ಶ್ರೀನಗರ[ಆ.10]: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370 ರದ್ದಾದ ಬೆನ್ನಲ್ಲೇ, ಕಾಶ್ಮೀರಿ ಯುವತಿಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸಿದೆ. ವಿಡಿಯೋದಲ್ಲಿ ಆರ್ಟಿಕಲ್ 370 ರದ್ದುಗೊಳಿಸಿರುವ ಮೋದಿ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಯುವತಿ ಅಲ್ಲದೇ ಇಂತಹ ಸಮಯದಲ್ಲಿ ಕೇಂದ್ರವನ್ನು ಬೆಂಬಲಿಸಿ ಒಗ್ಗಟ್ಟು ಪ್ರದರ್ಶಿಸುವಂತೆ ಮನವಿ ಮಾಡಿಕೊಂಡಿದ್ದಾಳೆ. ಆದರೆ ಈ ವಿಡಿಯೋ ಹಿಂದಿನ ಅಸಲಿಯತ್ತು ಏನು? ಎಂದು ಹುಡುಕಾಡಿದಾಗ ಕಂಡುಕೊಂಡ ಸತ್ಯ ಇಲ್ಲಿದೆ

ಕಣಿವೆ ನಾಡಿನಲ್ಲಿ 'ವಿಶ್ವಾಸ ಹಾಗೂ ಮಂದಹಾಸದ ಅಪೂರ್ವ ಸಂಗಮ'!

ಕಾಶ್ಮೀರಿ ಯುವತಿ ಎಂದು ಹೇಳಲಾದ ಯುವತಿಯ ಈ ವಿಡಿಯೋ ಭಾರೀ ವೈರಲ್ ಆಗಿದೆ. ಆರ್ಟಿಕಲ್ 370 ರದ್ದುಗೊಳಿಸಲಾಗಿದೆ. ಇನ್ಮುಂದೆ ಕಾಶ್ಮೀರದ ಭವಿಷ್ಯ ಉಜ್ವಲವಾಗುತ್ತದೆ. ಆರ್ಟಿಕಲ್ 370 ಅಸ್ತಿತ್ವದಲ್ಲಿದ್ದರೆ ಅಲ್ಲ, ಬದಲಾಗಿ ಅದನ್ನು ಕಿತ್ತು ಹಾಕಿದರಷ್ಟೇ ಕಾಶ್ಮೀರದಕ್ಕೆ ಸ್ವಾತಂತ್ರ್ಯ ಎಂದು ತಮ್ಮ ವಿಡಿಯೋ ಸಂದೇಶದಲ್ಲಿ ಈಕೆ ಹೇಳಿಕೊಂಡಿದ್ದಾಳೆ. ಈ ವಿಡಿಯೋವನ್ನು ಬಿಜೆಪಿ ನಾಯಕ ರಾಮ್ ಮಾಧವ್ ಕೂಡಾ ಶೇರ್ ಮಾಡಿಕೊಂಡಿದ್ದಾರೆ. ಆದರೆ ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಯುವತಿಯ ಐಡೆಂಟಿಟಿ ಕುರಿತಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಈಕೆ ಕಾಶ್ಮೀರಿ ಮುಸ್ಲಿಂ ಯುವತಿ ಎಂದು ತೋರ್ಪಡಿಸಿಕೊಳ್ಳುತ್ತಿದ್ದಾಳಷ್ಟೇ ಎಂದು ಟೀಕಿಸಿದ್ದಾರೆ.

