ಶ್ರೀರಾಮುಲುಗೆ ಕನ್ನಡ ವ್ಯಾಕರಣ ಪಾಠ ಮಾಡಿದ ಸಿದ್ದರಾಮಯ್ಯ
ಸಿದ್ದರಾಮಯ್ಯಗೆ ಸರಿಯಾಗಿ ಕನ್ನಡ ಮಾತನಾಡಲು ಬರುವುದಿಲ್ಲ. ಕ್ಷ-ಪಕ್ಷ ಅನ್ನಲೇ ಬರೋದಿಲ್ಲ ಎನ್ನುವ ಶ್ರೀ ರಾಮುಲು ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಬಳ್ಳಾರಿ : ‘ಸಿದ್ದರಾಮಯ್ಯ ಅವರಿಗೆ ಲಕ್ಷ-ಪಕ್ಷ ಅನ್ನಲೇ ಬರೋದಿಲ್ಲ’ ಎಂಬ ಮಾಜಿ ಸಚಿವ ಶ್ರೀರಾಮುಲು ಅವರ ಟೀಕೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ, ‘ಕ್ಷ’ ಸ್ವತಂತ್ರ ಅಕ್ಷರನಾ ಅಥವಾ ಸಂಯುಕ್ತ ಅಕ್ಷರನಾ ಎಂದು ನಿಮಗೆ ಗೊತ್ತಾ? ಸಂಯುಕ್ತ ಹೇಗಾಯಿತು ಎಂದು ಗೊತ್ತಾ ಎಂದು ಶ್ರೀರಾಮುಲುಗೆ ಏಕವಚನದಲ್ಲೇ ಕನ್ನಡಪಾಠ ಮಾಡಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ‘ಲಕ್ಷ’ ‘ಪಕ್ಷ’ ಎಂದು ಉಚ್ಛರಿಸಲು ಬರುತ್ತದೆ. ಅದನ್ನು ನಾನು ನಿಮ್ಮಿಂದ ಕಲಿಯಬೇಕಾಗಿಲ್ಲ. ನನಗೆ ಕನ್ನಡ ಹೇಳಿಕೊಡಲು ಬರಬೇಡ. ಕನ್ನಡದಲ್ಲಿ ಸ್ವರ, ವ್ಯಂಜನ, ಅನುನಾಸಿಕ, ಹೃಸ್ವಸ್ವರ, ಅಲ್ಪಪ್ರಾಣ, ಮಹಾಪ್ರಾಣ ಎಲ್ಲವೂ ನನಗೆ ಗೊತ್ತಿದೆ. ನಿನಗೆ ಗೊತ್ತಿದೆಯಾ ಶ್ರೀರಾಮುಲು ಎಂದು ಪ್ರಶ್ನಿಸಿದರು.
ಉಗ್ರಪ್ಪ ರಾಜಕಾರಣಕ್ಕೆ ಬಂದಾಗ ಈ ರಾಮುಲು, ರೆಡ್ಡಿಗಳು ಎಲ್ಲಿದ್ದರು? ಬಹುಶಃ ರಾಜಕೀಯದಲ್ಲಿ ಇನ್ನೂ ಕಣ್ಣೂ ತೆರೆದಿರಲಿಲ್ಲ ಅನಿಸುತ್ತೆ ಎಂದರಲ್ಲದೆ ಶ್ರೀರಾಮುಲುಗಿಂತ ವಾಲ್ಮೀಕಿ ಬಗ್ಗೆ ನನಗೆ ಹೆಚ್ಚಿನ ಗೌರವ ಇದೆ. ವಾಲ್ಮೀಕಿ ಜಾತಿಯ ಸಂಕೇತವಲ್ಲ. ಅವರು ಇಡೀ ಮನುಕುಲಕ್ಕೆ ಬೇಕಾದ ಮಹಾಕವಿ ಎಂದರು.
ವಿ.ಎಸ್. ಉಗ್ರಪ್ಪ ಅವರು ವಿಧಾನಸೌಧ ಆವರಣದಲ್ಲಿ ವಾಲ್ಮೀಕಿ ಪುತ್ಥಳಿ ನಿರ್ಮಾಣಕ್ಕೆ ಶ್ರಮಿಸಿದರು. ಕನಕದಾಸರ ಪುತ್ಥಳಿ ನಿರ್ಮಾಣಕ್ಕೆ ಶ್ರಮಿಸಿದರು. ಇಂತಹ ವ್ಯಕ್ತಿ ಲೋಕಸಭೆ ಪ್ರವೇಶಿಸಿದರೆ ಬಳ್ಳಾರಿ ಜಿಲ್ಲೆ ಅಭಿವೃದ್ಧಿಯಾಗುತ್ತದೆ. ನರೇಂದ್ರ ಮೋದಿಯನ್ನು ಹಿಡಿದು ಕೇಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಬಂಗಾರದ ಬದುಕು ಹೇಗೆ ಬಂತು?:
ಸಿದ್ದರಾಮಯ್ಯ ಅವರು ಇದೇ ವೇಳೆ ಜನಾರ್ದನ ರೆಡ್ಡಿ ಅವರನ್ನೂ ತೀವ್ರ ತರಾಟೆಗೆ ತೆಗೆದುಕೊಂಡರು. ರೆಡ್ಡಿಗೆ ಇದ್ದಕ್ಕಿದ್ದಂತೆ ಬಂಗಾರದ ಬದುಕು ಹೇಗೆ ಬಂತು? ಯಾವುದೇ ಪ್ರಬಲ ಸಾಕ್ಷಿ ಇಲ್ಲದೆ ಅವರು ಜೈಲಿಗೆ ಹೋದರೆ? ಹಾಗಾದರೆ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ತಮ್ಮ ವರದಿಯಲ್ಲಿ ಇವರ ಬಗ್ಗೆ ಏನು ಹೇಳಿದ್ದಾರೆ ಎಂದು ಕೇಳಿದರಲ್ಲದೆ, ರೆಡ್ಡಿಯನ್ನು ಬಿಜೆಪಿಗೆ ಸೇರಿಸಿಕೊಂಡಿಲ್ಲ. ಆತನೇ ಮೇಲೆ ಬಿದ್ದು ಹೋಗುತ್ತಿದ್ದಾನೆ. ಮನುಷ್ಯತ್ವ ಇಲ್ಲದ ವ್ಯಕ್ತಿ ಎಂದು ಏಕವಚನದಲ್ಲೇ ಆಕ್ರೋಶ ವ್ಯಕ್ತಪಡಿಸಿದರು.
ಬಿ.ಎಸ್.ಯಡಿಯೂರಪ್ಪಗೆ ಮಲಗಿದಾಗಲೂ ವಿಧಾನಸೌಧದ ಮೂರನೇ ಮಹಡಿ ಕಾಣುತ್ತದೆ. ಯಡಿಯೂರಪ್ಪ ಸರ್ಕಾರ ಬೀಳುತ್ತದೆ ಎಂದು ಕನಸು ಕಾಣುತ್ತಿದ್ದಾರೆ. ಆದರೆ, ಕನಸಷ್ಟೇ ಎಂದ ಸಿದ್ದರಾಮಯ್ಯ, ಶೋಭಾ ಕರಂದ್ಲಾಜೆ ಹಾಗೂ ಯಡಿಯೂರಪ್ಪ ಸೇರಿ ನೂರು ಬಾರಿ ಹೇಳಿದರೂ ಮೈತ್ರಿ ಸರ್ಕಾರಕ್ಕೆ ಏನೂ ಆಗುವುದಿಲ್ಲ ಎಂದು ತಿಳಿಸಿದರು.