ಗೋಕಾಕ[ಸೆ.23]: ಶಾಸಕ ಸತೀಶ ಜಾರಕಿಹೊಳಿ ಅವರು ಬಹಳಷ್ಟುಜನರಿಗೆ ಅನ್ಯಾಯ ಮಾಡಿದ್ದಾರೆ. ಅಕ್ರಮ ಎಸಗಿದ್ದಾರೆ. ಅದನ್ನು ನಾನು ಬಹಿರಂಗಪಡಿಸಿದರೆ ಜಾರಕಿಹೊಳಿ ಮನೆತನದ ಮರ್ಯಾದೆ ಹೋಗುತ್ತದೆ ಅದಕ್ಕಾಗಿ ನಾನು ಅದನ್ನು ಬಹಿರಂಗ ಪಡಿಸುವದಿಲ್ಲ ಎಂದು ಬೆಳಗಾವಿ ಜಿಲ್ಲೆಯ ಗೋಕಾಕ ಕ್ಷೇತ್ರದ ಅನರ್ಹ ಶಾಸಕ ರಮೇಶ ಜಾರಕಿಹೊಳಿ ಅವರು ತಮ್ಮ ಸಹೋದರ ವಿರುದ್ಧ ವಾಗ್ದಾಳಿ ನಡೆಸಿದರು.

ಗೋಕಾಕದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ನಾನು ಒಂದು ವಸ್ತು ಕಳೆದುಕೊಂಡಿದ್ದೇನೆ ಎಂದು ಶಾಸಕ ಸತೀಶ್‌ ಜಾರಕಿಹೊಳಿ ಅವರು ಪದೇ ಪದೆ ಹೇಳುತ್ತಿದ್ದಾರೆ. ಆ ವಸ್ತು ಯಾವುದು? ಬಹಿರಂಗ ಪಡಿಸಲಿ. ಸತೀಶ ಯಾವ ವೇದಿಕೆಯ ಮೇಲೆ ಬಂದು ಹೇಳುತ್ತಾನೆ. ನಾನು ನೋಡುತ್ತೇನೆ. ಅದೇ ವೇದಿಕೆಯಲ್ಲಿ ನಾನ್ಯಾರು? ಎಂದು ತೋರಿಸುತ್ತೇನೆ ಎಂದು ಹೇಳುವ ಮೂಲಕ ಸಹೋದರನ ವಿರುದ್ಧ ರಮೇಶ ಕೆಂಡಾಮಂಡಲವಾದರು.

ಸುಪ್ರೀಂನಲ್ಲಿ ಜಯ ನಮ್ಮದೆ:

ಸುಪ್ರಿಮ್‌ ಕೋರ್ಟ್‌ನಲ್ಲಿ ಜಯ ನಮ್ಮದೆ. ನಮ್ಮ ಕ್ಷೇತ್ರದಲ್ಲಿ ನಾನೇ ಸ್ಪರ್ಧಿಸುತ್ತೇನೆ. ಆದರೆ ಯಾವ ಪಕ್ಷದಿಂದ ಅಂತಾ ಇನ್ನು ನಿರ್ಧರಿಸಿಲ್ಲ ಎಂದು ಶಾಸಕತ್ವದ ಅನರ್ಹ ಪ್ರಕರಣ ಕುರಿತು ರಮೇಶ ಪ್ರತಿಕ್ರಿಯೆ ನೀಡರು.

ಸತೀಶ ಜಾರಿಹೊಳಿ ಕ್ಷೇತ್ರದಲ್ಲಿ ಪಿಎಗಳ ಹಾವಳಿ ಇದೆ. ಅಂಬಿರಾವ್‌ ಪಾಟೀಲ್‌ ಕ್ಷೇತ್ರದ ಜನರ ಪ್ರೀತಿ, ವಿಶ್ವಾಸ ಗಳಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಆದರೆ ಅಂಬಿರಾವ್‌ ಪಾಟೀಲ್‌ ತಪ್ಪು ಮಾಡುತ್ತಿದ್ದಾನೆ ಎಂದು ಯಾರಾದರೂ ಹೇಳಿದ್ರೆ ಇಂದೇ ಅಂಬಿರಾವ್‌ ಪಾಟೀಲ ಅವರನ್ನು ನನ್ನ ಕಚೇರಿಯಿಂದ ಹೊರಗೆ ಹಾಕುತ್ತೇನೆ. ಸತೀಶ್‌ ನಮ್ಮ ಕ್ಷೇತ್ರ ಸುತ್ತಿ ಮುಜುಗರ ಉಂಟಾಗುವ ರೀತಿ ಮಾತನಾಡುತ್ತಿದ್ದಾರೆ. ಇಂತಹ ಮಾತುಗಳಿಗೆ ಕ್ಷೇತ್ರದ ಜನರು ಕಿವಿಗೊಡಬಾರದು ಎಂದು ಅಂಬಿರಾವ್‌ ಪಾಟೀಲ್‌ ವಿರುದ್ಧ ಸತೀಶ್‌ ಜಾರಕಿಹೊಳಿ ಆರೋಪ ವಿಚಾರವಾಗಿ ರಮೇಶ್‌ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.

