ಸಾರೆ ಜಹಾ ಸೇ ಅಚ್ಛಾ..: ಮೇಜು ಕುಟ್ಟಿ ಭಾರತ ನೆನೆದ ಪಾಕ್ ನಾಯಕ!
ಎಲ್ಲರ ಸಮ್ಮುಖದಲ್ಲೇ ಸಾರೆ ಜಹಾ ಸೇ ಅಚ್ಛಾ ಹಾಡು ಹಾಡಿದ ಪಾಕ್ ನಾಯಕ| 370ನೇ ವಿಧಿ ರದ್ದತಿಯನ್ನು ಬಹಿರಂಗವಾಗಿ ಬೆಂಬಲಿಸಿದ ಎಂಕ್ಯುಎಂ ಪಕ್ಷದ ಸಂಸ್ಥಾಪಕ| 370ನೇ ವಿಧಿ ರದ್ದತಿ ಭಾರತದ ಆಂತರಿಕ ವಿಷಯ ಎಂದ ಅಲ್ತಾಫ್ ಹುಸೇನ್| ಪಾಕ್ ಸರ್ಕಾರ ಹಾಗೂ ಸೇನೆ ವಿರುದ್ಧ ಹರಿಹಾಯ್ದ ಅಲ್ತಾಫ್ ಹುಸೇನ್| ಅಲ್ತಾಫ್ ಹುಸೇನ್ ಮುತ್ತಹಿದ್ ಕ್ವಾಮಿ ಮೂವ್‌ಮೆಂಟ್ ಪಕ್ಷದ ಸಂಸ್ಥಾಪಕ ನಾಯಕ|
ಇಸ್ಲಾಮಾಬಾದ್(ಸೆ.01): ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿಯನ್ನು ಪಾಕಿಸ್ತಾನದ ಎಲ್ಲ ರಾಜಕೀಯ ನಾಯಕರು ವಿರೋಧಿಸುತ್ತಿದ್ದಾರೆ. ಮೋದಿ ಸರ್ಕಾರದ ನಿರ್ಧಾರ ಪಾಕ್ ನಾಯಕರ ಬಾಯಲ್ಲಿ ಯುದ್ಧದ ಮಾತುಗಳನ್ನಾಡುವಂತೆ ಮಾಡಿದೆ.
ಆದರೆ ಪಾಕಿಸ್ತಾನದ ಮುತ್ತಹಿದ್ ಕ್ವಾಮಿ ಮೂವ್‌ಮೆಂಟ್ (ಎಂಕ್ಯುಎಂ) ಪಕ್ಷದ ಸಂಸ್ಥಾಪಕ ಅಲ್ತಾಫ್ ಹುಸೇನ್ ಮಾತ್ರ ಭಾರತದ ಪರ ನಿಂತಿದ್ದು, 370ನೇ ವಿಧಿ ರದ್ದತಿ ಭಾರತದ ಆಂತರಿಕ ವಿಷಯವಾಗಿದ್ದು, ಇದರಲ್ಲಿ ಪಾಕಿಸ್ತಾನ ಹಸ್ತಕ್ಷೇಪ ಮಾಡಬಾರದು ಎಂದು ಹೇಳಿದ್ದಾರೆ.
ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಅಲ್ತಾಫ್ ಹುಸೇನ್, ಎಲ್ಲರ ಸಮ್ಮುಖದಲ್ಲೇ ‘ಸಾರೇ ಜಹಾನ್ ಸೇ ಅಚ್ಛಾ..’ ಹಾಡನ್ನು ಹೆಮ್ಮೆಯಿಂದ ಹಾಡಿದ್ದು, ಅಲ್ತಾಫ್ ಹುಸೇನ್ ಅವರ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ.
ಇದೇ ವೇಳೆ ಪಾಕಿಸ್ತಾನದ ಸರ್ಕಾರ ಹಾಗೂ ಸೇನೆ ವಿರುದ್ಧ ನೇರ ವಾಗ್ದಾಳಿ ನಡೆಸಿರುವ ಹುಸೇನ್, ಸರ್ಕಾರ ಹಾಗೂ ಸೇನೆ ಎರಡೂ 72 ವರ್ಷಗಳಿಂದ ಪಾಕಿಸ್ತಾನಿಯರನ್ನು ಕಾಶ್ಮೀರದ ವಿಷಯದಲ್ಲಿ ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದ್ದಾರೆ.