9 ಕೋಟಿ ಜನರು ಸಂಕಷ್ಟಕ್ಕೆ ಒಳಗಾಗಿದ್ದರು. ಇದು ಬಿಹಾರದಲ್ಲಿ ಸಂಭವಿಸಿದ ಅತ್ಯಂತ ಭೀಕರ ಪ್ರವಾಹಗಳಲ್ಲಿ ಒಂದಾಗಿದೆ. ಈ ಪ್ರವಾಹಕ್ಕೆ ಕೇವಲ ಮಳೆಯಷ್ಟೇ ಕಾರಣವಾಗಿರಲಿಲ್ಲ.

ಕೊಡಗು : ಕಣ್ಣೆದುರೇ ಮಣ್ಣಲ್ಲಿ ಹೂತುಹೋದ ಕರುಳ ಕುಡಿ

ಕೋಸಿ ನದಿಯ ಮೇಲೆ ಬೃಹತ್‌ ಗಾತ್ರದ ಗುಡ್ಡವೊಂದು ಕುಸಿದು ಬಿದ್ದಿತ್ತು. ಇದರಿಂದಾಗಿ ಸುಮಾರು ಒಂದು ಕಿ.ಮೀ. ಉದ್ದದ ಅಣೆಕಟ್ಟೆಸೃಷ್ಟಿಯಾಗಿದ್ದರಿಂದ ಅದರ ಹಿನ್ನೀರಿನಿಂದ ಪ್ರವಾಹ ಉಂಟಾಗಿತ್ತು. 32 ಲಕ್ಷ ಕ್ಯುಸೆಕ್‌ ನೀರು ಸಂಗ್ರಹವಾಗಿ 24,518 ಹಳ್ಳಿಗಳು ಮುಳುಗಡೆಯಾಗಿದ್ದವು. ಸುಮಾರು 6800 ಕೋಟಿ ರು. ಬೆಳೆ ನಷ್ಟವಾಗಿತ್ತು.

2005ರ ಮುಂಬೈ ಪ್ರವಾಹ, ನೀರಲ್ಲಿ ಮುಳುಗಿಹೋಗಿದ್ದ ವಾಣಿಜ್ಯ ರಾಜಧಾನಿ: ಜು.26, 2005. ಈ ದಿನವನ್ನು ಮುಂಬೈ ಜನರು ಮರೆಯಲು ಸಾಧ್ಯವೇ ಇಲ್ಲ. ಮುಂಬೈನ ಜನತೆ ಕಂಡುಕೇಳರಿಯದ ಮಹಾಮಳೆಗೆ ಸಾಕ್ಷಿಯಾಗಿತ್ತು. ಒಂದೇ ದಿನದಲ್ಲಿ ಬರೋಬ್ಬರಿ 994 ಮಿ.ಮೀ. (39 ಇಂಚು) ಮಳೆ ಸುರಿದಿತ್ತು! ಇಡೀ ಮುಂಬೈ ನೀರಿನಲ್ಲಿ ಮುಳುಗಿಹೋಗಿತ್ತು. ಈ ಪ್ರವಾಹ 1,094 ಜನರನ್ನು ಬಲಿ ಪಡೆದಿತ್ತು.

ಒಂದೇ ಸಮನೆ ಸುರಿದ ಮಳೆಯಿಂದ 52 ಲೋಕಲ್‌ ರೈಲುಗಳು, 37,000 ಆಟೋಗಳು, 4,000 ಟ್ಯಾಕ್ಸಿಗಳು, 900 ಬಸ್‌ಗಳು, 10,000 ಟ್ರಕ್‌ಗಳು ನೀರಿನಲ್ಲಿ ಚಲಿಸಲಾಗದೇ ಕೆಟ್ಟುನಿಂತಿದ್ದವು. ಮುಂಜಾನೆ ಕಚೇರಿಯ ಕೆಲಸಕ್ಕೆಂದು ತೆರಳಿದವರು ಮನೆಗೆ ಮರಳಲಾಗದೇ ಪ್ರವಾಹಕ್ಕೆ ಸಿಲುಕಿಕೊಂಡಿದ್ದರು. ಜು.26ರ ಮರುದಿನವೂ 644 ಮಿ.ಮೀ. (25.35 ಇಂಚು) ಮಳೆ ಸುರಿದಿತ್ತು. ಒಂದು ವಾರದ ಕಾಲ ಬಿಟ್ಟು ಬಿಡದೇ ಸುರಿದ ಮಳೆಯಿಂದ ಇಡೀ ಮಹಾರಾಷ್ಟ್ರವೇ ನಲುಗಿಹೋಗುತ್ತು.

