ಮೊಬೈಲ್ ಟವರ್ ಹಾಗೂ ಯುವತಿಯ ಹೇಳಿಕೆ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಯ ಪತ್ತೆಗಾಗಿ ಎಸ್’ಪಿ ರವಿಕುಮಾರ್ ನೇತೃತ್ವದಲ್ಲಿ ಎರಡು ತಂಡ ರಚನೆ ಮಾಡಲಾಗಿದೆ.

ಬೆಂಗಳೂರು(ಜ. 07): ಹೆಚ್’ಬಿಆರ್ ಲೇಔಟ್ ಅಥವಾ ಕೆ.ಜಿ.ಹಳ್ಳಿಯ ಯುವತಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಯುವತಿ ಪೊಲೀಸರ ಬಳಿ ಗೊಂದಲಕಾರಿ ಹೇಳಿಕೆ ನೀಡಿದ್ದಾಳೆ. ಮೊದಲ ಹೇಳಿಕೆಯಲ್ಲಿ ಯುವಕ ತನ್ನನ್ನು ಅಡ್ಡಗಟ್ಟಿ ನಾಲಿಗೆ ಮತ್ತು ತುಟಿ ಕಚ್ಚಿದ ಎಂದಿದ್ದ ಯುವತಿ ಈಗ ಹೇಳಿಕೆ ಬದಲಿಸಿದ್ದಾಳೆ. ಯುವಕನೊಬ್ಬ ನನ್ನ ಕೈಹಿಡಿದು ಎಳೆದನಷ್ಟೇ... ನಾಲಗೆಯನ್ನು ನಾನೇ ಕಚ್ಚಿಕೊಂಡೆ ಎಂದು ಮಹಿಳಾ ಪಿಎಸ್’ಐ ಎದುರು ಹೇಳಿಕೆ ನೀಡಿರುವ ಆಕೆ, ತಾನು ಮದುವೆಯಾಗುವ ಹುಡುಗಿಯಾಗಿದ್ದು ಹೆಚ್ಚು ಪ್ರಶ್ನೆ ಕೇಳಬೇಡಿರೆಂದು ಮಾಧ್ಯಮದವರಿಗೆ ವಿನಂತಿ ಮಾಡಿಕೊಂಡಿದ್ದಾಳೆ.

ಪ್ರತಿಷ್ಠಿತ ಬಡಾವಣೆಯೊಂದರ ಸೂಪರ್’ಮಾರ್ಕೆಟ್’ನಲ್ಲಿ ಕೆಲಸ ಮಾಡುವ ಈ ಯುವತಿ ಶುಕ್ರವಾರ ಮುಂಜಾನೆ ಬುರ್ಖಾ ತೊಟ್ಟು ಕೆಲಸಕ್ಕೆ ಹೋಗುತ್ತಿರುವ ವೇಳೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾದಳೆನ್ನಲಾಗಿದೆ. ಈಕೆಯನ್ನು ಹಿಂಬಾಲಿಸಿ ಬಂದ ಯುವಕನೊಬ್ಬ ಈಕೆಯ ಮೇಲೆ ಲೈಂಗಿಕ ಹಲ್ಲೆಗೆ ಯತ್ನಿಸಿದ್ದಾನೆ. ಆಗ ಯುವತಿಗೆ ಕಾಲು, ಕೈ ಮತ್ತು ತುಟಿಗೆ ಗಾಯವಾಗಿದೆ. ಸ್ಥಳದಲ್ಲಿದ್ದ ನಾಯಿಗಳು ಬೊಗಳಲು ಆರಂಭಿಸಿದ ಬಳಿಕ ಸ್ಥಳೀಯರು ರಕ್ಷಣೆಗೆ ಧಾವಿಸುತ್ತಾರೆ. ಆದರೆ ಅಷ್ಟರಲ್ಲಿ ಯುವಕ ಅಲ್ಲಿಂದ ಕಾಲ್ಕೀಳುತ್ತಾನೆ. ಯುವಕ ತನ್ನ ತುಟಿ ಮತ್ತು ನಾಲಗೆಯನ್ನು ಕಚ್ಚಿದ ಎಂದು ಯುವತಿ ಪೊಲೀಸ್ ಠಾಣೆಯಲ್ಲಿ ನಿನ್ನೆ ದೂರು ನೀಡಿರುತ್ತಾಳೆ. ಆದರೆ, ಇಂದು ಆಕೆ ಹೇಳಿಕೆ ಬದಲಿಸಿರುವುದು ಕುತೂಹಲ ಮೂಡಿಸಿದೆ.

ಇದೇ ವೇಳೆ, ಮೊಬೈಲ್ ಟವರ್ ಹಾಗೂ ಯುವತಿಯ ಹೇಳಿಕೆ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಯ ಪತ್ತೆಗಾಗಿ ಎಸ್’ಪಿ ರವಿಕುಮಾರ್ ನೇತೃತ್ವದಲ್ಲಿ ಎರಡು ತಂಡ ರಚನೆ ಮಾಡಲಾಗಿದೆ. ಬೆಂಗಳೂರಿನಲ್ಲಿ ನಡೆದಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖೆಯಲ್ಲಿ ಖುದ್ದು ಮುತುವರ್ಜಿ ತೋರಿರುವ ನೂತನ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರು ಈ ಪ್ರಕರಣ ಸಂಬಂಧ ಎಸ್’ಪಿ ರವಿಕುಮಾರ್ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆನ್ನಲಾಗಿದೆ.