ಕ್ಷೇತ್ರದ ಜನ ನನ್ನ ಮೇಲೆ ಪ್ರೀತಿ ಇಟ್ಟುಕೊಂಡಿದ್ದಾರೆ. ಅವರ ವಿಶ್ವಾಸ ಇರೋವರೆಗೂ ನಾನು ಹೀರೋ. ಕ್ಷೇತ್ರದ ಜನ ಕೈಬಿಟ್ಟದಿನವೇ ನಾನು ಜೀರೋ ಎಂದು ಅನರ್ಹ ಶಾಸಕ ರಮೇಶ ಜಾರಕಿಹೊಳಿ ಸಹೋದರ ಸತೀಶಗೆ ಚಾಟಿ ಬೀಸಿದ್ದಾರೆ.

ಕ್ಷೇತ್ರದ ಜನರು ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ನಾನು ನಾಮಪತ್ರ ಸಲ್ಲಿಸಿ ಎಲ್ಲಿ ಕುಳಿತರೂ ನನ್ನ ಗೆಲ್ಲಿಸುವ ಶಕ್ತಿ ನಮ್ಮ ಜನರಿಗಿದೆ. ನಾನು ಕ್ಷೇತ್ರದ ಜನರ ವಿಶ್ವಾಸ ಗಳಿಸಿದ್ದೇನೆ. ಪ್ರವಾಹ ಸಂದರ್ಭದಲ್ಲಿ ಕೆಲಸ ಮಾಡಿದ್ದೇನೆ ಎಂದರು.

ಕಾನೂನಿನಡಿ ನಾನು ಅನರ್ಹ ಆಗಿರಬಹುದು. ಆದರೆ, ಕ್ಷೇತ್ರದಲ್ಲಿ ಯಾವತ್ತಿಗೂ ಅನರ್ಹ ಅಲ್ಲ. ಜನ ನನ್ನ ಹಿಂದೆ ಇರುವವರೆಗೂ ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಗೋಕಾಕ ಸಾಮ್ರಾಜ್ಯವನ್ನು ಕಟ್ಟಿದ್ದು ನನ್ನ ತಂದೆ ಲಕ್ಷ್ಮಣರಾವ್‌ ಜಾರಕಿಹೊಳಿ. ಸತೀಶ ಜಾರಕಿಹೊಳಿ ಅವರು ಮತದಾರರಿಗೆ ಟೋಪಿ ಹಾಕಿ ಕ್ಷೇತ್ರದಲ್ಲಿ ಪ್ರಚಾರ ಮಾಡಿದರೂ ಇಲ್ಲಿ ಗೆಲ್ಲುವುದು ನಾನೇ ಎಂದು ಹೇಳಿದರು.

ಅತೀ ಶೀಘ್ರದಲ್ಲೇ ನನ್ನ ಮುಂದಿನ ನಡೆ ಬಗ್ಗೆ ತಿಳಿಸುತ್ತೇನೆ ಎಂದಿರುವ ರಮೇಶ್‌, ಮತದಾರರು ಯಾರೂ ಸಂಶಯ ಮತ್ತು ಡೈವರ್ಟ್‌ ಆಗೊದು ಬೇಡ. ಅಂಬಿರಾವ್‌ ಪಾಟೀಲ್‌ ಕಳೆದ ಮೂವತ್ತು ವರ್ಷಗಳಿಂದ ಗೋಕಾಕ್‌ನಲ್ಲೇ ಬಂದುಳಿದಿದ್ದಾನೆ. ಯಾವುದೇ ಕೇಸ್‌ ಬಂದರೂ ಕೋರ್ಟ್‌ಗೆ ಕಳುಹಿಸದೆ ಇಲ್ಲೇ ಇತ್ಯರ್ಥಪಡಿಸಿ ಕಳುಹಿಸುತ್ತಾರೆ. ಬಡ ಜನರಿಗೆ ಈ ಮೂಲಕ ಅನುಕೂಲ ಮಾಡುತ್ತಿದ್ದಾನೆ ಎಂದು ಸ್ಪಷ್ಟಪಡಿಸಿದರು.

ನಾನು ರಾಜೀನಾಮೆ ಕೊಟ್ಟದಿನವೇ ಚುನಾವಣೆಗೆ ಸ್ಪರ್ಧೆ ಮಾಡಲು ಮಾನಸಿಕವಾಗಿ ಸಿದ್ಧನಾಗಿದ್ದೇನೆ. ಕಾನೂನು ಅಡಚಣೆ, ತಾಂತ್ರಿಕ ಸಮಸ್ಯೆ ಬಗ್ಗೆ ವಕೀಲರೊಂದಿಗೆ ಚರ್ಚೆ ಮಾಡುತ್ತೇವೆ. ಅನರ್ಹರು ಚುನಾವಣೆಗೆ ಸ್ಪರ್ಧಿಸಲು ಬರುವುದಿಲ್ಲ ಅಂತಾ ಮುಖ್ಯ ಚುನಾವಣಾ ಅಧಿಕಾರಿ ಸ್ಪೀಕರ್‌ ಅವರ ಆದೇಶ ಓದಿ ಹೇಳಿದ್ದಾರೆ. ಸ್ಪೀಕರ್‌ ರಮೇಶ್‌ ಕುಮಾರ್‌ ಆದೇಶ ಸುಪ್ರಿಂ ಕೋರ್ಟ್‌ ನಲ್ಲಿ ಒಂದು ತಾಸು ನಿಲ್ಲುವುದಿಲ್ಲ. ರಮೇಶ್‌ ಕುಮಾರ್‌ ಕಾನೂನು ಬಾಹಿರವಾಗಿ ಆದೇಶ ಮಾಡಿದ್ದಾರೆ ಎಂದು ರಮೇಶ್‌ ಜಾರಕಿಹೊಳಿ ಕಿಡಿಕಾರಿದರು.

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು, ಅ.24ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.