ಬೆಂಗಳೂರು :   ವಾಹನಗಳ ಸುರಕ್ಷತೆ ಹಾಗೂ ಆದಾಯ ಸೋರಿಕೆ ತಡೆಯುವುದರ ಜೊತೆಗೆ ವಾಹನಗಳ ನಿಲುಗಡೆಗೆ ಗಂಟೆ ಆಧಾರದ ಮೇಲೆ ಶುಲ್ಕ ವಿಧಿಸುವಂತಹ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಸಸ್ಯಕಾಶಿ ಲಾಲ್‌ಬಾಗ್ ನಲ್ಲಿ ಗುರುವಾರದಿಂದ(ಏ. 11) ಆರಂಭವಾಗಲಿದೆ. ಇದರೊಂದಿಗೆ ಬೆಳಗ್ಗೆ ವಾಹನಗಳನ್ನು ಲಾಲ್ ಬಾಗ್ ಒಳಗೆ ನಿಲುಗಡೆ ಮಾಡಿ ಬೇರೆ ಕಡೆ ಸುತ್ತಾಡಿಕೊಂಡು ಸಂಜೆ ತೆಗೆದುಕೊಂಡು
ಹೋಗುತ್ತಿರುವುದಕ್ಕೆ ಕಡಿವಾಣ ಬೀಳಲಿದೆ. 

ಭದ್ರತೆ ಜೊತೆಗೆ ಶುಲ್ಕ ವಸೂಲಿಯಲ್ಲಿ ಆಗುತ್ತಿದ್ದ ಸೋರಿಕೆ ತಡೆಯಲು ಹೊಸ ವ್ಯವಸ್ಥೆ ಮಾಡಲಾಗಿದೆ. ವಾರಾಂತ್ಯ ಹಾಗೂ ಫಲಪುಷ್ಪ ಪ್ರದರ್ಶನ ಸಂದರ್ಭದಲ್ಲಿ ಪ್ರವಾಸಿಗರ ವಾಹನಗಳ ನಿಲುಗಡೆಗೆ ತೀವ್ರ ತರದ ಸಮಸ್ಯೆ ಎದುರಾಗುತ್ತಿತ್ತು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ತೋಟಗಾರಿಕೆ ಇಲಾಖೆ ಖಾಸಗಿ ಕಂಪೆನಿಗಳಿಂದ ಕಾರ್ಪೊರೇಟ್ ಸಮುದಾಯ ಹೊಣೆಗಾರಿಕೆ(ಸಿಎಸ್‌ಆರ್) ಅಡಿಯಲ್ಲಿ ಪಾರ್ಕಿಂಗ್ ನಿರ್ಮಾಣ ಮಾಡಿದೆ. 

ಬಾಷ್ ಸಂಸ್ಥೆ ಸಿಎಸ್‌ಆರ್ ಅಡಿಯಲ್ಲಿ ನೀಡಿದ 2.50 ಕೋಟಿ ರು. ವೆಚ್ಚದಲ್ಲಿ ಡಬಲ್ ರೋಡ್ ಪ್ರವೇಶದ್ವಾರ (ಶಾಂತಿನಗರ ಕಡೆಯಿಂದ)ದ ಎಡಭಾಗದ ಸುಮಾರು ಐದು ಎಕರೆ ಪ್ರದೇಶದಲ್ಲಿ ಸ್ಮಾರ್ಟ್ ಪಾರ್ಕಿಂಗ್ ಸಿದ್ಧಗೊಂಡಿದೆ. ಈ ಪಾರ್ಕಿಂಗ್ ಸ್ಥಳದಲ್ಲಿ ಸುಮಾರು 150 ಕ್ಕೂ ಹೆಚ್ಚು ಕಾರುಗಳು, 350 ಕ್ಕೂ ಹೆಚ್ಚು ದ್ವಿ ಚಕ್ರ ವಾಹನಗಳು ಹಾಗೂ 30 ಕ್ಕೂ ಹೆಚ್ಚು ಬಸ್‌ಗಳನ್ನು ಏಕ ಕಾಲದಲ್ಲಿ ನಿಲ್ಲಿಸಲು ವ್ಯವಸ್ಥೆಯಿದೆ. 

