Asianet Suvarna News Asianet Suvarna News

ಜಾರ್ಜ್ ಕಂಪನಿಗೆ ಬಿಡಿಎ ಕಾಂಪ್ಲೆಕ್ಸ್

  • 5 ಸಾವಿರ ಕೋಟಿ ಮೌಲ್ಯದ 7 ಬಿಡಿಎ ಕಾಂಪ್ಲೆಕ್ಸ್ 60 ವರ್ಷ ಗುತ್ತಿಗೆ ನೀಡಲು ಸಿದ್ಧತೆ: ಬಿಜೆಪಿ
  • ಸಿಎಂ, ಕೆ.ಜೆ. ಜಾರ್ಜ್ ವಿರುದ್ಧ ಲೋಕಾಯುಕ್ತ, ಎಸಿಬಿ, ಬಿಎಂಟಿಎಫ್, ಕೋರ್ಟಿಗೆ ದೂರು
KJ George Grabbing BDA Complexes Says BJP Leader

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಕೆ.ಜೆ. ಜಾರ್ಜ್ ಅವ್ಯವಹಾರಗಳನ್ನು ಬಹಿರಂಗ ಪಡಿಸುತ್ತಿರುವ ಬಿಜೆಪಿ ಬೆಂಗಳೂರು ನಗರ ವಕ್ತಾರ ಎನ್.ಆರ್. ರಮೇಶ್, ಇದೀಗ ಮತ್ತೆ ಎರಡು ಅಕ್ರಮವನ್ನು ಬಯಲುಗೊಳಿಸಿದ್ದು, ಲೋಕಾಯುಕ್ತ, ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಿಎಂಟಿಎಫ್, ಭೂ ಕಬಳಿಕೆ ನಿಗ್ರಹ ವಿಶೇಷ ನ್ಯಾಯಾಲಯ ಮತ್ತು ಎಸಿಎಂಎಂ ನ್ಯಾಯಾಲಯಕ್ಕೆ ದೂರು ದಾಖಲಿಸಿದ್ದಾರೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮಾಲೀಕತ್ವದ ಏಳು ವಾಣಿಜ್ಯ ಸಂಕೀರ್ಣಗಳನ್ನು ವಾಮಮಾರ್ಗದಲ್ಲಿ ಕಬಳಿಸುವ ಹುನ್ನಾರ ಮತ್ತು ರಾಜಕಾಲುವೆಗಳ ಹೂಳೆತ್ತುವ ಯಂತ್ರದ ಖರೀದಿಯಲ್ಲಿ ನಡೆದಿರುವ ಕೋಟ್ಯಂತರ ರುಪಾಯಿ ಅಕ್ರಮ ನಡೆಸಲಾಗಿದೆ ಎಂದು ಎನ್.ಆರ್. ರಮೇಶ್ ಆರೋಪಿಸಿದ್ದಾರೆ.

ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಎರಡು ಅಕ್ರಮಗಳ ಕುರಿತು ದಾಖಲೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಸಚಿವ ಕೆ.ಜೆ.ಜಾರ್ಜ್ ಮುಖ್ಯ ಪಾಲುದಾರಿಕೆಯ ಎಂಬೆಸಿ ಸಂಸ್ಥೆಗೆ ₹5000 ಕೋಟಿ ಮೌಲ್ಯದ ಏಳು ವಾಣಿಜ್ಯ ಸಂಕೀರ್ಣಗಳನ್ನು ಮರು ಅಭಿವೃದ್ಧಿ ಮತ್ತು ನಿರ್ಮಾಣದ ಹೆಸರಲ್ಲಿ 60 ವರ್ಷಗಳ ಗುತ್ತಿಗೆ ನೀಡಲು ಸಿದ್ಧತೆ ನಡೆಸಲಾಗಿದೆ ಮತ್ತು ರಾಜಕಾಲುವೆಗಳಲ್ಲಿ ತುಂಬಿರುವ ಹೂಳನ್ನೆತ್ತಲು ಮೂರು ರೊಬೋಟಿಕ್ ಮಲ್ಟಿಪರ್ಪಸ್ ಎಕ್ಸವೇಟರ್‌ಗಳ ಖರೀದಿಯಲ್ಲಿ ಸಿದ್ದರಾಮಯ್ಯ ಮತ್ತು ಜಾರ್ಜ್ ಅವರು ₹18 ಕೋಟಿ ಲೂಟಿ ಮಾಡಿದ್ದಾರೆ ಎಂದು ದೂರಿದರು.

