ಬೆಂಗಳೂರು:  ರಾಜ್ಯದ ‘ನಂದಿನಿ’ ಹಾಲು ಇದೀಗ ರಾಜಧಾನಿ ದೆಹಲಿಗೂ ಲಗ್ಗೆ ಇಟ್ಟಿದೆ. ನ್ಯಾಷನಲ್‌ ಮಿಲ್ಕ್ ಗ್ರಿಡ್‌ ಕಾರ್ಯಕ್ರಮದಡಿ ದೆಹಲಿಯ ಮದರ್‌ ಡೇರಿ ಪ್ರತಿ ದಿನ ಸುಮಾರು 2 ಲಕ್ಷ ಲೀಟರ್‌ ನಂದಿನಿ ಹಾಲನ್ನು ಪೂರೈಸುವಂತೆ ಕರ್ನಾಟಕ ಹಾಲು ಮಹಾಮಂಡಳಿಗೆ(ಕೆಎಂಎಫ್‌) ಬೇಡಿಕೆ ಸಲ್ಲಿಸಿದೆ.

ಈ ಹಿನ್ನೆಲೆಯಲ್ಲಿ ಕೆಎಂಎಫ್‌ ಇತ್ತೀಚೆಗೆ ಪ್ರಯೋಗಾರ್ಥವಾಗಿ ಸುಮಾರು 43 ಸಾವಿರ ಲೀಟರ್‌ (1 ಲಕ್ಷ ಲೀ.ಗೆ ಸಮ) ಸಾಂದ್ರೀಕರಿಸಿದ ನಂದಿನಿ ಹಾಲನ್ನು ಆಂಧ್ರಪ್ರದೇಶದ ರೆಣಿಗುಂಟಾ ರೈಲ್ವೆ ನಿಲ್ದಾಣದಿಂದ ರೈಲ್ವೆ ಟ್ಯಾಂಕರ್‌ ಮೂಲಕ ಸರಬರಾಜು ಮಾಡಿದೆ. ದೆಹಲಿಯ ಮದರ್‌ ಡೇರಿಗೆ ಸರಬರಾಜು ಮಾಡಲಾದ ನಂದಿನಿ ಬ್ರಾಂಡ್‌ನ ಹಾಲು ಗುಣಮಟ್ಟದಲ್ಲಿ ಉತ್ತಮವಾಗಿದ್ದು, ಮುಂದಿನ ದಿನಗಳಲ್ಲಿ ಪ್ರತಿ ದಿನ ಎರಡು ಲಕ್ಷ ಲೀಟರ್‌ ಹಾಲು ಪೂರೈಸುವಂತೆ ಮದರ್‌ ಡೇರಿ ಬೇಡಿಕೆ ಸಲ್ಲಿಸಿದೆ. ಈ ಕುರಿತು ಶೀಘ್ರವೇ ಮದರ್‌ ಡೇರಿ ಮತ್ತು ಕೆಎಂಎಫ್‌ ನಡುವೆ ಒಪ್ಪಂದವಾಗುವ ಸಾಧ್ಯತೆ ಇದೆ ಎಂದು ಕೆಎಂಎಫ್‌ ಮಾರುಕಟ್ಟೆವಿಭಾಗದ ನಿರ್ದೇಶಕ ಮೃತ್ಯುಂಜಯ ಟಿ.ಕುಲಕರ್ಣಿ ಮಾಹಿತಿ ನೀಡಿದ್ದಾರೆ.

ಕೆಎಂಎಫ್‌ ಇದುವರೆಗೂ ಹೊರರಾಜ್ಯಕ್ಕೆ ಹಾಲು ಪೂರೈಸಿದ್ದು ತಿರುಪತಿಗೆ ಮಾತ್ರ ಆಗಿತ್ತು.