2012ರ ಬ್ರಹ್ಮಪುತ್ರ ಪ್ರವಾಹ, ಅಸ್ಸಾಂನಲ್ಲಿ ಕಂಡು ಕೇಳರಿಯದ ಪ್ರವಾಹ:  2012ರಲ್ಲಿ ಬ್ರಹ್ಮಪುತ್ರ ನದಿ ಮುನಿಸಿಕೊಂಡಿತ್ತು. ಪದೇ ಪದೇ ಪ್ರವಾಹಕ್ಕೆ ತುತ್ತಾಗುವ ಅಸ್ಸಾಂನಲ್ಲಿ ಅತಿ ಹೆಚ್ಚು ಅನಾಹುತ ಸೃಷ್ಟಿಸಿದ ಪ್ರವಾಹಗಳಲ್ಲಿ 2012ರಲ್ಲಿ ಸಂಭವಿಸಿದ ಪ್ರವಾಹವೂ ಒಂದು. ಭಾರೀ ಪ್ರಮಾಣದಲ್ಲಿ ಮುಂಗಾರು ಮಳೆ ಸುರಿದಿದ್ದರಿಂದ ಬ್ರಹ್ಮಪುತ್ರ ನದಿ ಉಕ್ಕಿ ಹರಿದು ಭಾರತ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ಗಳಲ್ಲಿ ಪ್ರವಾಹ ಸೃಷ್ಟಿಯಾಗಿತ್ತು.

ಅಸ್ಸಾಂನಲ್ಲಿ ಭೂಕುಸಿತ ಮತ್ತು ಪ್ರವಾಹಕ್ಕೆ 124 ಜನರು ಬಲಿಯಾಗಿದ್ದರು. 60 ಲಕ್ಷ ಜನ ನಿರಾಶ್ರಿತರಾಗಿದ್ದರು. ಈ ಪ್ರವಾಹಕ್ಕೆ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಸಂಪೂರ್ಣ ಮುಳುಗಡೆಯಾಗಿತ್ತು. 13 ಖಡ್ಗ ಮೃಗಗಳು ಸೇರಿದಂತೆ 540 ಪ್ರಾಣಿಗಳು ಸಾವನ್ನಪ್ಪಿದ್ದವು. 70,000 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದ ಬೆಳೆ ಸಂಪೂರ್ಣ ನಾಶವಾಗಿತ್ತು. ಬ್ರಹ್ಮಪುತ್ರ ನದಿಯ ತಟದಲ್ಲಿರುವ ಅಪಾರ ಅರಣ್ಯ ಸಂಪತ್ತಿನ ನಾಶದಿಂದಾಗಿ ಇಂಥದ್ದೊಂದು ಪ್ರವಾಹವನ್ನು ಅಸ್ಸಾಂನ ಜನರು ಎದುರಿಸಿದ್ದರು.

ಮಳೆ ಬಂದರೆ ಕೊಡಗು, ದಕ್ಷಿಣ ಕನ್ನಡದಲ್ಲಿ ಭೂಮಿ ಏಕೆ ಕುಸಿಯುತ್ತೆ?

2013ರ ಉತ್ತರಾಖಂಡ ಪ್ರವಾಹ, ಮೇಘಸ್ಫೋಟಕ್ಕೆ ಬೆಚ್ಚಿಬಿದ್ದ ಜನತೆ:  2013ರ ಜೂನ್‌ನಲ್ಲಿ ಸಂಭವಿಸಿದ ಮೇಘಸ್ಫೋಟದಿಂದ ಸುರಿದ ದಿಢೀರ್‌ ಮಳೆಯಿಂದ ಉತ್ತರಾಖಂಡ ತತ್ತರಿಸಿಹೋಗಿತ್ತು. ಯಾರೂ ಊಹಿಸಿರದಷ್ಟುಅನಾಹುತಗಳಿಗೆ ಉತ್ತರಾಖಂಡ ಸಾಕ್ಷಿಯಾಗಿತ್ತು. 2004ರಲ್ಲಿ ಉಂಟಾದ ಸುನಾಮಿ ಬಳಿಕ ಭಾರತದಲ್ಲಿ ಉಂಟಾದ ಅತ್ಯಂತ ಘೋರ ನೈಸರ್ಗಿಕ ದುರಂತ ಎಂದು ಈ ಪ್ರವಾಹವನ್ನು ಪರಿಗಣಿಸಲಾಗಿದೆ. 2013ರ ಜೂ.14ರಿಂದ 17ರವರೆಗೆ ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಭಾರೀ ಮಳೆ ಸುರಿದಿತ್ತು. ಈ ಭೀಕರ ಮಳೆಗೆ ಮೇಘಸ್ಫೋಟ ಕಾರಣವಾಗಿತ್ತು.