ಮುಖ್ಯಮಂತ್ರಿ ಹಾಗೂ ಸಚಿವರು ಮಾತ್ರವಲ್ಲದೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಹಿಂದಿನ ಆಯುಕ್ತರಾಗಿದ್ದ ಶ್ಯಾಂಭಟ್, ರಾಜ್‌ಕುಮಾರ್ ಖತ್ರಿ ಮತ್ತು ಎಂಜಿನಿಯರ್ ಸದಸ್ಯರಾದ ಪಿ.ಎನ್. ನಾಯಕ್, ರವೀಂದ್ರ ಬಾಬು ಅವರ ವಿರುದ್ಧವು ದೂರು ದಾಖಲಿಸಲಾಗಿದೆ ಎಂದು ಅವರು ಹೇಳಿದರು.

ಪಿಪಿಪಿ ಯೋಜನೆಯಡಿಯಲ್ಲಿ ಬಿಡಿಎ ಮಾಲೀಕತ್ವದ ಎಚ್‌ಎಸ್‌ಆರ್ ಬಡಾವಣೆ, ಆರ್.ಟಿ.ನಗರ, ಆಸ್ಟಿನ್ ಟೌನ್, ಕೋರಮಂಗಲ, ವಿಜಯನಗರ, ಸದಾಶಿವನಗರ ಮತ್ತು ಇಂದಿರಾನಗರದಲ್ಲಿನ ಬಿಡಿಎ ವಾಣಿಜ್ಯ ಸಂಕೀರ್ಣಗಳನ್ನು ಸಚಿವ ಜಾರ್ಜ್ ಮುಖ್ಯ ಪಾಲುದಾರಿಕೆಯ ಎಂಬ್ಬೆಸಿ ಸಂಸ್ಥೆಗೆ ಒಪ್ಪಿಸಲು ಸಿದ್ಧತೆಗಳು ನಡೆದಿವೆ. ಮುಂದೆ ನಡೆಯುವ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿಗಳು ಇದಕ್ಕೆ ಸಹಮತ ನೀಡುವ ಸಾಧ್ಯತೆ ಇದ್ದು, ಈ ಸಂಬಂಧ ಈಗಾಗಲೇ ಷಡ್ಯಂತ್ರ ರೂಪಿಸಲಾಗಿದೆ ಎಂದು ಹೇಳಿದರು.

ಯಾರ ಗಮನಕ್ಕೂ ಬಾರದಂತೆ ಏಳು ಬಿಡಿಎ ವಾಣಿಜ್ಯ ಸಂಕೀರ್ಣಗಳನ್ನು ಸಚಿವರ ಸಂಸ್ಥೆಯ ಮಡಿಲಿಗೆ ಹಾಕಲು ಸಿದ್ದರಾಮಯ್ಯ ನೇತೃತ್ವದ ಭ್ರಷ್ಟ ಸರ್ಕಾರ ಹವಣಿಸುತ್ತಿದೆ. ಎಂಬೆಸಿ ಸಂಸ್ಥೆ ಹೊರತುಪಡಿಸಿ ಬೇರೆಯಾವುದೇ ಸಂಸ್ಥೆಯು ಸಹ ಟೆಂಡರ್‌ನಲ್ಲಿ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ಕಠಿಣ ಷರತ್ತುಗಳನ್ನು ವಿಧಿಸಲಾಗಿದೆ. ಅರ್ಹತಾ ಮಾನದಂಡದ ಹೆಸರಲ್ಲಿ ಷರತ್ತುಗಳನ್ನು ಹಾಕಲಾಗಿದೆ.