ಇದರಿಂದ ಫಲಪುಷ್ಪ ಪ್ರದರ್ಶನದ ಸಂದರ್ಭಗಳಲ್ಲಿ ಲಾಲ್‌ಬಾಗ್‌ನ ಹೊರ ಭಾಗಗಳಲ್ಲಿ ವಾಹನ ನಿಲುಗಡೆಗೆ ಎದುರಾಗುತ್ತಿದ್ದ ಸಮಸ್ಯೆಗೆ ತುಸು ಪರಿಹಾರ ಸಿಗಲಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಮಯದ ಆಧಾರದಲ್ಲಿ ಶುಲ್ಕ ಸಂಗ್ರಹ: ಇದುವರೆಗೂ ವಾಹನಗಳ ಪಾರ್ಕಿಂಗ್ ಅವಧಿ ನಿಯಂತ್ರಿಸಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ಬೆಳಿಗ್ಗೆ ಉದ್ಯಾನದೊಳಗೆ ಬಂದವರು ಸಂಜೆ ಉದ್ಯಾನ ಮುಚ್ಚುವ ಸಂದರ್ಭದಲ್ಲಿ ಹೊರ ಹೋಗುತ್ತಿದ್ದರು. ಇಲ್ಲಿ ವಾಹನ ನಿಲ್ಲಿಸಿ ನಗರದಲ್ಲಿ ತಮ್ಮ ವ್ಯವಹಾರ ಮುಗಿಸಿ ಸಂಜೆ ಬಂದು ವಾಹನ ತೆಗೆದುಕೊಂಡು ಹೋಗುತ್ತಿದ್ದ ಉದಾಹರಣೆಗಳು ಇವೆ. ಇದೇ ಕಾರಣದಿಂದ  ನಿಲುಗಡೆ ಸಮಯ ಆಧಾರದಲ್ಲಿ ಪಾರ್ಕಿಂಗ್ ಶುಲ್ಕ ವಿಧಿಸಲಾಗುವುದು ಎಂದು ಅವರು ಹೇಳಿದರು. 

ಕಂಪ್ಯೂಟರ್ ಆಧಾರಿತ ಬಿಲ್: ವಾಹನ ನಿಲುಗಡೆ ವ್ಯವಸ್ಥೆ ಇಲ್ಲಿಯವರೆಗೂ ಮಾನವ ಆಧಾರಿತವಾಗಿತ್ತು. ಇನ್ನು ಮುಂದೆ ಸಂಪೂರ್ಣವಾಗಿ ತಂತ್ರಜ್ಞಾನ ಆಧಾರಿತವಾಗಲಿದೆ. ಪ್ರತಿದಿನ ಉದ್ಯಾನ ಪ್ರವೇಶಿಸುವ ಪ್ರತಿ ವಾಹನದ ಸಮಗ್ರ ಮಾಹಿತಿ ಲಭ್ಯವಾಗಲಿದೆ. ಅಲ್ಲದೆ, ಡಬಲ್ ರೋಡ್ ದ್ವಾರದಿಂದ ವಾಹನಗಳು ಪ್ರವೇಶಿಸುತ್ತಿದ್ದಂತೆ ವಾಹನದ ಸಂಖ್ಯೆ ಸ್ಕ್ಯಾನಿಂಗ್ ಆಗುತ್ತದೆ. ಅಲ್ಲದೆ, ವಾಹನ ಬಣ್ಣ, ಎಷ್ಟು ಮಂದಿ ಬಂದಿದ್ದಾರೆ ಮುಂತಾದ ಸಮಗ್ರ ವಿವರ ಕಂಪ್ಯೂಟರ್ನಲ್ಲಿ ಸಂಗ್ರಹವಾಗಲಿದೆ .

15  ಲಕ್ಷ ಹೆಚ್ಚಳ ಸಾಧ್ಯತೆ: ಈವರೆಗೆ ವಾಹನ ನಿಲುಗಡೆಯಿಂದಾಗಿ ವಾರ್ಷಿಕ 70 ಲಕ್ಷ ರು. ಸಂಗ್ರಹವಾಗುತ್ತಿದೆ. ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿಯಾಗುತ್ತಿರುವುದರಿಂದ ಸುಮಾರು 15 ಲಕ್ಷ ರು ಹೆಚ್ಚಳವಾಗಲಿದೆ. 85 ಲಕ್ಷ ಸಂಗ್ರಹವಾಗುವ ಸಾಧ್ಯತೆ ಯಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ (ಲಾಲ್‌ಬಾಗ್) ಚಂದ್ರಶೇಖರ್ ತಿಳಿಸಿದ್ದಾರೆ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.