ಶೇ.57ರಷ್ಟು ಮಕ್ಕಳಿಗೆ ಸರಳ ಲೆಕ್ಕ ಗೊತ್ತಿಲ್ಲ

Lerning Quality Is Dull in Some Students
Highlights

ದೇಶದ 14-18ರ ವಯಸ್ಸಿನ ಹುಡುಗ-ಹುಡುಗಿಯರಲ್ಲಿ 10ರಲ್ಲಿ ಏಳು ಮಕ್ಕಳಿಗೆ ಮೊಬೈಲ್ ಬಳಕೆ ಚೆನ್ನಾಗಿ ಗೊತ್ತಿದೆ, ಆದರೆ ಅವರ ಮೂಲ ಮಾತೃಭಾಷೆಯ ಪಠ್ಯಪುಸ್ತಕ ಓದಲು ಬರುವುದಿಲ್ಲ ಎಂದು ಸಮೀಕ್ಷೆಯೊಂದು ತಿಳಿಸಿದೆ.

ನವದೆಹಲಿ: ದೇಶದ 14-18ರ ವಯಸ್ಸಿನ ಹುಡುಗ-ಹುಡುಗಿಯರಲ್ಲಿ 10ರಲ್ಲಿ ಏಳು ಮಕ್ಕಳಿಗೆ ಮೊಬೈಲ್ ಬಳಕೆ ಚೆನ್ನಾಗಿ ಗೊತ್ತಿದೆ, ಆದರೆ ಅವರ ಮೂಲ ಮಾತೃಭಾಷೆಯ ಪಠ್ಯಪುಸ್ತಕ ಓದಲು ಬರುವುದಿಲ್ಲ ಎಂದು ಸಮೀಕ್ಷೆಯೊಂದು ತಿಳಿಸಿದೆ.

 ಶೇ.25ರಷ್ಟು ಮಕ್ಕಳಿಗೆ ತಮ್ಮದೇ ಮಾತೃಭಾಷೆಯನ್ನು ನಿರರ್ಗಳವಾಗಿ ಓದುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಭಾರತದ ಗ್ರಾಮೀಣ ಭಾಗದ ವಾರ್ಷಿಕ ಶೈಕ್ಷಣಿಕ ವರದಿ(ಎಎಸ್‌ಇಆರ್) ಯಲ್ಲಿ ತಿಳಿಸಲಾಗಿದೆ. ಈ ಅಂಕಿ ಅಂಶಗಳು ಭಾರತದ ಗ್ರಾಮೀಣ ಭಾಗದ ಶಿಕ್ಷಣ ಗುಣಮಟ್ಟದ ಬಗ್ಗೆ ಕಳವಳವನ್ನುಂಟು ಮಾಡಿದೆ.

ಶೇ.57 ಮಕ್ಕಳಿಗೆ ಗಣಿತದ ಸರಳ ಕೂಡುವಿಕೆ, ಕಳೆಯುವಿಕೆ, ಮಗ್ಗಿಗಳೂ ಗೊತ್ತಿಲ್ಲ. ಶೇ.14 ಮಕ್ಕಳಿಗೆ ಭಾರತದ ನಕಾಶೆ ಗುರುತಿಸಲು ಗೊತ್ತಿಲ್ಲ. ಶೇ.36 ಮಕ್ಕಳಿಗೆ ದೇಶದ ರಾಜಧಾನಿ ಗೊತ್ತಿಲ್ಲ ಮತ್ತು ಶೇ.21ರಷ್ಟು ಮಕ್ಕಳಿಗೆ ತಾವು ವಾಸಿಸುವ ರಾಜ್ಯದ ಹೆಸರು ಕೇಳಿದರೆ ಉತ್ತರಿಸಲು ಗೊತ್ತಿಲ್ಲ ಎಂದು ವರದಿ ಹೇಳಿದೆ.

14ರಿಂದ 18ರ ವಯಸ್ಸಿನ ನಡುವೆ ಶಾಲಾ ದಾಖಲಾತಿ ವಿಷಯದಲ್ಲಿ ಹುಡುಗಿಯರು ಮತ್ತು ಹುಡುಗರ ನಡುವೆ ಕೊಂಚ ವ್ಯತ್ಯಾಸವಿದೆ. ಶೇ.32ರಷ್ಟು ಹುಡುಗಿಯರು ಮುಂದಿನ ಶಿಕ್ಷಣಕ್ಕೆ ದಾಖಲಾಗುವು ದಿಲ್ಲ ಮತ್ತು ಶೇ.28ರಷ್ಟು ಹುಡುಗರು ದಾಖಲಾಗುವುದಿಲ್ಲ. 4ನೇ ಒಂದರಷ್ಟು ಮಕ್ಕಳಿಗೆ ಹಣ ಸರಿಯಾಗಿ ಲೆಕ್ಕ ಹಾಕಲೂ ಬರುವುದಿಲ್ಲ, ಶೇ. 44 ಮಕ್ಕಳಿಗೆ ಕೆ.ಜಿ. ಲೆಕ್ಕದಲ್ಲಿ ತೂಕ ಹಾಕಲೂ ಬರುವುದಿಲ್ಲ. ಶೇ.40 ಮಕ್ಕಳಿಗೆ ಗಡಿಯಾರದಲ್ಲಿ ಸಮಯ ನೋಡಲೂ ಗೊತ್ತಿಲ್ಲ ಎನ್ನಲಾಗಿದೆ. 14-18ರ ವಯಸ್ಸಿನ ನಡುವಿನ ಯುವಕ, ಯುವತಿಯರ ಪೈಕಿ ಶೇ.73ರಷ್ಟು ಮಂದಿ ಮೊಬೈಲ್ ಬಳಕೆ ಮಾಡುತ್ತಿದ್ದಾರೆ ಎಂದು ವರದಿ ಹೇಳಿದೆ.

loader