ಜಂಟಿ ಸಹಭಾಗಿತ್ವ ಹೆಸರಲ್ಲಿ ನೀಡಲಾಗಿರುವ ಯಾವುದೇ ಒಂದು ಸ್ವತ್ತು ಸಹ ಗುತ್ತಿಗೆ ಅವಧಿ ಮುಗಿದ ಬಳಿಕ ಬಿಡಿಎಗಾಗಲಿ, ಬಿಬಿಎಂಪಿಗಾಗಲಿ ಹಿಂತಿರುಗಿರುವ ಉದಾಹಣೆಗಳೇ ಇಲ್ಲ. ಏಳು ವಾಣಿಜ್ಯ ಸಂಕೀರ್ಣಗಳ ಪೈಕಿ ಇಂದಿರಾನಗರ ವಾಣಿಜ್ಯ ಸಂಕೀರ್ಣಕ್ಕೆ ಸಂಬಂಧಪಟ್ಟಂತೆ ಟೆಂಡರ್ ಅಧಿಸೂಚನೆಯನ್ನು 2016ರಲ್ಲಿ ಹೊರಡಿಸಿ ಬಿಡಿಎ ಆಡಳಿತ ಮಂಡಳಿಯು ಟೆಂಡರ್ ಬಿಡ್ ಅನ್ನು ತೆರೆದಿದೆ. ಅಲ್ಲದೇ, ಇನ್ನುಳಿದ ಆರು ವಾಣಿಜ್ಯ ಸಂಕೀರ್ಣಗಳನ್ನು ಮರು ಅಭಿವೃದ್ಧಿ ಪಡಿಸುವ ಕಾರ್ಯದ ಟೆಂಡರ್‌ನ್ನು 2017ರಲ್ಲಿ ಆಹ್ವಾನಿಸಿರುವುದು ಬೆಳಕಿಗೆ ಬಂದಿದೆ ಎಂದು ವಿವರಿಸಿದರು.

ಟೆಂಡರ್ ಪ್ರಕ್ರಿಯೆಗಳು ಪೂರ್ಣಗೊಂಡು ತಾಂತ್ರಿಕ ಬಿಡ್ ಮತ್ತು ಹಣಕಾಸು ಬಿಡ್‌ಗಳನ್ನು ತೆರೆಯಬೇಕಿದೆ. ಅದನ್ನು ಸಹ ತೆರದು ಕಾರ್ಯಾದೇಶ ಪತ್ರಗಳನ್ನು ನೀಡಲು ಸರ್ಕಾರ ಮುಂದಾಗಿದೆ. ಸಾರ್ವಜನಿಕರ ಗಮನಕ್ಕೆ ಬಾರದೆ ಇಷ್ಟೆಲ್ಲಾ ನಡೆಸಿರುವ ನಡೆಸಿರುವ ಉದ್ದೇಶವೇನು ಎಂಬುದನ್ನು ಬಹಿರಂಗ ಪಡಿಸಬೇಕು. ಅಲ್ಲದೇ, ಇದರಲ್ಲಿ ಯಾವುದೇ ಮೋಸ ನಡೆದಿಲ್ಲ ಎನ್ನುವುದಾದರೆ ಮುಖ್ಯಮಂತ್ರಿಗಳು ಪ್ರಕರಣದ ತನಿಖೆಗಾಗಿ ಸಿಬಿಐಗೆ ವಹಿಸಬೇಕು ಎಂದು ಎನ್.ಆರ್. ರಮೇಶ್ ಅವರು ಆಗ್ರಹಿಸಿದರು.

Follow Us:
Download App:
  • android
  • ios