ಬೆಂಗಳೂರು[ಜು.16]: ಅತೃಪ್ತ ಶಾಸಕರು ಅನರ್ಹರಾಗಲಿ ಎಂಬ ದುರುದ್ದೇಶ ಬಿಜೆಪಿ ನಾಯಕರಿಗೆ ಇದೆ. ಅನರ್ಹರಾದ ನಂತರ ಈ ಶಾಸಕರನ್ನು ಬಿಜೆಪಿ ನಿರ್ಲಕ್ಷಿಸಲಿದೆ. ಇದರಿಂದಾಗಿ ‘ಬಿ ಫಾರಂ’ಗಾಗಿ ಬಿಜೆಪಿ ಕಚೇರಿ ಎದುರು ಬೇಡುತ್ತಾ ನಿಲ್ಲುವ ಸ್ಥಿತಿ ಬರುತ್ತದೆ. 

ಹೀಗೆಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಅತೃಪ್ತ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತೃಪ್ತ ಶಾಸಕರು ಅನರ್ಹರಾಗಬೇಕೆಂಬುದು ಬಿಜೆಪಿ ನಾಯಕರ ಒಳ ಉದ್ದೇಶ. ಕಾಂಗ್ರೆಸ್‌ ಶಾಸಕ ಎಂ.ಟಿ.ಬಿ. ನಾಗರಾಜ್‌ ಮುಂಬೈಗೆ ಹೋಗುವಾಗ ಅವರ ಜೊತೆ ಬಿಜೆಪಿ ನಾಯಕರಾದ ಯಡಿಯೂರಪ್ಪ ಅವರ ಪುತ್ರ ಮತ್ತು ಆರ್‌.ಅಶೋಕ್‌ ಹೋಗಿದ್ದೇಕೆ? ಈ ರೀತಿ ಬಿಜೆಪಿ ನಾಯಕರೊಂದಿಗೆ ಕಾಣಿಸಿಕೊಂಡರೆ ಅದು ಅನರ್ಹತೆಗೆ ಅವಕಾಶ ನೀಡಿದಂತೆ ಆಗುತ್ತದೆ. ಈ ತಂತ್ರವನ್ನು ಅತೃಪ್ತ ಶಾಸಕರು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅತೃಪ್ತ ಶಾಸಕರು ನಮ್ಮ ಆಪ್ತ ಸ್ನೇಹಿತರು. ಹಲವು ವರ್ಷಗಳಿಂದ ನಮ್ಮ ಜೊತೆ ಇದ್ದಾರೆ. ಅವರ ರಾಜೀನಾಮೆಯಿಂದ ಸರ್ಕಾರ ಬಿದ್ದು ಹೋಗಬಹುದು. ಆದರೆ, ಅತೃಪ್ತರು ಅನರ್ಹಗೊಂಡರೆ ಮಂತ್ರಿಗಳಾಗಲು ಸಾಧ್ಯವಿಲ್ಲ. ಹೀಗಾಗಿ ಅವರನ್ನು ಅನರ್ಹಗೊಳಿಸಿ ತಾವು ಅಧಿಕಾರ ಹಿಡಿಯಲು ಬಿಜೆಪಿ ಸಂಚು ರೂಪಿಸಿದೆ. ಇದು ಶಾಸಕರಿಗೆ ಅರ್ಥವಾಗುತ್ತಿಲ್ಲ. ಶಾಸಕರನ್ನು ಅನರ್ಹಗೊಳಿಸಲು ನಮಗೂ ಇಷ್ಟವಿಲ್ಲ. ವಾಪಸ್‌ ಬಂದು ರಾಜೀನಾಮೆ ವಾಪಸ್‌ ಪಡೆದರೆ ಅನರ್ಹತೆ ಭೀತಿ ತಪ್ಪುತ್ತದೆ. ಸರ್ಕಾರದಲ್ಲಿ ಸೂಕ್ತ ಸ್ಥಾನಮಾನವೂ ಸಿಗುತ್ತದೆ ಎಂದರು.