ಮಾಲೂರು[ಜೂ.24]: ಕೇಂದ್ರದ ಮಾಜಿ ವೀರಪ್ಪ ಮೊಯ್ಲಿ ಆಯ್ತು, ಈಗ ಕೋಲಾರದ ಮಾಜಿ ಸಂಸದ ಎಚ್‌.ಮುನಿಯಪ್ಪ ಕೂಡ ಮೈತ್ರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೈತ್ರಿ ಧರ್ಮದಡಿ ಲೋಕಸಭೆ ಚುನಾವಣೆ ಎದುರಿಸಿದ್ದರಿಂದಲೇ ರಾಜ್ಯದ ಇತಿಹಾಸದಲ್ಲಿ ಕಾಂಗ್ರೆಸ್‌ ಅತ್ಯಂತ ಕಳಪೆ ಸಾಧನೆ ಮಾಡಬೇಕಾಯಿತು, ಜೆಡಿಎಸ್‌ ಕೂಡ ನೆಲಕಚ್ಚಬೇಕಾಯಿತು ಎಂದು ಮುನಿಯಪ್ಪ ಹೇಳಿದ್ದಾರೆ.

ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ಭಾನುವಾರ ಪುರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮೈತ್ರಿ ಪಕ್ಷದ ವಿಜೇತ ಅಭ್ಯರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಮೈತ್ರಿ ಧರ್ಮದಡಿ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸಿರುವುದರಿಂದ ಕಾಂಗ್ರೆಸ್‌ ಮಾತ್ರ ಅಲ್ಲ, ಜೆಡಿಎಸ್‌ ಸಹ ನೆಲಕಚ್ಚಿದೆ. ಈ ಬಗ್ಗೆ ಹೈಕಮಾಂಡ್‌ ಯೋಚಿಸಬೇಕಿದೆ ಎಂದರು.

ಜನರ ಭಾವನೆಗಳಿಗೆ ಸ್ಪಂದಿಸುತ್ತಿಲ್ಲ ಮೈತ್ರಿ ಸರಕಾರ: ಮಾಜಿ ಸಿಎಂ

ಹೊಂದಾಣಿಕೆ ರಾಜಕಾರಣ ಚುನಾವಣೆಯಲ್ಲಿ ಬೇಡ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ನಾನು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಟ್ಟಿದ್ದೆವು. ಒಂದು ವೇಳೆ ತ್ರೀಕೋನ ಸ್ಪರ್ಧೆ ನಡೆದಿದ್ದರೆ ಲೋಕಸಭೆಯಲ್ಲಿ ಕಾಂಗ್ರೆಸ್‌ 15, ಜೆಡಿಎಸ್‌ ಕನಿಷ್ಠ ಮೂರು ಸ್ಥಾನಗಳನ್ನು ಗೆಲ್ಲುತ್ತಿತ್ತು ಎಂದು ಅಭಿಪ್ರಾಯಪಟ್ಟರು.

ಕಾರ್ಯಕರ್ತರು ಒಂದಾಗಲಿಲ್ಲ: ಸರ್ಕಾರ ರಚನೆಗೆ ಒಂದಾಗಿರುವ ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳು ಪರಸ್ಪರ ಸ್ಪರ್ಧೆ ನಡೆಸಿದರೆ ತಪ್ಪು ಸಂದೇಶ ರವಾನೆಯಾಗಲಿದೆ ಎಂಬ ಕಾರಣಕ್ಕೆ ಟಿಕೆಟ್‌ ಹಂಚಿಕೊಂಡು ಚುನಾವಣೆಗೆ ಹೋಗಿ ಎಂದು ಹೈಕಮಾಂಡ್‌ ಆದೇಶಿಸಿತ್ತು. ಆ ಆದೇಶಕ್ಕೆ ನಾವೆಲ್ಲರೂ ತಲೆ ಬಾಗಬೇಕಾಯಿತು. ಬಯಲುಸೀಮೆಯಲ್ಲಿ 35 ವರ್ಷಗಳಿಂದ ಪ್ರತಿ ಚುನಾವಣೆಗಳಲ್ಲಿ ಪರಸ್ಪರ ಪ್ರತಿಸ್ಪರ್ಧಿಯಂತಿದ್ದ ಜೆಡಿಎಸ್‌-ಕಾಂಗ್ರೆಸ್‌ ಮುಖಂಡರು ಮೈತ್ರಿ ಧರ್ಮದಡಿ ಒಂದಾದರೂ ಕಾರ‍್ಯಕರ್ತರು-ಮತದಾರರನ್ನು ಒಂದಾಗಿಸಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮೈತ್ರಿ ಬೇಡ, ಫ್ರೆಂಡ್ಲಿ ಫೈಟ್‌ ಸಾಕು: ಮುಂಬರುವ ಚುನಾವಣೆಗಳಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಬೇಡ, ಎರಡೂ ಪಕ್ಷಗಳು ಅಭ್ಯರ್ಥಿಗಳನ್ನು ಹಾಕುವ ಮೂಲಕ ಫ್ರೆಂಡ್ಲಿ ಫೈಟ್‌ ಮಾಡಬೇಕು ಎಂದು ಇದೇ ವೇಳೆ ಮುನಿಯಪ್ಪ ಆಗ್ರಹಿಸಿದರು. ಜತೆಗೆ ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ಬೇಡ ಎಂದಿರುವ ಮುನಿಯಪ್ಪ, ಅನಿವಾರ್ಯ ಕಾರಣಗಳಿಂದ ಹೈಕಮಾಂಡ್‌ ತೆಗೆದುಕೊಂಡಿರುವ ನಿರ್ಣಯಕ್ಕೆ ನಾವೆಲ್ಲರೂ ತಲೆ ಬಾಗಬೇಕು, ರಾಜ್ಯದಲ್ಲಿ ಮುಂದಿನ ನಾಲ್ಕು ವರ್ಷ ಮೈತ್ರಿ ಸರ್ಕಾರವನ್ನು ಮುನ್ನಡೆಸಿಕೊಡು ಹೋಗಬೇಕು ಎಂದರು.

ಮೈತ್ರಿ ಇಲ್ಲದಲ್ಲೂ ನಾವು ಸೋತಿದ್ದೇವೆ

ರಾಜ್ಯದಲ್ಲಿ ಮೈತ್ರಿಯಿಂದಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಯಿತು ಎಂಬ ವೀರಪ್ಪ ಮೊಯ್ಲಿ ಹೇಳಿಕೆ ಅವರ ವೈಯಕ್ತಿಕ. ಅದಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ, ಅಂತಹ ಹೇಳಿಕೆ ಸರಿಯಲ್ಲ. ಯಾಕೆಂದರೆ, ಕಾಂಗ್ರೆಸ್‌ಗೆ ರಾಜಸ್ಥಾನ, ಮಧ್ಯಪ್ರದೇಶದಲ್ಲೂ ಹಿನ್ನಡೆ ಆಗಿದೆ. ಅಲ್ಲಿ ಮೈತ್ರಿ ಇರಲಿಲ್ಲವಲ್ಲ?

- ಎಂ.ಬಿ.ಪಾಟೀಲ್‌, ಗೃಹ ಸಚಿವ