ಬೆಂಗಳೂರು :  ಕೋಲಾರದ ನೂತನ ಸಂಸದರಾಗಿ ಆಯ್ಕೆಯಾಗಿರುವ ಕಾಡುಗೋಡಿ ವಾರ್ಡ್‌ ಬಿಬಿಎಂಪಿ ಸದಸ್ಯ ಎಸ್‌.ಮುನಿಸ್ವಾಮಿ ಅವರು ಪಾಲಿಕೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರಾ ಅಥವಾ ಎರಡೂ ಸ್ಥಾನದಲ್ಲಿ ಮುಂದುವರೆಯುತ್ತಾರಾ ಎಂಬುದು ಕುತೂಹಲ ಕೆರಳಿಸಿದೆ.

ಬಿಬಿಎಂಪಿ ಸದಸ್ಯರಾಗಿದ್ದವರು ಸಂಸದರಾಗಿ ಆಯ್ಕೆಯಾಗಿರುವುದು ಬಿಬಿಎಂಪಿ ಇತಿಹಾಸದಲ್ಲಿ ಇದೇ ಮೊದಲು. ಪಾಲಿಕೆ ಸದಸ್ಯರಾಗಿರುವಾಗಲೇ ಸಂಸದರಾಗಿ ಆಯ್ಕೆಯಾದರೆ ಅಂತಹವರು ಪಾಲಿಕೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂಬ ಯಾವ ನಿಯಮವೂ ಇಲ್ಲದ ಕಾರಣ ಈ ವಿಚಾರದಲ್ಲಿ ಮುನಿಸ್ವಾಮಿ ಅವರ ನಿರ್ಧಾರವೇ ಅಂತಿಮವಾಗುತ್ತದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.

ಬಿಬಿಎಂಪಿ ಸದಸ್ಯರಾಗಿರುವವರು ಶಾಸಕ, ಸಂಸದ ಅಥವಾ ಬೇರಾವುದೇ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರೆ ಅವರು ಯಾವುದಾದರೂ ಒಂದು ಸ್ಥಾನ ಉಳಿಸಿಕೊಂಡು ಮತ್ತೊಂದಕ್ಕೆ ರಾಜೀನಾಮೆ ನೀಡಬೇಕೆಂಬ ಯಾವುದೇ ಸ್ಪಷ್ಟನಿಯಮ ಕೆಎಂಸಿ ಕಾಯ್ದೆಯಲ್ಲಿ ಇಲ್ಲ. ಹಾಗಾಗಿಯೇ ಈವರೆಗೆ ಪಾಲಿಕೆ ಸದಸ್ಯರಾಗಿದ್ದುಕೊಂಡೇ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದ ಕೆ.ಚಂದ್ರಶೇಖರ್‌, ನೆ.ಲ.ನರೇಂದ್ರಬಾಬು, ಮುನಿರತ್ನ, ಭೈರತಿ ಬಸವರಾಜು ಅವರು ಶಾಸಕರಾಗಿ ಆಯ್ಕೆಯಾದರೂ ಬಿಬಿಎಂಪಿ ಸದಸ್ಯ ಸ್ಥಾನಗಳಿಗೆ ಯಾರೂ ರಾಜೀನಾಮೆ ನೀಡಿರಲಿಲ್ಲ. ಪ್ರಸ್ತುತ ಬಸವಪುರ ವಾರ್ಡ್‌ ಸದಸ್ಯೆಯಾದ ಪೂರ್ಣಿಮಾ ಅವರು ಕಳೆದ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಹಿರಿಯೂರು ಶಾಸಕಿಯಾಗಿ ಆಯ್ಕೆಯಾದರೂ ಬಿಬಿಎಂಪಿ ಸದಸ್ಯೆಯಾಗಿಯೂ ಮುಂದುವರೆದಿದ್ದಾರೆ. ಆದರೆ, ಅವರಿಗೆ ಪಾಲಿಕೆಯಿಂದ ಯಾವುದೇ ಗೌರವಧನ, ಇತರೆ ಸೌಲಭ್ಯಗಳನ್ನು ನೀಡುತ್ತಿಲ್ಲ ಎನ್ನುತ್ತಾರೆ ಪಾಲಿಕೆ ಕೌನ್ಸಿಲ್‌ ಕಾರ್ಯದರ್ಶಿ ಪಲ್ಲವಿ ಅವರು.

ಶಾಸಕ, ಸಂಸದ ಸ್ಥಾನಗಳಿಗೆ ಆಯ್ಕೆಯಾದವರು ಪಾಲಿಕೆ ಸದಸ್ಯರಾಗಿಯೂ ಮುಂದುವರೆಯುವುದು ಸಮಂಜಸವಲ್ಲ. ಆದರೆ, ಅಂತಹವರು ಪಾಲಿಕೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂಬ ನಿಯಮವೇನೂ ಇಲ್ಲದ್ದರಿಂದ ಅವರ ನಿರ್ಧಾರ ಅಂತಿಮವಾಗುತ್ತದೆ. ಈ ಬಗ್ಗೆ ಇನ್ನಾದರೂ ಸರ್ಕಾರ ಒಂದು ಸ್ಪಷ್ಟನಿಯಮ ರೂಪಿಸಬೇಕು. ಒಂದು ಲಾಭದಾಯಕ ಹುದ್ದೆಗೆ ಆಯ್ಕೆಯಾದವರು ಮತ್ತೊಂದು ಹುದ್ದೆಯಲ್ಲಿ ಮುಂದುವರೆಯುವುದು ಸರಿಯಲ್ಲ ಎನ್ನುತ್ತಾರೆ ಪಾಲಿಕೆ ಹಿರಿಯ ಸದಸ್ಯರೊಬ್ಬರು.