ವಿಡಿಯೋದಲ್ಲಿ ಸಂದೇಶವೊಂದನ್ನು ನೀಡಿರುವ ಯುವತಿ 'ಭಾರತ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ದಯವಿಟ್ಟು ಬೆಂಬಲಿಸಿ ಎಂದು ನಾನು ಎಲ್ಲಾ ಕಾಶ್ಮೀರಿ ಜನರ ಪರವಾಗಿ, ವಿಶ್ವದ ಎಲ್ಲಾ ನಾಯಕರಲ್ಲಿ ವಿನಂತಿಸಿಕೊಳ್ಳುತ್ತೇನೆ. ಕಳೆದ 70 ವರ್ಷಗಳಿಂದ ಬಹುದೊಡ್ಡ ತಲೆನೋವಾಗಿ ಮಾರ್ಪಾಡಾಗಿದ್ದ ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಗೂ ಬಗೆಹರಿಸಲು ಸಾಧ್ಯವಾಗಿರಲಿಲ್ಲ. ಹೀಗಿರುವಾಗ ಭಾರತ ಸರ್ಕಾರ ಇಂತಹ ಮಹತ್ವದ ಹಾಗೂ ಧನಾತ್ಮಕ ನಿರ್ಧಾರ ಕೈಗೊಂಡಿದೆ' ಎಂದಿದ್ದಾರೆ. 

’ಆರ್ಟಿಕಲ್ 370 ಅಂದ್ರೆ ಏನು? ಇದು ಕಾಶ್ಮೀರದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ' ಎಂದು ನಿಮಗೆ ತಿಳಿದಿದೆಯೇ ಎಂದು ಪ್ರಶ್ನಿಸಿದ್ದಾರೆ. ಮುಂದೆ ಈ ಪ್ರಶ್ನೆಗಳಿಗೆ ಉತ್ತರಿಸಿರುವ ಯುವತಿ 'ಆರ್ಟಿಕಲ್ 370 ಯಾವುದೇ ಭಾರತೀಯ ಹಾಗೂ ವಿದೇಶೀ ಹೂಡಿಕೆದಾರರಿಗೆ ಕಾಶ್ಮೀರ ಪ್ರವೇಶಿಸಲು ಬಿಡುವುದಿಲ್ಲ. ಇದೇ ಕಾರಣದಿಂದ ಇಲ್ಲಿ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯವಾಗುವುದಿಲ್ಲ. ನಿರುದ್ಯೋಗ ಸಮಸ್ಯೆಯೂ ಕಾಡುತ್ತದೆ. ಇಂತಹ ಒತ್ತಡದಿಂದಾಗಿ ಇಲ್ಲಿನ ಯುವಜನತೆ ಡ್ರಗ್ಸ್ ವ್ಯಸನಿಗಳಾಗುತ್ತಾರೆ. ಯಾವುದೇ ಸುಳಿವಿಲ್ಲದೇ ರಹಸ್ಯಮಯವಾಗಿ ಮಾಯವಾಗುವ ಇಲ್ಲಿನ ಯುವಕರು, ಕೆಲ ದಿನಗಳ ಬಳಿಕ ಗನ್ ಹಿಡಿದು ಉಗ್ರ ಸಂಘಟನೆಗೆ ಸೇರಿರುವ ವಿಡಿಯೋಗಳು ಸೋಶಿಯಲ್ ಮಿಡಿಯಾದಲ್ಲಿ ಕಂಡು ಬರುತ್ತವೆ' ಎಂದಿದ್ದಾರೆ.

ವೀರಪ್ಪನ್‌ ಹತ್ಯೆಗೈದ ವಿಜಯ್‌ ಕಾಶ್ಮೀರ ಗವರ್ನರ್?

