ಜ.26ರ ಪಥಸಂಚಲನಕ್ಕೆ ಕರ್ನಾಟಕದ ಸ್ತಬ್ಧ ಚಿತ್ರ ಅಂತಿಮ ಶಶಿಧರ ಅಡಪ ವಿನ್ಯಾಸ, ಡಿ.ಪ್ರವೀಣ್ ರಾವ್ ಸಂಗೀತ

ನವದೆಹಲಿ : ದಿನ ವರ್ಷದ ಗಣರಾಜ್ಯೋತ್ಸವದಂದು ರಾಷ್ಟ್ರಪತಿ ಭವನದ ಮುಂದೆ ರಾಜ್ಯದ ಹುಲಿ ಘರ್ಜಿಸಲಿದೆ, ಗಜರಾಜ ಘಿಘೀಳಿಡಲಿದೆ, ಕರುನಾಡ ಚಿರತೆ, ಕಾಡುಕೋಣಗಳು ತಿರುಗಾಡಲಿವೆ. ಮಲೆನಾಡ ಮಂಗಟ್ಟೆ, ಬಳ್ಳಾರಿಯ ಬೂದು ಹಕ್ಕಿಗಳೂ ಭೇಟಿ ನೀಡಲಿವೆ! ಹೌದು, ಜ.26ರಂದು ದೆಹಲಿಯ ರಾಜಪಥದಲ್ಲಿ 69ನೇ ಗಣರಾಜ್ಯೋತ್ಸವ ಪ್ರಯುಕ್ತ ನಡೆಯುವ ದೇಶದ ಹೆಮ್ಮೆಯ ಪಥ ಸಂಚಲನದಲ್ಲಿ ಕರ್ನಾಟಕದ ವನ್ಯವೈವಿಧ್ಯ, ಶ್ರೀಮಂತಿಕೆ ದೇಶ ವಿದೇಶಗಳ ಜನರ ಅನಾವರಣಗೊಳ್ಳಲಿದೆ.

ಗಣರಾಜ್ಯೋತ್ಸವ ಪರೇಡ್‌ನಲ್ಲಿ ‘ಕರ್ನಾಟಕದ ವನ್ಯಜೀವಿಗಳು’ ಸ್ತಬ್ಧ ಚಿತ್ರ ಈ ಬಾರಿ ರಾಜ್ಯದಿಂದ ಆಯ್ಕೆಯಾಗಿದೆ. ಕಳೆದ ವರ್ಷ ರಾಜ್ಯದ ‘ಜನಪದ ವೈವಿಧ್ಯ’ ವಿಶ್ವದ ಗಮನ ಸೆಳೆದಿದ್ದರೆ ಈ ವರ್ಷ ರಾಜ್ಯದ ‘ವನ್ಯವೈವಿಧ್ಯ’ಕ್ಕೆ ಈ ಅವಕಾಶ ಲಭಿಸಿದೆ. ದೇಶದ ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಈ ಬಾರಿ ಆಸಿಯಾನ್ ದೇಶಗಳ ಮುಖ್ಯಸ್ಥರ ಮುಂದೆ, ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಈ ಪಥ ಸಂಚಲನ ನಡೆಯಲಿದೆ.

ಅಂದ ಹಾಗೆ, ಈ ಪಥಸಂಚಲನದಲ್ಲಿ ಭಾಗವಹಿಸಲಿರುವ ಕರ್ನಾಟಕ ಸತತ 8ನೇ ವರ್ಷ ಭಾಗಿಯಾಗುವ ಅವಕಾಶ ಪಡೆದು ವಿಶಿಷ್ಟ ಸಾಧನೆ ಮಾಡಿದೆ. ರಾಜ್ಯದ ಸ್ತಬ್ಧ ಚಿತ್ರದಲ್ಲಿ ಆನೆ, ಹುಲಿ, ಸಿಂಗಳೀಕ, ಚಿರತೆ, ಕಾಡುಕೋಣ, ರಾಜ್ಯದ ರಾಜ್ಯ ಪಕ್ಷಿ ಸ್ಥಾನಮಾನ ಹೊಂದಿರುವ ನೀಲಕಂಠ, ಬೂದು ಹಕ್ಕಿ, ಮಂಗಟ್ಟೆ ಮುಂತಾದ ಪಕ್ಷಿಗಳು ಸೇರಿದಂತೆ ರಾಜ್ಯದ ಮರ, ಗಿಡಗಳ ಮಾದರಿಯನ್ನು ಹೊಂದಿರಲಿದೆ.

