ಕನ್ನಡಿಗರ ಪ್ರತಿಭಟನೆಗೆ ಮಣಿದು ರಜೆ ಮೇಲೆ ತೆರಳಿದ ಮಲಯಾಳಿ ಶಿಕ್ಷಕ

https://static.asianetnews.com/images/authors/b348a094-0bef-5801-a1f6-61e57071185f.jpg
First Published 29, Aug 2018, 5:43 PM IST
Kasaragodu Malayali Teacher went on leave After Kannadigas Protest
Highlights

ಕನ್ನಡಾಭಿಮಾನದ ಆಧಾರದಲ್ಲಿಯೇ ನಿರ್ಮಾಣವಾದ  ಹಿ.ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದಲ್ಲಿನ ದೃಶ್ಯವೊಂದು ನಿಜವಾಗಿಯೂ ಮರುಕಳಿಸಿದೆ. ಚಿತ್ರದಲ್ಲಿ ಕನ್ನಡ ಬಾರದ ಶಿಕ್ಷಕ ಜೋಸೆಫ್ ಕನ್ನಡ ಶಾಲೆಯಲ್ಲಿ ಹುದ್ದೆ ಪಡೆದುಕೊಂಡಿದ್ದರು. ಇಲ್ಲಿ ಸಹ ಅಂಥದ್ದೇ ಘಟನೆ ನಿಜವಾಗಿಯೂ ನಡೆದಿದೆ. ಏನಪ್ಪಾ ಸುದ್ದಿ .. ಡಿಟೇಲ್ಸ್ ಇಲ್ಲಿದೆ.

ಕಾಸರಗೋಡು[ಆ.29] ಕೇರಳ ಗಡಿನಾಡಿನಲ್ಲಿ ಕನ್ನಡ ಭಾಷೆ ಮೇಲಿನ ದೌರ್ಜನ್ಯವನ್ನು ಸಾರುವ ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಹೆಸರಿನ ಸಿನಿಮಾ ಕಾಸರಗೋಡಿನಲ್ಲಿ ಹೌಸ್‌ಫುಲ್ ಪ್ರದರ್ಶನ ಮುಂದುವರಿದಿದೆ. ಇದೇ ವೇಳೆ ಕಾಸರಗೋಡಿನ ಮಂಗಲ್ಪಾಡಿ ಪ್ರೌೌಢ ಶಾಲೆಯಲ್ಲಿ ಕನ್ನಡ ಮಾಧ್ಯಮ ಶಾಲೆಗೆ ಬುಧವಾರ ಪಾಠಕ್ಕೆ ಆಗಮಿಸಿದ ಮಲಯಾಳಿ ಶಿಕ್ಷಕ ಕನ್ನಡಿಗರ ಪ್ರತಿಭಟನೆಯ ಫಲವಾಗಿ ದೀರ್ಘಕಾಲ ರಜೆ ಮೇಲೆ ತೆರಳುವಂತಾಗಿದೆ.

ಕೇರಳ ಲೋಕಸೇವಾ ಆಯೋಗದಿಂದ ಪ್ರೌೌಢ ಶಾಲೆಗಳಿಗೆ ಶಿಕ್ಷಕರ ನೇಮಕಾತಿ ನಡೆಯುತ್ತಿದೆ. ಗಡಿನಾಡು ಕೋಟಾದಲ್ಲಿ 16 ಮಂದಿ ಮಲಯಾಳಿ ಶಿಕ್ಷಕರು ಕನ್ನಡ ಶಾಲೆಗಳಿಗೆ ನೇಮಕಗೊಳ್ಳುವ ಸಿದ್ಧತೆಯಲ್ಲಿದ್ದಾರೆ. ಇದೇ ವೇಳೆ ಮೊದಲ ಹಂತದ ನೇಮಕ ಪ್ರಕ್ರಿಯೆಯಲ್ಲಿ ಕಣ್ಣೂರು ಬಳಿಯ ಮಲಯಾಳಿ ಶಿಕ್ಷಕ ಸುನಿಲ್ ಎಂಬವರು ನೇಮಕಗೊಂಡಿದ್ದರು. ಅವರು ಜು.17 ರಂದು ಮಂಗಲ್ಪಾಡಿ ಶಾಲೆಗೆ ಕರ್ತವ್ಯಕ್ಕೆ ಹಾಜರಾಗಿದ್ದರು. ಅವರಿಗೆ ಕನ್ನಡದಲ್ಲಿ ಪಾಠ ಮಾಡಲು ಬಾರದ ಕಾರಣ ಜು.23 ರಿಂದ ಅಲ್ಲಿನ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆ ನಡೆಸಿದ್ದರು.

