ಮಹಿಳೆಯರಿಗೆ ಮಸೀದಿಗಳಲ್ಲಿ ಪ್ರಾರ್ಥನೆಗೆ ಅವಕಾಶ ನೀಡಿ: ಸುಪ್ರೀಂ'ಗೆ ಶೀಘ್ರ ಮನವಿ
ನಿಶಾ ಎಂಬ ಪ್ರಗತಿಪರ ಮಹಿಳೆಯರ ವೇದಿಕೆ ಶೀಘ್ರದಲ್ಲೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದ್ದು, ಇದು ಕೇವಲ ಮಸೀದಿಗಳಲ್ಲಿ ಪ್ರಾರ್ಥನೆಗೆ ಅವಕಾಶ ನೀಡುವುದರ ಜೊತೆಗೆ ಮೌಲ್ವಿಗಳನ್ನು ಮಸೀದಿಗಳಲ್ಲಿ ನೇಮಿಸಬಾರದೆಂಬ ಬೇಡಿಕೆಯನ್ನು ಇಡುತ್ತಿದೆ.
ತಿರುವನಂತಪುರ[ಅ.11]: ಎಲ್ಲಾ ವಯೋಮಾನದ ಮಹಿಳೆಯರಿಗೆ ಶಬರಿಮಲೆ ದೇಗುಲ ಪ್ರವೇಶಿಸಿಲು ಸುಪ್ರಿಂ ಕೋರ್ಟ್ ಆದೇಶ ನೀಡಿದ ನಂತರ ಕೇರಳ ಮೂಲದ ಮುಸ್ಲಿಂ ಮಹಿಳೆಯರ ಸಂಘಟನೆ ದೇಶದ ಎಲ್ಲ ಮಸೀದಿಗಳಲ್ಲೂ ಪ್ರಾರ್ಥನೆಗೆ ಅವಕಾಶ ನೀಡುವಂತೆ ಸರ್ವೋಚ್ಛ ನ್ಯಾಯಾಲಯದ ಕದ ತಟ್ಟಲಿದೆ.
ನಿಶಾ ಎಂಬ ಪ್ರಗತಿಪರ ಮಹಿಳೆಯರ ವೇದಿಕೆ ಶೀಘ್ರದಲ್ಲೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದ್ದು, ಇದು ಕೇವಲ ಮಸೀದಿಗಳಲ್ಲಿ ಪ್ರಾರ್ಥನೆಗೆ ಅವಕಾಶ ನೀಡುವುದರ ಜೊತೆಗೆ ಮೌಲ್ವಿಗಳನ್ನು ಮಸೀದಿಗಳಲ್ಲಿ ನೇಮಿಸಬಾರದೆಂಬ ಬೇಡಿಕೆಯನ್ನು ಇಡುತ್ತಿದೆ. ಈ ಸಂಘಟನೆಯು ಇಸ್ಲಾಂ ಸಮುದಾಯದಲ್ಲಿ ಲಿಂಗ ಸಮಾನತೆ, ಬಹುಪತ್ನಿತ್ವ ವಿರೋಧ ಮುಂತಾದ ಪದ್ಧತಿಗಳ ವಿರುದ್ಧ ಹೋರಾಟ ನಡೆಸುತ್ತಿದೆ.
ಮಸೀದಿಗಳಲ್ಲಿ ಪುರುಷರಂತೆ ಮಹಿಳೆಯರಿಗೂ ಸಮಾನತೆ ನೀಡಬೇಕು. ಲಿಂಗತಾರತಮ್ಯ ತೊಲಗಬೇಕು. ಈ ಹಿನ್ನಲೆಯಲ್ಲಿ ಕಾನೂನು ತಜ್ಞರ ಜೊತೆ ಚರ್ಚಿಸಿ ಸುಪ್ರೀಂ ಕೋರ್ಟಿನಲ್ಲಿ ಮನವಿ ಸಲ್ಲಿಸುವುದಾಗಿ ಸಂಘಟನೆಯ ಮುಖ್ಯಸ್ಥರು ತಿಳಿಸಿದ್ದಾರೆ.
ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ 10 ರಿಂದ 50 ವರ್ಷ ವಯಸ್ಸಿನ ಸ್ತ್ರೀಯರಿಗೆ ಪ್ರವೇಶಿಸಲು ಅನುಮತಿ ಇರಲಿಲ್ಲ. ಈ ವಯಸ್ಸಿನಲ್ಲಿ ಹೆಣ್ಣುಮಕ್ಕಳು ಋುತುಮತಿಯಾಗುವ ಕಾರಣದಿಂದ ದೇಗುಲದ ಪಾವಿತ್ರ್ಯಕ್ಕೆ ಧಕ್ಕೆ ಬರುತ್ತದೆ ಎಂದು ಪ್ರವೇಶ ನಿಷೇಧಿಸಲಾಗಿತ್ತು.
ಕಳೆದ 800 ವರ್ಷಗಳಿಂದ ಈ ಸಂಪ್ರದಾಯವನ್ನು ದೇವಾಸ್ಥಾನದ ಆಡಳಿತ ಮಂಡಳಿ ಪಾಲಿಸಿಕೊಂಡು ಬಂದಿತ್ತು. ಸೆ.28ರಂದು ಸುಪ್ರೀಂ ಕೋರ್ಟಿನ ಐವರು ನ್ಯಾಯಾಧೀಶರ ಪೀಠ ಮಹತ್ವದ ತೀರ್ಪು ನೀಡಿ ದೇಗುಲಕ್ಕೆ ಎಲ್ಲ ಮಹಿಳೆಯರು ಪ್ರವೇಶಿಸಬಹುದು ಎಂದು ಆದೇಶಿಸಿತ್ತು.