ಸರ್ಕಾರದ ನಡೆಯನ್ನು ಶ್ಲಾಘಿಸಿ ಮಾತನಾಡಿರುವ ಈ ಕಾಶ್ಮೀರಿ ಯುವತಿ 'ಆದರೀಗ 370ನೇ ವಿಧಿ ರದ್ದಾಗಿರುವುದರಿಂದ ಇಂತಹ ಅನೈತಿಕ ಹಾಗೂ ಸಮಾಜಕ್ಕೆ ಹಾನಿಯುಂಟು ಮಾಡುವ ಸಂಸ್ಥೆಗಳನ್ನು ನಿಷೇಧಿಸಬಹುದು. ನೀವು ಕೆಂದ್ರ ಸರ್ಕಾರದ ನಿರ್ಧಾರ ಟೀಕಿಸುವವರನ್ನು ಹಾಗೂ ಅದರ ವಿರುದ್ಧ ಧ್ವನಿ ಎತ್ತಿದ್ದಾರೆಂಬುವುದನ್ನು ನೀವು ಕೇಳಿರಬಹುದು. ಆದರೆ ಅವರೆಲ್ಲಾ ಇಲ್ಲಿನ ಸ್ಥಳೀಯರಲ್ಲ, ಅವರೆಲ್ಲಾ ಪ್ರತ್ಯೇಕತಾವಾದಿಗಳು. ಹೌದು ಇಲ್ಲಿ ನೆಟ್ವರ್ಕ್ ಕಡಿತಗೊಳಿಸಲಾಗಿದೆ, ನಮ್ಮ ಆತ್ಮೀಯರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಆದರೆ ಸರ್ಕಾರದ ಈ ಹೆಜ್ಜೆಯಿಂದ ನಾವು ಸೇಫ್ ಆಗಿದ್ದೇವೆಂಬ ಧೈರ್ಯ ನಮಗಿದೆ. ಇದೆ' ಎಂದಿದ್ದಾರೆ.

ವಿಡಿಯೋ ಹಿಂದಿನ ಅಸಲಿಯತ್ತೇನು? ಯಾರು ಆ ಯುವತಿ?

ಈ ಯುವತಿಯ ಹೆಸರು ಸುಹಾನಿ ಯಾನಾ ಮೀರ್‌ ಚಂದಾನಿ. ಆದರೆ ಈಕೆ ತನ್ನನ್ನು ತಾನು ಯಾನಾ ಮೀರ್‌ ಚಂದಾನಿ ಎಂದು ಕರೆಸಿಕೊಳ್ಳುತ್ತಾಳೆ. ಈಕೆಯ ಟ್ವಿಟರ್‌ ಅಕೌಂಟ್‌ ಪರಿಶೀಲಿಸಿದಾಗ ಈಕೆ ಕಾಶ್ಮೀರದ ಸೋನ್‌ಮಾರ್ಗ್ ಪ್ರದೇಶದವಳಾಗಿದ್ದು, ಈಕೆಯ ಕುಟುಂಬ ಮೂಲತಃ ಪ್ರಸ್ತುತ ಪಾಕಿಸ್ತಾನದಲ್ಲಿರುವ ಸಿಂಧ್ ಪ್ರದೇಶದವರೆಂದು ತಿಳಿದು ಬಂದಿದೆ. ಅಲ್ಲದೇ ಸದ್ಯಕ್ಕೀಗ ಮುಂಬೈನಲ್ಲಿರುವ ಮೀರ್‌ ಚಂದಾನಿ ಹಾಂಗ್ ಕಾಂಗ್ ಮೂಲದ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದರೆಂಬುವುದು ಬಯಲಾಗಿದೆ. ಇದಕ್ಕೂ ಮುನ್ನ ಈಕೆ ವಿದೆಶೀ ಏರ್‌ಲೈನ್ಸ್‌ನಲ್ಲಿ ಗಗನಸಖಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಕಾಶ್ಮೀರ ಜೊತೆಗಿನ ನಂಟು:

