ಹಸಿವೆಂದು ಅಕ್ಕಿ ಕದ್ದ ಆದಿವಾಸಿ ಜೊತೆ ಸೆಲ್ಫಿ ತೆಗೆದು ಹೊಡೆದು ಕೊಂದರು

First Published 24, Feb 2018, 8:50 AM IST
Kerala Tribal man Beaten to Death after being Accused of Theft
Highlights

ಹಸಿವೆಂದು ಅಂಗಡಿಯಲ್ಲಿ ಅಕ್ಕಿ ಕದ್ದ ಆದಿವಾಸಿ ಸಮುದಾಯದ ವ್ಯಕ್ತಿಯೊಬ್ಬನನ್ನು ಕೆಲ ವ್ಯಕ್ತಿಗಳು ಬಡಿದು ಕೊಂದ ಭೀಕರ ಘಟನೆ ಕೇರಳದ ಪಾಲಕ್ಕಾಡ್‌ ಜಿಲ್ಲೆಯ ಅಟ್ಟಪ್ಪಾಡಿಯಲ್ಲಿ ನಡೆದಿದೆ.

ತಿರುವನಂತಪುರ: ಹಸಿವೆಂದು ಅಂಗಡಿಯಲ್ಲಿ ಅಕ್ಕಿ ಕದ್ದ ಆದಿವಾಸಿ ಸಮುದಾಯದ ವ್ಯಕ್ತಿಯೊಬ್ಬನನ್ನು ಕೆಲ ವ್ಯಕ್ತಿಗಳು ಬಡಿದು ಕೊಂದ ಭೀಕರ ಘಟನೆ ಕೇರಳದ ಪಾಲಕ್ಕಾಡ್‌ ಜಿಲ್ಲೆಯ ಅಟ್ಟಪ್ಪಾಡಿಯಲ್ಲಿ ನಡೆದಿದೆ.

ಇಷ್ಟುಸಾಲದೆಂಬಂತೆ ಆತನ ಮೇಲೆ ಹಲ್ಲೆ ನಡೆಸುವ ವೇಳೆ ಕೆಲ ವ್ಯಕ್ತಿಗಳು ಹಲ್ಲೆಗೊಳಗಾದ ವ್ಯಕ್ತಿ ಕಾಣುವಂತೆ ಸೆಲ್ಫಿ ತೆಗೆದುಕೊಂಡು ವಿಕೃತ ಮನಸ್ಥಿತಿ ಮೆರೆದಿದ್ದಾರೆ. ಈ ಘಟನೆಗೆ ರಾಜ್ಯದಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿದೆ. ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದೆ.

ಏನಾಯ್ತು?: ಮಧು (27) ಎಂಬ ಆದಿ ವಾಸಿ ಸಮುದಾಯದ ವ್ಯಕ್ತಿ ಗುರುವಾರ ಅಂಗಡಿಯೊಂದರಲ್ಲಿ 200 ರು. ಬೆಲೆಬಾಳುವ ಅಕ್ಕಿ ಕದ್ದಿದ್ದಾನೆ. ಇದನ್ನು ನೋಡಿದ ಕೆಲ ವ್ಯಕ್ತಿಗಳು ಆತನನ್ನು ಮರಕ್ಕೆ ಕಟ್ಟಿಮನಸೋಇಚ್ಛೆ ತಳಿಸಿದ್ದಾರೆ. ಈ ವೇಳೆ ಹಲ್ಲೆ ನಡೆಸಿದ ಗುಂಪಿಗೆ ಸೇರಿದ ಕೆಲ ವ್ಯಕ್ತಿಗಳು, ಹಲ್ಲೆಗೊಳಗಾದ ವ್ಯಕ್ತಿ ಹಿನ್ನೆಲೆಯಲ್ಲಿ ಕಾಣುವಂತೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಬಳಿಕ ಮಧುನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಆದರೆ ಪೊಲೀಸರು, ಮಧುನನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಆತ ರಕ್ತವಾಂತಿ ಮಾಡಿಕೊಂಡು ಸಾವನ್ನಪ್ಪಿದ್ದಾನೆ. ಈ ಹಿನ್ನೆಲೆಯಲ್ಲಿ ಹಲ್ಲೆ ನಡೆಸಿದ ಮೂವರನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.

loader