ಚಿತ್ರ ವಿಮರ್ಶೆ:ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು, ಕೊಡುಗೆ ರಾಮಣ್ಣ ರೈ ಚಿತ್ರದ ನಿರೂಪಣೆಯ ಶೈಲಿ ಪೂರ್ಣಚಂದ್ರ ತೇಜಸ್ವಿಯವರ ಕಥನ ಶೈಲಿಗೆ ಹತ್ತಿರವಾದದ್ದು. ಅಲ್ಲಿ ನಿರೂಪಕನಂತೆ ರಿಷಭ್ ಇದ್ದಾರೆ. ಆದರೆ ಅವರೇ ಕತೆಯನ್ನು ಆವರಿಸಿಕೊಳ್ಳುವುದಿಲ್ಲ. ಯಾವುದನ್ನೂ ನಮ್ಮ ಮೇಲೆ ಹೇರುವ ಒತ್ತಾಯವಿಲ್ಲದೇ, ತೋರಿಸುವ ಕೆಲಸವನ್ನು ಮಾತ್ರ ಅವರು ಮಾಡುತ್ತಾರೆ
ಛಕ್, ಇಷ್ಟು ಬೇಗ ಶಾಲೆ ಶುರುವಾಗಬಾರದಿತ್ತು! ಹಾಗಂತ ತನಗೆ ತಾನೇ ಉದ್ಗರಿಸುವ ಮಮ್ಮೂಟಿ ಎಂಬ ಬಾಲಕ, ಹೇಗಾದರೂ ಶಾಲೆ ಮತ್ತೆ ಶುರುವಾಗಲೇಬೇಕು ಎಂದು ನಿರ್ಧರಿಸುವಲ್ಲಿಗೆ ಕಾಸರಗೋಡಿನ ಕರಂದಕ್ಕಾಡು ಎಂಬ ಊರು, ಅಲ್ಲಿಯ ತುಂಟ ಹುಡುಗರು, ಮಿಂಚುಗಣ್ಣಿನ ಬಾಲಕಿ, ಪಾಪದ ಹೆಡ್ಮಾಸ್ಟರು, ಅಬ್ಬರಿಸುವ ಯಕ್ಷಗಾನ ಕಲಾವಿದ, ರಾಶಿಭವಿಷ್ಯ ಕೇಳುವ ಮುದುಕ, ಅರೆಹುಚ್ಚ ಸೆಬಾಸ್ಟಿನ್, ಒಬ್ಬ ಅಗೋಳಿಮಂಜಣ್ಣ, ಪುಗ್ಗೆಮಾರುವ ಸಾಬಿ, ಮಲಯಾಳಂ ಭಾಷೆಯಲ್ಲಿ ಗಣಿತ ಕಲಿಸುವ ಶಿಕ್ಷಕ ಮತ್ತು ಒಬ್ಬ ದುಷ್ಟ ಅಧಿಕಾರಿ ನಮ್ಮ ಮನಸ್ಸಿನೊಳಗೆ ನೆಲೆ ನಿಂತಾಗಿರುತ್ತದೆ.ಅಷ್ಟಾದ ನಂತರ ನಾವೂ ಅದೇ ಊರಿನವರಾಗಿಬಿಡುತ್ತೇವೆ. ಹೇಗಾದರೂ ಮಾಡಿ ಮುಚ್ಚಿದ ಶಾಲೆಯನ್ನು ತೆರೆಸಬೇಕು ಎಂಬ ತೀರ್ಮಾನ ನಮ್ಮದೂ ಆಗಿಬಿಡುತ್ತದೆ.