ಇಂಡಿಯಾ ಟುಡೇ ಈ ಯುವತಿಯನ್ನು ಸಂಪರ್ಕಿಸಿದಾಗ ತಾನು ಕಾಶ್ಮೀರದಲ್ಲಿ ಜನಿಸಿದ್ದೆ. ಇಂದಿಗೂ ತಮ್ಮ ಕುಟುಂಬದ ಅನೇಕ ಮಂದಿ ಕಾಶ್ಮೀರದಲ್ಲಿದ್ದಾರೆ. ಆದರೆ ತಾನು ಅಲ್ಲಿ ದೀರ್ಘ ಕಾಲವಿರಲಿಲ್ಲ. ವರ್ಷದಲ್ಲಿ ಒಂದೆರಡು ಬಾರಿ ಭೇಟಿ ನೀಡುತ್ತೇನೆ ಎಂದಿದ್ದಾರೆ. ಆದರೆ ಇದಕ್ಕೆ ಸಾಕ್ಷಿಯಾಗಿ ಯಾವುದಾದರೂ ದಾಖಲೆ ತೋರಿಸಿ ಎಂದಾಗ ನಿರಾಕರಿಸಿರುವುದು ಅನುಮಾನ ಹುಟ್ಟಿಸಿದೆ.

ಟ್ವಿಟರ್‌ನಲ್ಲಿ ಫುಲ್ ಆ್ಯಕ್ಟಿವ್

ಕೇವಲ 6 ತಿಂಗಳ ಹಿಂದಷ್ಟೇ, ಅಂದರೆ 2019ರ ಫೆಬ್ರವರಿ 26ರಂದು ಟ್ವಿಟರ್‌ಗೆ ಎಂಟ್ರಿ ಕೊಟ್ಟಿರುವ ಯಾನಾ 11,500ಕ್ಕೂ ಹೆಚ್ಚು ಹಿಂಬಾಲಕರನ್ನು ಹೊಂದಿದ್ದಾರೆ. ಆದರೆ ಅಲ್ಪಾವಧಿಯ್ಲಲೇ ಇವರು 3000ಕ್ಕೂ ಹೆಚ್ಚು ಬಾರಿ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಅಂದರೆ ಒಂದು ದಿನಕ್ಕೆ ಸುಮಾರು 18 ಟ್ವೀಟ್‌ಗಳನ್ನು ಮಾಡಿದ್ದಾರೆ.

ಮೋದಿ ಮೇಲೆ ಭಾರೀ ಅಭಿಮಾನ

ಮೀರ್ ಚಂದಾನಿ ತಾನೊಬ್ಬ ಮೋದಿ ಅಪ್ಪಟ ಅಭಿಮಾನಿ ಎಂದು ಒಪ್ಪಿಕೊಂಡಿದ್ದಾರೆ. ಆಕೆಯ ಟ್ವಿಟರ್ ಟೈಮ್‌ಲೈನ್ ಇದಕ್ಕೆ ಸಾಕ್ಷಿ. ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಭಾರತ ಗೆಲುವಿಗಾಗಿ ಹರಸಾಹಸ ಪಡುತ್ತಿದ್ದಾಗ ಯಾನಾ ಈ ಟ್ವೀಟ್ ಶೇರ್ ಮಾಡಿಕೊಂಡಿದ್ದರು.

ಆಕೆ ಅಮಿತ್ ಶಾ ಅಭಿಮಾನಿಯೂ ಹೌದು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಜಯ ಗಳಿಸಿದಾಗ ಆಕೆ ಈ ಕೆಳಗಿನ ಟ್ವೀಟ್‌ ಶೇರ್ ಮಾಡಿಕೊಂಡಿದ್ದರು. 

ಫೇಕ್ ನ್ಯೂಸ್‌ಗಳನ್ನು ಶೇರ್ ಮಾಡಿಕೊಳ್ಳುತ್ತಾರೆ

ಈಕೆ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿರುವ ಸುದ್ದಿಗಳನ್ನು ಗಮನಿಸಿದಾಗ ಯಾನಾ ಹಲವಾರು ಫೇಕ್ ನ್ಯೂಸ್‌ಗಳನ್ನು ಶೇರ್ ಮಾಡಿಕೊಂಡಿರುವುದನ್ನು ನೋಡಬಹುದು.