ತೆರೆದ ಶಾಲೆ, ಕಾಸರಗೋಡಲ್ಲಿ ಮತ್ತೆ ಕನ್ನಡದ ಕಂಪು

ಇದರಿಂದಾಗಿ ಶಿಕ್ಷಣ ಇಲಾಖೆ ಈ ಶಿಕ್ಷಕರನ್ನು ತಾತ್ಕಾಲಿಕ ರಜೆಯಲ್ಲಿ ತೆರಳುವಂತೆ ಸೂಚಿಸಿತ್ತು. ಕೇರಳದಲ್ಲಿ ಆ.17ರಿಂದ 28ರವರೆಗೆ ಓಣಂ ರಜೆ ಇತ್ತು. ಇದೀಗ ರಜೆ ಮುಗಿಸಿದ ಬಳಿಕ ಶಿಕ್ಷಕ ಬುಧವಾರ ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದರು. ಬೆಳಗ್ಗೆ ಬೇಗನೆ ಬಂದು ಹಾಜರಿ ಪುಸ್ತಕದಲ್ಲಿ ಸಹಿಯನ್ನೂ ಮಾಡಿದ್ದರು. ಇದನ್ನು ಗಮನಿಸಿದ ಶಾಲಾ ವಿದ್ಯಾರ್ಥಿಗಳು ಪೋಷಕರ ಜೊತೆ ಸೇರಿ ಶಾಲೆಯೊಳಗೆ ಪ್ರತಿಭಟನೆ ನಡೆಸಿದರು. ಬಳಿಕ ಮುಖ್ಯೋಪಾಧ್ಯಾಯರ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಅಷ್ಟರದಲ್ಲಿ ಮಲಯಾಳಿ ಶಿಕ್ಷಕ ಆಗಮಿಸಿದ ಸುದ್ದಿತಿಳಿದು ಕನ್ನಡ ಸಂಘಟನೆಗಳು ಸೇರಲಾರಂಭಿಸಿದರು.

ಮಂಗಲ್ಪಾಡಿ ಶಾಲೆಯ ಎದುರೇ ಮಧ್ಯಾಹ್ನವರೆಗೆ ಪ್ರತಿಭಟನೆ ನಡೆಯಿತು. ಈವರೆಗೂ ಕನ್ನಡವನ್ನೇ ಕಲಿಯದ, ಕಲಿಸಲೂ ಬಾರದ ಶಿಕ್ಷಕನನ್ನು ಇಲ್ಲಿಂದ ವರ್ಗಾವಣೆಗೊಳಿಸಬೇಕು. ಅಲ್ಲಿವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು. ಕಾಸರಗೋಡು ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಸರಗೋಡು ಜಿಲ್ಲಾಪಂಚಾಯ್ತಿ ಸದಸ್ಯರಾದ ಹರ್ಷದ್ ವರ್ಕಾಡಿ, ಫರಿದಾ, ಶಾಲಾ ಶಿಕ್ಷಕ ರಕ್ಷಕ ಸಂಘ ಅಧ್ಯಕ್ಷ ಬಾಲಕೃಷ್ಣ ಬಾಡೂರು, ಶಾಲಾ ಮಾತೃ ಸಮಿತಿ ಅಧ್ಯಕ್ಷ ಯಶೋಧ ಶೆಟ್ಟಿ, ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಅಧ್ಯಕ್ಷ ರವೀಂದ್ರನಾಥ ಬಲ್ಲಾಳ್ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕನ್ನಡಿಗರ ಪ್ರತಿಭಟನೆಗೆ ಮಣಿದ ಮಲಯಾಳಿ ಶಿಕ್ಷಕ ಕೊನೆಗೂ 4 ತಿಂಗಳು ರಜೆ ಮೇಲೆ ತೆರಳಲು ನಿರ್ಧರಿಸಿದರು.

ಚಿತ್ರ ವಿಮರ್ಶೆ:ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ಬಳಿಕ ಪ್ರತಿಭಟನೆಯನ್ನು ಕೊನೆಗೊಳಿಸಲಾಯಿತು. ಸುಮಾರು 200ಕ್ಕೂ ಅಧಿಕ ಮಂದಿ ಪ್ರತಿಭಟನೆಯಲ್ಲಿ ಸೇರಿದ್ದರು. ಕಾಸರಗೋಡಿನಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಗೆ ಮಲಯಾಳಿ ಶಿಕ್ಷಕರ ನೇಮಕವನ್ನು ವಿರೋಧಿಸಿ ಆ.30 ರಂದು ಇಲ್ಲಿನ ಕನ್ನಡಪರ ಸಂಘಟನೆಗಳು ರಾಜಧಾನಿ ತಿರುವನಂತಪುರಂಗೆ ನಿಯೋಗದಲ್ಲಿ ತೆರಳಲು ನಿರ್ಧರಿಸಿದೆ. ಕೇರಳ ಶಿಕ್ಷಣ ಸಚಿವರು, ಕೆಪಿಎಸ್‌ಸಿ ಅಧ್ಯಕ್ಷರು ಹಾಗೂ ಶಿಕ್ಷಣ ಇಲಾಖಾ ಪ್ರಧಾನ ಆಯುಕ್ತರಿಗೆ ಮನವಿ ಸಲ್ಲಿಸಲಿದೆ. ಈ ಮಲಯಾಳಿ ಶಿಕ್ಷಕರ ನೇಮಕ ವಾಪಸ್ ಪಡೆಯುವಂತೆ ಒತ್ತಾಾಯಿಸಲಿದೆ. ನಿಯೋಗದಲ್ಲಿ ಗಡಿನಾಡು ಕನ್ನಡ ಸಂಘಟನೆಗಳ ಜೊತೆಗೆ ಇದೇ ರೀತಿಯ ತೊಂದರೆ ಅನುಭವಿಸುತ್ತಿರುವ ಗಡಿನಾಡ ತಮಿಳು ಸಂಘಟನೆಗಳೂ ಪಾಲ್ಗೊಳ್ಳಲಿವೆ ಎಂದು ಕಾಸರಗೋಡು ಕನ್ನಡ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಸ್ಕರ ತಿಳಿಸಿದ್ದಾರೆ.

ಕನ್ನಡ ಕಡೆಗಣನೆ ಬಗ್ಗೆ ಅನಂತ್ ನಾಗ್ ಏನು ಹೇಳುತ್ತಾರೆ?

"

loader