580 ಮಂದಿ ಸಾವನ್ನಪ್ಪಿರುವ ಬಗ್ಗೆ ಅಧಿಕೃತ ವರದಿ ನೀಡಲಾಗಿದೆ. ಆದರೆ, ಈ ದುರಂತದಲ್ಲಿ ಪ್ರವಾಸಿಗರೂ ಸೇರಿದಂತೆ 5,700 ಜನರು ಕಾಣೆಯಾಗಿದ್ದಾರೆ ಇಲ್ಲವೇ ಸಾವಿಗೀಡಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಗಂಗೋತ್ರಿ, ಯಮುನೋತ್ರಿ, ಬದರೀನಾಥ್‌, ಚಾರ್‌ಧಾಮ್‌ಗಳಿಗೆ ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ತೀರ್ಥಯಾತ್ರೆಗೆಂದು ತೆರಳಿದ್ದ 1 ಲಕ್ಷ ಜನರು ಅಪಾಯದಲ್ಲಿ ಸಿಲುಕಿಕೊಂಡಿದ್ದರು. ರಸ್ತೆಗಳು, ಸೇತುವೆಗಳು ಕೊಚ್ಚಿಹೋಗಿದ್ದವು. ಹಲವು ದಿನಗಳ ರಕ್ಷಣಾ ಕಾರ್ಯಾಚರಣೆಯ ಬಳಿಕ ಅವರನ್ನು ಸುರಕ್ಷಿತ ಸ್ಥಳಗಳಿಗೆ ಮರಳಿದ್ದರು.

2014ರ ಜಮ್ಮು-ಕಾಶ್ಮೀರ ಪ್ರವಾಹ, ಕಾಶ್ಮೀರ ಕಣಿವೆಯನ್ನೇ ಮುಳುಗಿಸಿದ ಪ್ರವಾಹ:  ಜಮ್ಮು ಕಾಶ್ಮೀರ 2014ರಲ್ಲಿ ಕಂಡುಕೇಳಿರದ ಪ್ರವಾಹಕ್ಕೆ ಸಿಲುಕಿಕೊಂಡಿತ್ತು. ಪಾಕ್‌ ಆಕ್ರಮಿತ ಕಾಶ್ಮೀರ, ಗಿಲ್ಗಿಟ್‌, ಬಲ್ಟಿಸ್ತಾನ್‌ ಮತ್ತು ಪಂಜಾಬ್‌ಗಳು ಕೂಡ ಈ ಪ್ರವಾಹಕ್ಕೆ ತುತ್ತಾಗಿದ್ದವು. 2014ರ ಸೆಪ್ಟೆಂಬರ್‌ನಲ್ಲಿ ಸುರಿದ ಭಾರೀ ಮಳೆಯಿಂದ ಕಾಶ್ಮೀರ ಕಣಿವೆ ನೀರಿನಲ್ಲಿ ಮುಳುಗಿಹೋಗಿತ್ತು.

ಈ ಭೀಕರ ಪ್ರವಾಹದಿಂದಾಗಿ ಕಾಶ್ಮೀರದಲ್ಲಿ 277 ಮಂದಿ ಹಾಗೂ ಪಾಕಿಸ್ತಾನದ ಭಾಗದಲ್ಲಿ 280 ಮಂದಿ ಪ್ರಾಣಕಳೆದುಕೊಂಡಿದ್ದರು. 6,910 ಕಿ.ಮೀ.ಯಷ್ಟುರಸ್ತೆಗಳು ಹಾನಿಗೊಳಗಾಗಿದ್ದವು. ಹೀಗಾಗಿ ಸಂತ್ರಸ್ತರನ್ನು ಹೆಲಿಕಾಪ್ಟರ್‌ ಮೂಲಕ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸಾಗಿಸುವುದು ಸವಾಲಿನ ಸಂಗತಿಯಾಗಿತ್ತು. ಝೇಲಂ ನದಿಯಲ್ಲಿ 22.4 ಅಡಿಯಷ್ಟುನೀರು ಉಕ್ಕಿ ಹರಿದಿದ್ದರಿಂದ ಪ್ರವಾಹ ಸೃಷ್ಟಿಯಾಗಿತ್ತು. ಈ ಪ್ರವಾಹದ ಭೀಕರತೆ ಎಷ್ಟಿತ್ತೆಂದರೆ 390 ಹಳ್ಳಿಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿಹೋಗಿದ್ದವು.

- ಜೀವರಾಜ ಭಟ್‌