ಒಂದೂರನ್ನು ಅದರ ಸಕಲ ತರಲೆ, ತಾಪತ್ರಯ, ಚೆಲುವು, ಒಲವುಗಳ ಒಟ್ಟಿಗೇ ನಮ್ಮ ಮುಂದೆ ತಂದಿಡುತ್ತಾರೆ ರಿಷಭ್. ಗೆಳೆಯನ ಊರಿಗೆ ಹೋದವನನ್ನು ಊರು ತೋರಿಸಲು ಕರೆದುಕೊಂಡು ಹೋಗುವ ಸಂಭ್ರಮ ಅವರದು. ಚೆಂದದ ಒಂದು ಶಾಲೆ, ಹುಲಿವೇಷ, ಇಗರ್ಜಿ, ಯಕ್ಷಗಾನ, ಸಣ್ಣಪುಟ್ಟ ಜಗಳ, ಪರಭಾಷೆಯ ನೆಲದಲ್ಲಿ ಕನ್ನಡದಲ್ಲಿ ಕನಸು ಕಾಣುವ ಮಕ್ಕಳ ಖುಷಿ, ವಿದ್ಯೆ ಹತ್ತದ ಹುಡುಗನ ಒದ್ದಾಟ ಎಲ್ಲವನ್ನೂ ಕಣ್ಣಮುಂದೆ ತಂದಿಟ್ಟು ನೋಡುಗನ ಕಣ್ಣಲ್ಲಿ ಮಿಂಚುವ ಖುಷಿಯನ್ನಷ್ಟೇ ನೋಡುತ್ತಾ ಸುಮ್ಮನಾಗುತ್ತಾರೆ ಅವರು.
ಮತ್ತೊಬ್ಬರಿಗೆ ತೋರಿಸುತ್ತಲೇ ತಾನೂ ನೋಡುವ ತವಕ ಅವರದು. ಕನ್ನಡ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದೆ. ಶಾಲೆಗೆ ಸರಿಯಾದ ಕಟ್ಟಡ ಇಲ್ಲ ಎಂಬ ಕಾರಣಕ್ಕೆ ಒಂದೊಂದಾಗಿ ಕನ್ನಡ ಶಾಲೆಗಳನ್ನು ಮುಚ್ಚುತ್ತಾ ಹೋಗುವ ಕೇರಳ ಸರ್ಕಾರ. ಅದರ ನಡುವೆಯೇ ಕನ್ನಡ ಶಾಲೆ ಬೇಕು ಅನ್ನುವ ಮಕ್ಕಳು, ಹೆತ್ತವರು. ಒಂದು ಶಾಲೆಯನ್ನು ಮುಚ್ಚಲಿಕ್ಕೆ ಒಬ್ಬ ಶಿಕ್ಷಣಾಧಿಕಾರಿಯ ವರದಿಯೊಂದೇ ಸಾಕು ಎಂಬಂಥ ಪರಿಸ್ಥಿತಿ ಕಾಸರಗೋಡಿನಲ್ಲಷ್ಟೇ ಅಲ್ಲ, ಕರ್ನಾಟಕದ ಗಡಿಭಾಗದ ಎಲ್ಲ ಕಡೆಯಲ್ಲೂ ಇದೆ ಅನ್ನುವುದನ್ನು ನಾವು ಮರೆಯಕೂಡದು. ರಿಷಭ್ ಇಡೀ ಸಿನಿಮಾವನ್ನು ಒಂದು ಪ್ರದೇಶದ ಆಡುಭಾಷೆಯ ಜೊತೆಗೇ ಸವಿಯುವಂತೆ ಮಾಡಿದ್ದಾರೆ. ಚಿತ್ರದಲ್ಲಿ ಬರುವ ಸಂಭಾಷಣೆಯ ಪ್ರತಿಯೊಂದು ತುಣುಕನ್ನೂ ಸವಿಯಬಲ್ಲವರಿಗೆ ಇದು ಕೊಡುವ ಖುಷಿಯೇ ಬೇರೆ. ಹಾಗೆ ನೋಡಿದರೆ ಚಿತ್ರದ ಭಾಷೆ ಚಿತ್ರವನ್ನು ಸವಿಯುವುದಕ್ಕೆ ತೊಡಕಾಗಿಲ್ಲ. ಮಕ್ಕಳ ಕಣ್ಣೋಟ, ಭಾವಭಂಗಿಗಳೇ ಭಾಷೆಯಾಗಿ ನಮ್ಮನ್ನು