ಈ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲಕ್ಷ್ಮೀ ಹೆಬ್ಬಾಳ್ಕರ್, ತಾನು ಮಹಾರಾಷ್ಟ್ರಕ್ಕೆ ಜೈ ಎಂದಿದ್ದು ನಿಜವಾದರೂ ತಮ್ಮ ಉದ್ದೇಶ ಕರ್ನಾಟಕವನ್ನು ವಿರೋಧಿಸುವುದಾಗಿರಲಿಲ್ಲ. ಬೆಳಗಾವಿ ಯಾವತ್ತಿದ್ದರೂ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಅಭಿಪ್ರಾಯಪಟ್ಟಿದ್ದಾರೆ. "ತಮ್ಮ ಭಾಷಣದಲ್ಲಿ ಆಡಿದ ಮಾತುಗಳನ್ನು ಸಂಪೂರ್ಣವಾಗಿ ಕೇಳಿಸಿಕೊಳ್ಳದೇ ಸುಮ್ಮನೆ ವಿವಾದ ಸೃಷ್ಟಿಸಲಾಗುತ್ತಿದೆ," ಎಂದು ವಿಷಾದಿಸಿದ್ದಾರೆ.
ಬೆಳಗಾವಿ(ಆ. 31): ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದರೆ ನಾನೇ ಮೊದಲು ಮಹಾರಾಷ್ಟ್ರಕ್ಕೆ ಜೈ ಎನ್ನುತ್ತೇನೆಂದು ಹೇಳಿಕೆ ನೀಡಿ ಕನ್ನಡಿಗರ ಆಕ್ರೋಶಕ್ಕೆ ತುತ್ತಾಗಿರುವ ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಇದೀಗ ಕನ್ನಡಿಗರ ಕ್ಷಮೆ ಯಾಚಿಸಿದ್ದಾರೆ. ಕನ್ನಡಿಗರನ್ನು ನೋಯಿಸುವ ಉದ್ದೇಶವಿರಲಿಲ್ಲ. ನನ್ನ ಹೇಳಿಕೆಯಿಂದ ಕನ್ನಡಿಗರಿಗೆ ನೋವಾಗಿದ್ದರೆ ನನ್ನನ್ನು ಕ್ಷಮಿಸಿರಿ ಎಂದು ಡಿಕೆಶಿ ಆಪ್ತೆಯಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಕೋರಿಕೊಂಡಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಬೆಳಗಾವಿಯ ಬಸರೀಕಟ್ಟಿ ಗ್ರಾಮದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ ಭಾಷಣದ ವೇಳೆ ಮಹಾರಾಷ್ಟ್ರದ ಪರವಾಗಿ ಮಾತನಾಡಿರುವ ಆರೋಪವಿದೆ. ಆ ಭಾಷಣದ ಆಡಿಯೋ ಸೋಶಿಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
"ನಾನೀಗ ಕರ್ನಾಟಕದಲ್ಲಿದ್ದೀನಿ. ಆದರೆ ಗಡಿ ವಿಚಾರ ಸುಪ್ರೀಂ ಕೋರ್ಟ್'ನಲ್ಲಿದೆ. ಪ್ರಕರಣ ಮುಗಿದು ಬೆಳಗಾವಿ ಮಹಾರಾಷ್ಟ್ರಕ್ಕೆ ಹೋಗುವುದಾದರೆ ಎಲ್ಲರಿಗಿಂತ ಮೊದಲು ನಾನೇ ಮಹಾರಾಷ್ಟ್ರದ ಧ್ವಜ ಹಿಡಿದು ಜೈಮಹಾರಾಷ್ಟ್ರ ಅಂತಾ ಹೇಳುವೆ" ಎಂದು ಕಾಂಗ್ರೆಸ್ ನಾಯಕಿಯು ಹೇಳಿರುವುದು ಈ ಆಡಿಯೋದಿಂದ ತಿಳಿದುಬರುತ್ತದೆ. ಕನ್ನಡಪರ ಸಂಘಟನೆಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯಾದ್ಯಂತ ಹೋರಾಟ ಮಾಡಲು ಅಣಿಯಾಗಿವೆ. ಈ ಪ್ರಕರಣ ಇದೀಗ ಸರಕಾರಕ್ಕೆ ಮುಜುಗರ ತಂದಿದ್ದು, ಲಕ್ಷ್ಮೀ ಹೆಬ್ಬಾಳ್ಕರ್ ತಲೆದಂಡವಾದರೂ ಆಗಬಹುದೆನ್ನಲಾಗಿದೆ.
ಈ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲಕ್ಷ್ಮೀ ಹೆಬ್ಬಾಳ್ಕರ್, ತಾನು ಮಹಾರಾಷ್ಟ್ರಕ್ಕೆ ಜೈ ಎಂದಿದ್ದು ನಿಜವಾದರೂ ತಮ್ಮ ಉದ್ದೇಶ ಕರ್ನಾಟಕವನ್ನು ವಿರೋಧಿಸುವುದಾಗಿರಲಿಲ್ಲ. ಬೆಳಗಾವಿ ಯಾವತ್ತಿದ್ದರೂ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಅಭಿಪ್ರಾಯಪಟ್ಟಿದ್ದಾರೆ. "ತಮ್ಮ ಭಾಷಣದಲ್ಲಿ ಆಡಿದ ಮಾತುಗಳನ್ನು ಸಂಪೂರ್ಣವಾಗಿ ಕೇಳಿಸಿಕೊಳ್ಳದೇ ಸುಮ್ಮನೆ ವಿವಾದ ಸೃಷ್ಟಿಸಲಾಗುತ್ತಿದೆ," ಎಂದು ವಿಷಾದಿಸಿದ್ದಾರೆ.
"ಸುಪ್ರೀಂಕೋರ್ಟ್'ನಲ್ಲಿ ಬೆಳಗಾವಿ ಪಡೆಯಲು ಮಹಾರಾಷ್ಟ್ರ ಹಾಕಿರುವ ಪ್ರಕರಣವೇ ಅಕ್ರಮವಾಗಿದೆ. ನ್ಯಾಯಾಲಯದಲ್ಲಿ ಮಹಾರಾಷ್ಟ್ರದ ಪರವಾಗಿ ತೀರ್ಪು ಬರುವ ಸಾಧ್ಯತೆಯೇ ಇಲ್ಲ. ಅಕಸ್ಮಾತ್, ಮಹಾರಾಷ್ಟ್ರ ಪರವಾಗಿ ತೀರ್ಪು ಬಂದಿದ್ದೇ ಆದಲ್ಲಿ ನಾನೇ ಜೈ ಮಹಾರಾಷ್ಟ್ರ ಎಂದು ಹೇಳುತ್ತೇನೆಂದು ಸವಾಲು ಹಾಕಿದ್ದೆ ಅಷ್ಟೇ," ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ಕೊಟ್ಟಿದ್ದಾರೆ.