ಹಾಲು ಕ್ರೀಮ್‌ ರೂಪಕ್ಕೆ:

ಬೆಂಗಳೂರಿನಲ್ಲಿ ಹಾಲು ಸಾಂದ್ರೀಕರಿಸುವ ಯಂತ್ರವಿಲ್ಲ. ಹೀಗಾಗಿ ಮಂಡ್ಯ ಹಾಲು ಒಕ್ಕೂಟದಿಂದ 2 ಲಕ್ಷ ಲೀಟರ್‌ ಹಾಲು ತಿರುಪತಿ ಬಳಿಯ ಖಾಸಗಿ ಡೇರಿಯೊಂದಕ್ಕೆ ಮೂರು ಟ್ಯಾಂಕರ್‌ಗಳಲ್ಲಿ ಸರಬರಾಜು ಆಗುತ್ತದೆ. ಆ ಖಾಸಗಿ ಡೇರಿಯಲ್ಲಿ ಹಾಲನ್ನು ಸಾಂದ್ರೀಕರಿಸಿ ಕ್ರೀಮ್‌ ರೂಪಕ್ಕೆ ತರಲಾಗುತ್ತದೆ. ಈ ಕ್ರೀಮ್‌ ರೂಪದ ಹಾಲನ್ನು ರೆಣಿಗುಂಟಾ ರೈಲ್ವೆ ನಿಲ್ದಾಣದಿಂದ ದೆಹಲಿಗೆ ಸರಬರಾಜು ಮಾಡಲಾಗುತ್ತದೆ ಎಂದು ಕೆಎಂಎಫ್‌ ಸಹಾಯಕ ನಿರ್ದೇಶಕ(ಮಾರುಕಟ್ಟೆ) ರಘುನಂದನ್‌ ಅವರು ಮಾಹಿತಿ ನೀಡಿದರು.

ಸುಮಾರು 2,500 ಕಿ.ಮೀ ದೂರ ಹಾಲು ಸರಬರಾಜು ಮಾಡುವುದು ಸವಾಲಿನ ಕೆಲಸ. ಈ ಹಿನ್ನೆಲೆಯಲ್ಲಿ ಹಾಲಿನಲ್ಲಿರುವ ನೀರಿನ ಅಂಶವನ್ನು ತೆಗೆದು ಸಾಂದ್ರೀಕರಿಸಿ, ಎರಡು ಡಿಗ್ರಿ ಸೆಂಟಿಗ್ರೇಡ್‌ನಲ್ಲಿ ಹಾಲನ್ನು ಶೀತಲೀಕರಿಸಿ ದೆಹಲಿಗೆ ಸರಬರಾಜು ಮಾಡಬೇಕು. ಹಾಲನ್ನು ಮಂಡ್ಯ ಹಾಲು ಒಕ್ಕೂಟದಿಂದ ಆಂಧ್ರಪ್ರದೇಶದ ರೆಣಿಗುಂಟಾ ರೈಲ್ವೆ ನಿಲ್ದಾಣಕ್ಕೆ ಸಾಗಿಸಬೇಕು. ಅಲ್ಲಿಂದ ರೈಲ್ವೆ ಟ್ಯಾಂಕರ್‌ನಲ್ಲಿ ಕೇವಲ 36 ಗಂಟೆಗಳಲ್ಲಿ ಹಾಲು ದೆಹಲಿ ತಲುಪುತ್ತದೆ. ದೆಹಲಿಯಲ್ಲಿ ಈ ಹಾಲನ್ನು ಪಡೆದುಕೊಳ್ಳುವ ಮದರ್‌ ಡೇರಿ ಅದನ್ನು ಪ್ಯಾಕಿಂಗ್‌ ಮಾಡಿ ಗ್ರಾಹಕರಿಗೆ ಪೂರೈಸುತ್ತದೆ.

ಕೆಎಂಎಫ್‌ ಇದುವರೆಗೂ ಹೊರರಾಜ್ಯಕ್ಕೆ ಹಾಲು ಪೂರೈಸಿದ್ದು ತಿರುಪತಿಗೆ ಮಾತ್ರ. ಇದೀಗ ದೆಹಲಿಗೆ ನಂದಿನಿ ಹಾಲು ಸರಬರಾಜು ಮಾಡಲು ಮುಂದಾಗಿದೆ. ಇದರಿಂದ ರಾಜ್ಯದ ಹೈನುಗಾರರಿಗೆ ಉತ್ತಮ ಮಾರುಕಟ್ಟೆಸಿಕ್ಕಂತಾಗಿದೆ. ಹಾಲು ಸರಬರಾಜಿನ ಸಾಗಾಣಿಕೆ ವೆಚ್ಚವನ್ನು ಮದರ್‌ ಡೇರಿ ಭರಿಸಲಿದ್ದು, ಪ್ರತಿ ಲೀಟರ್‌ ಹಾಲಿಗೆ 27 ರು. ನಿಗದಿಪಡಿಸಲಾಗಿದೆ. ಈಗಾಗಲೇ ಖಾಸಗಿಯವರಿಗೂ 27 ರು.ನಂತೆ ಹಾಲು ನೀಡಲಾಗುತ್ತಿದೆ ಎಂದು ಕೆಎಂಎಫ್‌ ಮಾರುಕಟ್ಟೆವಿಭಾಗದ ಸಹಾಯಕ ನಿರ್ದೇಶಕ ರಘುನಂದನ್‌ ತಿಳಿಸಿದ್ದಾರೆ.