ತಟ್ಟುತ್ತವೆ. ಈ ಚಿತ್ರದ ಜೀವಾಳ ಎಲ್ಲಿದೆ ಎಂದು ಯೋಚಿಸಿದಾಗ ಹೊಳೆದದ್ದು ಇವು; ಶಾಲೆ ಮುಚ್ಚುತ್ತದೆ ಅಂತ ಗೊತ್ತಾದ ಮೇಲೂ ಶಾಲೆಯ ಗಿಡಗಳಿಗೆ ನೀರೆರೆಯುವ ಮೇಷ್ಟ್ರು, ನಗಿಸುತ್ತಲೇ ಸಾಗುವ ಚಿತ್ರದ ಮೂಡ್ ಮಧ್ಯಂತರದ ಒಂದೇ ಒಂದು ಸಣ್ಣ ದೃಶ್ಯದೊಂದಿಗೆ ಬದಲಾಗುವಂತೆ ಮಾಡಿದ ನಿರ್ದೇಶಕರ ಪ್ರತಿಭೆ, ಕೊನೆಯಲ್ಲಿ ನ್ಯಾಯಾಧೀಶನ ಬಾಯಿಯಿಂದಲೇ ದಟ್ಸಾಲ್ ಯುವರ್ ಆನರ್ ಎಂದು ಹೇಳಿಸುವ ಮೂಲಕ ಪ್ರೇಕ್ಷಕರ ಆಶಯವನ್ನು ಹೊಸರೀತಿಯಲ್ಲಿ ಹೇಳಿದ್ದು, ತರಲೆ, ತುಂಟತನ ಇಲ್ಲದೇ ಜೀವನ ಬೋರು ಎಂದು ಹೇಳಲೆಂದೇ ಮರಳಿ ಬರುವ ಅನಂತಪದ್ಮನಾಭ ಮತ್ತು ಅಬ್ಜೆಕ್ಷನ್ ಓವರ್‌ರೂಲ್ಡ್ ಎಂದು ನ್ಯಾಯಾಲಯದಲ್ಲೇ ತೀರ್ಪುಕೊಡುವ ಅರೆಹುಚ್ಚ!
ರಿಷಭ್ ಅಂದುಕೊಂಡದ್ದನ್ನು ಅವರ ಇಡೀ ತಂಡ ಆಗುಮಾಡಿದೆ. ಎಲ್ಲೂ ನಟಿಸದ ಮಕ್ಕಳು, ಊರ ದನಿಯೇ ಆಗಿಬಿಡುವ ಹಿನ್ನೆಲೆ ಸಂಗೀತ, ಎಲ್ಲವನ್ನೂ ತಣ್ಣಗೆ ನೋಡುವ ಕೆಮರಾ ಕಣ್ಣು ಮತ್ತು ದಡ್ಡನಾಗಿರುವುದೇ ಸಾರ್ಥಕತೆ ಎಂದು ನಮಗೂ ಅನ್ನಿಸುವಂತೆ ಮಾಡುವ ಪ್ರವೀಣ- ಹೀಗೆ ಇಲ್ಲೊಂದು ವಿಸ್ಮಯಕಾರಿ ಸಂಯೋಗ ಸಾಧ್ಯವಾಗಿದೆ. ಒಂದೊಳ್ಳೆ ಮಕ್ಕಳ ಸಿನಿಮಾ ದೊಡ್ಡವರನ್ನೂ ಮಕ್ಕಳನ್ನಾಗಿಸುತ್ತದಂತೆ. ಎರಡೂವರೆ ಗಂಟೆ ಬಾಲ್ಯಕ್ಕೆ ಮರಳಲು ಈ ಶಾಲೆ ತಪ್ಪಿಸಬೇಡಿ!
ಚಿತ್ರ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಳೆ ಕೊಡುಗೆ ರಾಮಣ್ಣ ರೈ
ತಾರಾಗಣ: ಅನಂತ್‌ನಾಗೆ, ಪ್ರಮೋದ್ ಶೆಟ್ಟಿ, ಪ್ರಕಾಶ್ ತಮಿಳುನಾಡು, ಮಹೇಂದ್ರ, ರಂಜನ್, ಸಂಪತ್, ಸಪ್ತ ಪಾವೂರ್, ಬಾಲಕೃಷ್ಣ ಪಿ, ನಾಗರಾಜ್
ನಿರ್ದೇಶನ: ರಿಷಬ್ ಶೆಟ್ಟಿ
ರೇಟಿಂಗ್: ****
ವೀಕ್ಷಕರ ವಿಮರ್ಶೆ ಇದು