ಬೆಂಗಳೂರು[ಜು.09]: ಕರ್ನಾಟಕ ರಾಜಕೀಯದಲ್ಲಿ ಮಹತ್ತರ ಬೆಳವಣಿಗಳು ನಡೆಯುತ್ತಿದ್ದು, ರಾಷ್ಟ್ರಾದ್ಯಂತ ಸದ್ದು ಮಾಡುತ್ತಿದೆ. ಕಳೆದೊಂದು ವಾರದಿಂದ  ದೋಸ್ತಿ ಸರ್ಕಾರದ ಅನೇಕ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಮುಂಬೈ ಹೊಟೇಲ್ ಹಾದಿ ಹಿಡಿದಿದ್ದರು. ಆದರೀಗ ರಾಜೀನಾಮೆ ನೀಡಿರುವ ಶಾಸಕರಿಗೆ ಕಾಂಗ್ರೆಸ್ ಶಾಕ್ ನೀಡಿದೆ. ಅತೃಪ್ತ ಶಾಸಕರ ವಿರುದ್ಧ ಕಾಂಗ್ರೆಸ್ ಪಕ್ಷ ಅನರ್ಹತೆ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ. 

"

ಶಾಸಕಾಂಗ ಸಭೆ ಬಳಿಕ ಶಾಸಕರ ರಾಜೀನಾಮೆ ಹಾಗೂ ಪಕ್ಷದ ಮುಂದಿನ ನಡೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ 'ರಾಜೀನಾಮೆ ನೀಡಿದ ಶಾಸಕರನ್ನು ಪಕ್ಷ ವಿರೋಧಿ ಚಟುವಟಿಕೆ ಪ್ರಕಾರ ಕ್ರಮ ಕೈಗೊಳ್ಳಲು ಮುಂದಾಗಿದ್ದೇವೆ. 14 ಶಾಸಕರ ಅನರ್ಹತೆ ಕೋರಿ ಸ್ಪೀಕರ್ ಗೆ ದೂರು ನೀಡುತ್ತೇವೆ. ಈ ಶಾಸಕರು ಪಕ್ಷ ವಿರೋಧಿ ಚಟುವಟಿಕೆ ನಡೆಸಿ ಸಿಕ್ಕಿಬಿದ್ದಿದ್ದಾರೆ. ಆರ್ಟಿಕಲ್ 164-1ಬಿ ಪ್ರಕಾರ ಶಾಸಕರನ್ನು ಅನರ್ಹಗೊಳಿಸಬಹುದು. ಒಂದು ಬಾರಿ ಅನರ್ಹಗೊಳಿಸಿದರೆ ಚುನಾವಣೆಗೆ ನಿಲ್ಲುವಂತಿಲ್ಲ. 6 ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ಕ್ರಮ ಕೈಗೊಳ್ಳಲು ಮನವಿ ಮಾಡುತ್ತೇವೆ' ಎಂನ್ನುವ ಮೂಲಕ ಕೊನೆಯ ವಾರ್ನಿಂಗ್ ನೀಡಿದ್ದಾರೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಾಜೀನಾಮೆ ಅಂಗೀಕಾರಗೊಳ್ಳುವ ವಿಚಾರವಾಗಿ ಪ್ರತಿಕ್ರಿಯಸಿದ ಸಿದ್ದರಾಮಯ್ಯ 'ಶಾಸಕರ ರಾಜೀನಾಮೆ ಸ್ವಯಂಪ್ರೇರಿತವಲ್ಲ. ರಾಜೀನಾಮೆ ಸ್ವಯಂ ಪ್ರೇರಿತ ಎಂಬುದನ್ನು ಸ್ಪೀಕರ್ ಖಚಿತಪಡಿಸಿಕೊಳ್ಳಬೇಕು. ರಾಜೀನಾಮೆ ಅಂಗೀಕಾರ ಸ್ಪೀಕರ್ ವಿವೇಚನಗೆ ಬಿಟ್ಟದ್ದು' ಎಂದಿದ್ದಾರೆ.

"

ಇದೇ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಕಿಡಿ ಕಾರಿರುವ ಮಾಜಿ ಸಿಎಂ 'ಸರ್ಕಾರ ಬೀಳಿಸುವ ಷಡ್ಯಂತ್ರದಲ್ಲಿ ಮೋದಿ, ಅಮಿತ್ ಶಾ ಭಾಗಿಯಾಗಿದ್ದಾರೆ. ಬಿಜೆಪಿಯ ಈ ನಡೆ ಜನಾದೇಶ, ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ಅವರು ಹಣ, ಅಧಿಕಾರದ ಆಮಿಷವೊಡ್ಡುತ್ತಿದ್ದಾರೆ. ಬಿಜೆಪಿಗೆ ಎಲ್ಲಿಂದ ಹಣ ಬರುತ್ತಿದೆ? ಯಾರು ಹಣ ನೀಡುತ್ತಿದ್ದಾರೆ? ಈ ಹಣ, ರಾಜಕೀಯ ಬಲದಿಂದ ಸರ್ಕಾರ ಅಸ್ಥಿರತೆಗೆ ಯತ್ನಿಸುತ್ತಿದ್ದಾರೆ. ಸರ್ಕಾರ ಬೀಳಿಸಲು 6ನೇ ಬಾರಿ ಬಿಜೆಪಿ ಯತ್ನಿಸುತ್ತಿದೆ. ಬಿಜೆಪಿ ನಾಯಕರು ಜನಾದೇಶಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ' ಎಂದು ಆರೋಪಿಸಿದ್ದಾರೆ.

ಸದ್ಯ ಕಾಂಗ್ರೆಸ್ ಪಕ್ಷದ ಈ ನಿರ್ಧಾರ ರಾಜೀನಾಮೆ ನೀಡಿದ ಅತೃಪ್ತ ಶಾಸಕರಿಗೆ ಕೊಂಚ ತಲೆನೋವು ಕೊಟ್ಟಿದೆ ಎಂಬುವುದರಲ್ಲಿ ಅನುಮಾನವಿಲ್ಲ. ಮುಂದೆ ತಮ್ಮ ರಾಜೀನಾಮೆಯನ್ನು ಹಿಂಪಡೆಯುತ್ತಾರೋ? ಅಥವಾ ಅನರ್ಹಗೊಂಡರೂ ಪರವಾಗಿಲ್ಲ ಎಂದು ಗಟ್ಟಿಯಾಗಿ ನಿಲ್ಲುತ್ತಾರೋ ಕಾದುನೋಡಬೇಕು.