ಜನರ ಭಾವನೆಗಳಿಗೆ ಸ್ಪಂದಿಸುತ್ತಿಲ್ಲ ಮೈತ್ರಿ ಸರಕಾರ: ಮಾಜಿ ಸಿಎಂ
ಲೋಕ ಸಮರದಲ್ಲಿ ಅತಿಯಾದ ಆತ್ಮವಿಶ್ವಾಸದೊಂದಿಗೆ ಕಾಂಗ್ರೆಸ್-ಜೆಡಿಎಸ್ ಮಾತ್ರ ಕಣಕ್ಕಿಳಿದಿತ್ತು. ಆದರೆ, ಬಂದ ಫಲಿತಾಂಶ ಮಾತ್ರ ಕಲ್ಪನೆಗೂ ಮೀರಿದ್ದು. ಇದೀಗ ಸೋಲಿಗೆ ಮೈತ್ರಿ ಪಕ್ಷಗಳು ಕಾರಣ ಹುಡುಕುತ್ತಿವೆ. ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದ್ದೇನು?
ಚಿಕ್ಕಬಳ್ಳಾಪುರ (ಜೂ.22): ಲೋಕ ಸಮರದಲ್ಲಿ ಕರ್ನಾಟಕದಲ್ಲಿ ಮೈತ್ರಿ ಮಾಡಿಕೊಂಡ ಕಾಂಗ್ರೆಸ್-ಜೆಡಿಎಸ್, ಫಲಿತಾಂಶದಲ್ಲಿ ಮಾತ್ರ ಮೈತ್ರಿ ಧರ್ಮವನ್ನು ಸ್ಪಷ್ಟವಾಗಿ ಪಾಲಿಸಿದಂತಿತ್ತು. ಎರಡೂ ಪಕ್ಷಗಳಿಗೂ ತಲಾ ಒಂದೊಂದು ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲಲು ಸಾಧ್ಯವಾಗಿದ್ದು, ವಿಜಯಲಕ್ಷ್ಮಿ ಕೈ ಹಿಡಿಯದ್ದಕ್ಕೆ ಕಾರಣವೇನೆಂಬ ಪರಾಮರ್ಶೆ ಎರಡು ಪಕ್ಷಗಳಿಂದಲೂ ನಡೆಯುತ್ತಿದೆ.
ಚಿಕ್ಕಬಳ್ಳಾಪುರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಸಿಎಂ ವೀರಪ್ಪ ಮೊಯ್ಲಿ ಸೋಲಿಗೆ ಮೈತ್ರಿ ಹಾಗೂ ಇವಿಎಂ ವೈಫಲ್ಯವೆಂದು ಹೇಳಿದ್ದಾರೆ. ಬಿಜೆಪಿ ಅಭ್ಯರ್ಥಿ ಬಚ್ಚೇ ಗೌಡ ಅವರ ವಿರುದ್ಧ ಮೊಯ್ಲಿ ಸೋತಿದ್ದಾರೆ.
ಹೀಗ್ ಮಾಡಿ ಸರಕಾರ ಉಳಿಸಬೇಕಂತೆ: ಸಿದ್ದುಗೆ HDD ಕಿವಿಮಾತು
'ಮೈತ್ರಿ ಇಲ್ಲವಾಗಿದ್ರೆ ರಾಜ್ಯದಲ್ಲಿ 15 ಸೀಟುಗಳನ್ನು ಗೆಲ್ಲುತ್ತಿದ್ದೆವು. ಸಮ್ಮಿಶ್ರ ಸರ್ಕಾರ ಜನರ ಭಾವನೆಗಳಿಗೆ ಸ್ಪಂದಿಸದಿರುವುದೂ ಸೋಲಿಗೆ ಕಾರಣ. ಪ್ರಸ್ತುತ ದೇಶದಲ್ಲಿ ಇವಿಎಂ ಮೇಲೆ ನಂಬಿಕೆ ಇಲ್ಲದಂತಾಗಿದೆ. ಇವಿಎಂಗಳ ಮೇಲೆ ಇರುವ ಅನುಮಾನ ನಿವಾರಿಸಲು ಸಂಶೋಧನೆ ಅಗತ್ಯ. ಸರ್ಕಾರ ಉಳಿಸಿಕೊಳ್ಳಲು ಕೇವಲ ಹರಸಾಹಸ ಅಷ್ಟೇ ಅಲ್ಲ, ಪಕ್ಷಗಳ ಸಂಘಟನೆಯೂ ಅಗತ್ಯ. ಲೋಕಸಭಾ ಚುನಾವಣೆ ಮೈತ್ರಿ ಸೋಲು ಆತ್ಮಾವಲೋಕನವಿನ್ನೂ ಆಗಿಲ್ಲ,' ಎಂದರು.
ಗೌಡರು ಬಾಲ್ ಎಸೆಯುತ್ತಿರುತ್ತಾರೆ, ಚಿಂತೆ ಬೇಡ
'ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರು ಹೇಗೆ ಬೇಕಾದರೂ ಮಾತು ಬದಲಾಯಿಸ್ತಾರೆ. ಯಾವ ಶಾಸಕರೂ ಚುನಾವಣೆಗೆ ಹೋಗಲು ರೆಡಿ ಇಲ್ಲ. ಮಧ್ಯಂತರ ಚುನಾವಣೆ ಎದುರಾದರೆ ಜನರು ಸಹಿಸಿಕೊಳ್ಳುವುದಿಲ್ಲ. ಹಣ್ಣಾಗಿರುವ ಮರವನ್ನು ಬಿಜೆಪಿಯವರು ಸದಾ ಅಲ್ಲಾಡಿಸುತ್ತಿದ್ದಾರೆ. ಯಡಿಯೂರಪ್ಪ ಮತ್ತೆ ಸಿಎಂ ಆಗಲು ಹಗಲುಗನಸು ಕಾಣುತ್ತಿದ್ದಾರೆ. ಆದರೆ ಅದೂ ಈಡೇರಲ್ಲ,' ಎಂದು ಸುದ್ದಿಗೋಷ್ಠಿಯಲ್ಲಿ ಅವರು ವಿಶ್ವಾಸ ವ್ಯಕ್ತಪಡಿಸಿರು.