ವಿಶ್ವದ ಹುಲಿಗಳಲ್ಲಿ ಶೇ.12(408), ಭಾರತದ ಆನೆಗಳ ಸಂಖ್ಯೆಯಲ್ಲಿ 5ನೇ ಒಂದು ಕರ್ನಾಟಕದಲ್ಲಿದೆ. ಅಷ್ಟು ಮಾತ್ರವಲ್ಲದೆ, 4500 ಬಗೆಯ ಹೂವಿನ ಗಿಡಗಳು, 500ಕ್ಕೂ ಹೆಚ್ಚು ಜಾತಿಯ ಹಕ್ಕಿಗಳು, 300 ವಿಧದ ಚಿಟ್ಟೆಗಳು, 160 ವಿಧದ ಸಸ್ತನಿಗಳು, ಅನೇಕ ವಿಧದ ಸರೀಸೃಪಗಳು, 70 ವಿಧದ ಕಪ್ಪೆಗಳು, 600 ಕ್ಕೂ ಹೆಚ್ಚು ಜಾತಿಯ ಮೀನುಗಳು, ನೂರಾರು ಔಷಧ ಗಿಡಗಳಿಗೆಕರ್ನಾಟಕ ಮನೆಯಾಗಿದೆ. ದೇಶದಲ್ಲಿನ ಹೂವಿನ ಗಿಡಗ ಳಲ್ಲಿ ಶೇ.25 ಮತ್ತು ಪಕ್ಷಿಗಳಲ್ಲಿ ಶೇ. 40ರಷ್ಟು ಕರ್ನಾಟಕದಲ್ಲಿದೆ. ಇದನ್ನೇ ಮುಂದಿಟ್ಟುಕೊಂಡು ರಾಜ್ಯವು ತನ್ನ ಸ್ತಬ್ಧ ಚಿತ್ರಗಳ ಮೂಲಕ ಜಗತ್ತಿನ ಗಮನ ಸೆಳೆಯುವ ಆಶಯ ಇಟ್ಟುಕೊಂಡಿದೆ.

ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಸ್ತಬ್ಧ ಚಿತ್ರಕ್ಕೆ ಪ್ರವೀಣ್ ರಾವ್ ಹಿನ್ನೆಲೆ ಸಂಗೀತ ನೀಡಲಿದ್ದು, ಖ್ಯಾತ ವಿನ್ಯಾಸಕಾರ ಶಶಿಧರ ಅಡಪ ಸ್ತಬ್ಧ ಚಿತ್ರದ ವಿನ್ಯಾಸ ಮಾಡಲಿದ್ದಾರೆ. ಕರ್ನಾಟಕದೊಂದಿಗೆ 14 ರಾಜ್ಯಗಳ ಸ್ತಬ್ಧ ಚಿತ್ರಗಳು ರಾಜಪಥದಲ್ಲಿ ಹಾದುಹೋಗಲಿವೆ. ಇವುಗಳೊಂದಿಗೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ 7 ರಿಂದ 10 ಸ್ತಬ್ಧ ಚಿತ್ರಗಳು ಭಾಗವಹಿಸುವ ಸಾಧ್ಯತೆ ಇದೆ ಎಂದು ಹೇಳಿದರು.

ಗಮನಾರ್ಹ ಸಾಧನೆ: ರಾಜ್ಯವು 2011ರಲ್ಲಿ ಬಿದರಿ ಕಲೆ (ತೃತೀಯ ಸ್ಥಾನ), 2012ರಲ್ಲಿ ಭೂತಾರಾಧನೆ (ದ್ವಿತೀಯ ಸ್ಥಾನ), 2013ರಲ್ಲಿ ಕಿನ್ನಾಳ ಕಲೆ, 2014ರಲ್ಲಿ ಅಪ್ರತಿಮ ಹೋರಾಟಗಾರ ಟಿಪ್ಪು ಸುಲ್ತಾನ್, 2015ರಲ್ಲಿ ಚನ್ನಪಟ್ಟಣದ ಗೊಂಬೆ (ತೃತೀಯ ಸ್ಥಾನ), 2016ರಲ್ಲಿ ಕಾಫಿ ನಾಡು - ಕೊಡಗು ಮತ್ತು 2017ರಲ್ಲಿ ರಾಜ್ಯದ ಜನಪದ ವೈಭವ ಎಂಬ ಪರಿಕಲ್ಪನೆಯ ಸ್ತಬ್ಧ ಚಿತ್ರಗಳೊಂದಿಗೆ ಪಥ ಸಂಚಲನದಲ್ಲಿ ಭಾಗವಹಿಸಿತ್ತು. 2008ರಲ್ಲಿ ಪಟ್ಟದಕಲ್ಲು ಸ್ತಬ್ಧ ಚಿತ್ರ ರಾಜ್ಯವನ್ನು ಪ್ರತಿನಿಧಿಸಿತ್ತು.

2006ರಲ್ಲಿ ಬಾಹುಬಲಿ ಮೂರ್ತಿಯ ಮಸ್ತಾಕಾಭಿಷೇಕ ಸ್ತಬ್ಧ ಚಿತ್ರಕ್ಕೆ ರಾಜ್ಯ ಪ್ರಥಮ ಸ್ಥಾನ ಪಡೆದಿತ್ತು. ಸ್ತಬ್ಧಚಿತ್ರದಲ್ಲಿ ಭಾಗಿಯಾಗುವ ವಿಷಯಗಳ ಪಟ್ಟಿ ರಚನೆ, ಸಮನ್ವಯ, ನಿರ್ಮಾಣ ಹೊಣೆ ಎಲ್ಲವೂ ರಾಜ್ಯ ವಾರ್ತಾ ಇಲಾಖೆಯದ್ದು. ಜನವರಿ ಮೊದಲ ವಾರದಿಂದ ಸ್ತಬ್ಧಚಿತ್ರ ನಿರ್ಮಾಣ ಚಟುವಟಿಕೆ ಮತ್ತು ಪಥಸಂಚಲನದ ತರಬೇತಿ ಕಾರ್ಯಕ್ರಮಗಳು ರಕ್ಷಣಾ ಇಲಾಖೆಯ ಮೇಲುಸ್ತುವಾರಿಯಲ್ಲಿ ನಡೆಯಲಿದೆ.