ಇಂದಿರಾ ಆಸ್ತಿ ಉಳಿಸಿಕೊಳ್ಳಲು ಪಿತ್ರಾರ್ಜಿತ ತೆರಿಗೆ ರದ್ದುಪಡಿಸಿದ್ದ ರಾಜೀವ್: ಪ್ರಧಾನಿ ಮೋದಿ ಕಿಡಿ
‘ಜನರನ್ನು ಲೂಟಿ ಮಾಡುವ ಕಾಂಗ್ರೆಸ್ ಪಕ್ಷ ಹಾಗೂ ಜನಸಾಮಾನ್ಯರ ನಡುವೆ ನಾನು ರಕ್ಷಣೆಯ ಗೋಡೆಯಂತೆ ನಿಂತಿದ್ದೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಮೊರೇನಾ (ಮ.ಪ್ರ.) (ಏ.26): ಪಿತ್ರಾರ್ಜಿತ ಆಸ್ತಿಯಲ್ಲಿ ಸರ್ಕಾರಕ್ಕೆ 50% ಪಾಲು ಸಿಗುವಂತೆ ಮಾಡುವ ಕಾಯ್ದೆಯ ಪ್ರಸ್ತಾಪಕ್ಕೆ ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಮತ್ತೆ ವಾಗ್ದಾಳಿ ನಡೆಸಿದ್ದು, ಈ ತೆರಿಗೆಯನ್ನು ಮಾಜಿ ಪ್ರಧಾನಿ ರಾಜೀವ್ ಗಾಂಧಿ ರದ್ದುಪಡಿಸಿದ್ದೇ ತಮ್ಮ ತಾಯಿ ಇಂದಿರಾ ಗಾಂಧಿಯ ಆಸ್ತಿಯನ್ನು ಉಳಿಸಿಕೊಳ್ಳುವುದಕ್ಕಾಗಿ ಎಂದು ದೂರಿದ್ದಾರೆ.
ಮಧ್ಯಪ್ರದೇಶದ ಮೊರೇನಾ ನಗರದಲ್ಲಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ‘ಜನರನ್ನು ಲೂಟಿ ಮಾಡುವ ಕಾಂಗ್ರೆಸ್ ಪಕ್ಷ ಹಾಗೂ ಜನಸಾಮಾನ್ಯರ ನಡುವೆ ನಾನು ರಕ್ಷಣೆಯ ಗೋಡೆಯಂತೆ ನಿಂತಿದ್ದೇನೆ’ ಎಂದು ಹೇಳಿದರು. ‘ಕಾಂಗ್ರೆಸ್ ಪಕ್ಷ ಮಾಡಿದ ಪಾಪಗಳನ್ನು ನಿಮ್ಮೆರಡೂ ಕಿವಿ ತೆರೆದು ಕೇಳಿಸಿಕೊಳ್ಳಿ. ನಾನೊಂದು ಕುತೂಹಲಕರ ಸಂಗತಿ ಹೇಳುತ್ತೇನೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮೃತಪಟ್ಟಾಗ ಮಕ್ಕಳಿಗೆ ಅವರ ಆಸ್ತಿ ಸಿಗುತ್ತಿತ್ತು. ಆದರೆ ಅದರಲ್ಲಿ ಒಂದು ಪಾಲು ಸರ್ಕಾರಕ್ಕೆ ಹೋಗಬೇಕು ಎಂಬ ನಿಯಮವಿತ್ತು. ಕಾಂಗ್ರೆಸ್ ಪಕ್ಷವೇ ಆ ಕಾಯ್ದೆ ತಂದಿತ್ತು. ಆದರೆ, ಇಂದಿರಾ ಆಸ್ತಿ ಸರ್ಕಾರಕ್ಕೆ ಹೋಗುವುದನ್ನು ತಪ್ಪಿಸಲು ರಾಜೀವ್ ಗಾಂಧಿ ಆ ಕಾಯ್ದೆಯನ್ನು ರದ್ದುಪಡಿಸಿದರು. ನಂತರ ಹಲವು ತಲೆಮಾರುಗಳ ಕಾಲ ಸಂಪತ್ತು ಕ್ರೋಡೀಕರಿಸಿಕೊಂಡು ಈಗ ನಿಮ್ಮ ಆಸ್ತಿಯನ್ನು ಲೂಟಿ ಮಾಡುವುದಕ್ಕಾಗಿ ಮತ್ತೆ ಆ ಕಾಯ್ದೆ ತರಲು ಹೊರಟಿದ್ದಾರೆ’ ಎಂದು ಕಿಡಿಕಾರಿದರು.
ಮುಸ್ಲಿಂ ಮೀಸಲು ಮುಂದುವರಿಸಿದ್ದು ಬೊಮ್ಮಾಯಿ ಸರ್ಕಾರ: ಸಿಎಂ ಸಿದ್ದರಾಮಯ್ಯ
‘ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಅದು ಜನರ ಅರ್ಧಕ್ಕಿಂತ ಹೆಚ್ಚು ಸಂಪಾದನೆಯನ್ನು ಪಿತ್ರಾರ್ಜಿತ ಆಸ್ತಿ ತೆರಿಗೆ ಮೂಲಕ ಕಿತ್ತುಕೊಳ್ಳಲಿದೆ. ದೇಶದ ಸಂಪತ್ತಿನ ಮೇಲೆ ಮುಸ್ಲಿಮರಿಗೆ ಮೊದಲ ಹಕ್ಕಿದೆ ಎಂದು ಕಾಂಗ್ರೆಸ್ ಹೇಳುತ್ತದೆ. ಆದರೆ ದೇಶದ ಬಡವರಿಗೆ ಮೊದಲ ಹಕ್ಕಿದೆ ಎಂದು ನಾನು ಹೇಳುತ್ತೇನೆ’ ಎಂದೂ ಮೋದಿ ತಿಳಿಸಿದರು.