ಪರಂರನ್ನು ತಾವು ಸೋಲಿಸಿಲ್ಲ ಎಂದು ಸಿದ್ದು ಆಣೆ ಮಾಡಲಿ

First Published 13, Mar 2018, 9:06 AM IST
KS Eshwarappa Challenges CM Siddaramaiah
Highlights

ಪರಮೇಶ್ವರ್‌ ಅವರನ್ನು ಯಾರು ಸೋಲಿಸಿದರು ಎಂಬುದನ್ನು ತುಮಕೂರಿನ ಶಾಸಕ ರಾಜಣ್ಣ ಅವರೇ ಹೇಳುತ್ತಾರೆ ಕೇಳಿ ನೋಡಿ. ಕಳೆದ ಚುನಾವಣೆಯಲ್ಲಿ ಪರಮೇಶ್ವರ್‌ ಅವರನ್ನು ಸೋಲಿಸಿದ್ದು ಸಿದ್ದರಾಮಯ್ಯ ಅವರೇ ಎಂಬುದರಲ್ಲಿ ಯಾವುದೇ ಸಂಶಯ ಬೇಡ.

ಕೋಲಾರ(ಮಾ.13): ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಅವರನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಾವು ಸೋಲಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ದೇವಿ ಮೇಲೆ ಆಣೆ ಮಾಡಿ ಹೇಳಲಿ ನೋಡೋಣ ಎಂದು ವಿಧಾನಪರಿಷತ್‌ ವಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ ಅವರು ಸವಾಲು ಹಾಕಿದ್ದಾರೆ.

ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಮೇಶ್ವರ್‌ ಅವರನ್ನು ಯಾರು ಸೋಲಿಸಿದರು ಎಂಬುದನ್ನು ತುಮಕೂರಿನ ಶಾಸಕ ರಾಜಣ್ಣ ಅವರೇ ಹೇಳುತ್ತಾರೆ ಕೇಳಿ ನೋಡಿ. ಕಳೆದ ಚುನಾವಣೆಯಲ್ಲಿ ಪರಮೇಶ್ವರ್‌ ಅವರನ್ನು ಸೋಲಿಸಿದ್ದು ಸಿದ್ದರಾಮಯ್ಯ ಅವರೇ ಎಂಬುದರಲ್ಲಿ ಯಾವುದೇ ಸಂಶಯ ಬೇಡ. ಆದರೆ, ಸಿದ್ದರಾಮಯ್ಯ ಈಗ ನಾವೆಲ್ಲಾ ಒಂದಾಗುತ್ತಿದ್ದೇವೆ. ಪರಮೇಶ್ವರ್‌ ಗೆದ್ದರೆ ನಾನು ಗೆದ್ದಂತೆ ಎಂದು ಕೊರಟಗೆರೆಯಲ್ಲಿ ಹೇಳಿದ್ದಾರೆ. ಇದೆಲ್ಲ ಬರೀ ನಾಟಕ ಎಂದರು.

ರಾಜ್ಯಕ್ಕೇ ಕಳಂಕ:

ರಾಜ್ಯದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಕೆಲಸ ಮಾಡಲು ಆಗುತ್ತಿಲ್ಲ. ನಮಗೆ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ಐಪಿಎಸ್‌ ಅಧಿಕಾರಿಯೊಬ್ಬರು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದಾರೆ. ರಾಜ್ಯದ ಇತಿಹಾಸದಲ್ಲೇ ಇದೊಂದು ದೊಡ್ಡ ಕಳಂಕ. ಅಧಿಕಾರಿಗಳೇ ಹೀಗೆ ಪತ್ರ ಬರೆಯುವುದನ್ನು ನೋಡಿದರೆ, ಅಧಿಕಾರಿಗಳ ಮೇಲೆ ಇವರಿಗೆ ಹಿಡಿತವಿಲ್ಲ ಎಂದು ಗೊತ್ತಾಗುತ್ತದೆ. ಈ ಬಗ್ಗೆ ತನಿಖೆ ನಡೆಸುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಹೇಳುತ್ತಿರುವುದು ಅವರ ನಿರ್ಲಕ್ಷ್ಯದ ಧ್ಯೋತಕ ಎಂದು ಹೇಳಿದರು.

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ ಎಂಬುದು ಕಾಂಗ್ರೆಸ್ಸಿಗರ ಭ್ರಮೆ. ಭ್ರಮನಿರಸಗೊಂಡಿರುವ ಸಿದ್ದರಾಮಯ್ಯ ಇವೆಲ್ಲ ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸುತ್ತಿರುವುದು ಹಾಸ್ಯಸ್ಪದ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದೇಬರುತ್ತದೆ ಎಂದರು.

loader