ಕೆಲ ದಿನಗಳ ಹಿಂದೆ ಶಬರಿಮಲೆ ದೇಗುಲವನ್ನು ಪ್ರವೇಶಿಸಲು ಯತ್ನಿಸಿದ್ದ ರೆಹನಾ ಫಾತಿಮಾಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. 

ಕೊಚ್ಚಿ: ಶಬರಿಮಲೆ ದೇವಾಲಯ ಪ್ರವೇಶಿಸಲು ಯತ್ನಿಸಿ ವಿವಾದ ಸೃಷ್ಟಿಸಿದ ಬಿಎಸ್‌ಎನ್‌ಎಲ್‌ ಉದ್ಯೋಗಿ, ಮಹಿಳಾ ಕಾರ್ಯಕರ್ತೆ ರೆಹನಾ ಫಾತಿಮಾ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ. 

ಫೇಸ್‌ಬುಕ್‌ ಪೋಸ್ಟ್‌ಗಳ ಮೂಲಕ ಧಾರ್ಮಿಕ ಭಾವನೆಗಳಿಗೆ ಫಾತಿಮಾ ಧಕ್ಕೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ರಾಧಾಕೃಷ್ಣ ಮೆನನ್‌ ಎನ್ನುವವರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವ ಕೋರ್ಟ್‌, ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದೆ. ರೂಪದರ್ಶಿ ಹಾಗೂ ಕಿಸ್‌ ಆಫ್‌ ಲವ್‌ ಚಳವಳಿಯ ಹೋರಾಟಗಾರ್ತಿಯೂ ಆಗಿರುವ ಫಾತಿಮಾ ಇಬ್ಬರು ಮಹಿಳೆಯರ ಜೊತೆ ಅಕ್ಟೋಬರ್‌ 19ರಂದು ಶಬರಿಮಲೆಗೆ ತೆರಳಿದ್ದರು. ಆದರೆ, ವ್ಯಾಪಕ ಪ್ರತಿಭಟನೆಯ ಹಿನ್ನೆಲೆಯಲ್ಲಿ ದೇವಾಲಯದ ಒಳಕ್ಕೆ ತೆರಳಲು ಸಾಧ್ಯವಾಗಿರಲಿಲ್ಲ.