ದೆಹಲಿಯ ಮದರ್‌ ಡೇರಿ ಸಂಸ್ಥೆ ರಾಜಧಾನಿಯಲ್ಲಿ ಹಸುವಿನ ಹಾಲನ್ನು ಚಿಲ್ಲರೆ ಪೊಟ್ಟಣ(ಸ್ಯಾಚೆ) ರೂಪದಲ್ಲಿ ಮಾರಾಟ ಮಾಡಲು ಪ್ರಾರಂಭಿಸಿದೆ. ದೆಹಲಿ ಸುತ್ತಮುತ್ತ ಗುಣಮಟ್ಟದ ಹಸುವಿನ ಹಾಲು ದೊರಕುತ್ತಿಲ್ಲ. ಕರ್ನಾಟಕದಲ್ಲಿ ಗುಣಮಟ್ಟದ ಹಾಲು ಸಿಗುತ್ತಿರುವುದರಿಂದ ಕೆಎಂಎಫ್‌ಗೆ ಬೇಡಿಕೆ ಬಂದಿದೆ. 1990ರಲ್ಲಿ ಮದರ್‌ ಡೇರಿ ಸಂಸ್ಥೆ ರೈಲು ಟ್ಯಾಂಕರ್‌ಗಳ ಮೂಲಕ ಪಶ್ಚಿಮ ಬಂಗಾಳದ ಕೋಲ್ಕತಾ ನಗರಕ್ಕೆ ಹಾಲು ಸರಬರಾಜು ಮಾಡುತ್ತಿತ್ತು. ಆದರೆ ಕಳೆದ 25 ವರ್ಷಗಳಿಂದ ಕಾರಣಾಂತರಗಳಿಂದ ಹಾಲು ಸರಬರಾಜು ನಿಲ್ಲಿಸಿತ್ತು ಎಂದು ಕೆಎಂಎಫ್‌ ತಿಳಿಸಿದೆ.

ಹಾಲನ್ನು ಕ್ರೀಮ್‌ ರೂಪಕ್ಕೆ ತಂದು ಬಳಿಕ ಪೂರೈಕೆ

ಬೆಂಗಳೂರಿನಲ್ಲಿ ಹಾಲು ಸಾಂದ್ರೀಕರಿಸುವ ಯಂತ್ರವಿಲ್ಲ. ಹೀಗಾಗಿ ಮಂಡ್ಯ ಹಾಲು ಒಕ್ಕೂಟದಿಂದ 2 ಲಕ್ಷ ಲೀಟರ್‌ ಹಾಲು ತಿರುಪತಿ ಬಳಿಯ ಖಾಸಗಿ ಡೇರಿಯೊಂದಕ್ಕೆ ಮೂರು ಟ್ಯಾಂಕರ್‌ಗಳಲ್ಲಿ ಸರಬರಾಜು ಆಗುತ್ತದೆ. ಆ ಖಾಸಗಿ ಡೇರಿಯಲ್ಲಿ ಹಾಲನ್ನು ಸಾಂದ್ರೀಕರಿಸಿ ಕ್ರೀಮ್‌ ರೂಪಕ್ಕೆ ತರಲಾಗುತ್ತದೆ. ಈ ಕ್ರೀಮ್‌ ರೂಪದ ಹಾಲನ್ನು ರೆಣಿಗುಂಟಾ ರೈಲ್ವೆ ನಿಲ್ದಾಣದಿಂದ ದೆಹಲಿಗೆ ಸರಬರಾಜು ಮಾಡಲಾಗುತ್ತದೆ ಎಂದು ಕೆಎಂಎಫ್‌ ಸಹಾಯಕ ನಿರ್ದೇಶಕ(ಮಾರುಕಟ್ಟೆ) ರಘುನಂದನ್‌ ಅವರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.