ಬೆಂಗಳೂರು[ಜು.12]: ಕಾಂಗ್ರೆಸ್‌ನ ಅತೃಪ್ತ ಶಾಸಕ ಎಸ್‌.ಟಿ. ಸೋಮಶೇಖರ್‌ ಅವರ ಮನವೊಲಿಸಲು ಕಾಂಗ್ರೆಸ್‌ ನಾಯಕ ಡಿ.ಕೆ. ಶಿವಕುಮಾರ್‌ ಬುಧವಾರ ಮಧ್ಯರಾತ್ರಿ ಸೋಮಶೇಖರ್‌ ನಿವಾಸಕ್ಕೆ ತೆರಳಿ ಕಾದು ಕುಳಿತು ಕೊನೆಗೆ ಬರಿಗೈಯಲ್ಲಿ ವಾಪಾಸಾಗಿರುವ ಪ್ರಸಂಗ ಜರುಗಿದೆ.

ಕರ್ನಾಟಕ ವಸತಿ ಮಹಾಮಂಡಲದ ಚುನಾವಣೆ ಹಿನ್ನೆಲೆಯಲ್ಲಿ ಶಾಸಕ ಎಸ್‌.ಟಿ.ಸೋಮಶೇಖರ್‌ ಬುಧವಾರ ರಾತ್ರಿ ನಗರಕ್ಕೆ ಆಗಮಿಸುತ್ತಿರುವ ಮಾಹಿತಿ ತಿಳಿದು ಡಿ.ಕೆ.ಶಿವಕುಮಾರ್‌ ತಮ್ಮ ಆಪ್ತ ಕುಣಿಗಲ್‌ ಶಾಸಕ ಡಾ.ರಂಗನಾಥ್‌ ಜತೆಗೆ ನಗರದ ಬಿಟಿಎಂ ಲೇಔಟ್‌ನ ಎಸ್‌.ಟಿ.ಸೋಮಶೇಖರ್‌ ನಿವಾಸಕ್ಕೆ ತೆರಳಿದ್ದರು.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬುಧವಾರ ಶಿವಕುಮಾರ್‌ ಅವರು ಅತೃಪ್ತ ಶಾಸಕರ ಮನವೊಲಿಸಲು ಮುಂಬೈಗೆ ತೆರಳಿ ವಿಫಲರಾಗಿ ವಾಪಸ್‌ ಬೆಂಗಳೂರಿಗೆ ಬಂದಿದ್ದರು. ರಾತ್ರಿ ಸೋಮಶೇಖರ್‌ ಖಚಿತವಾಗಿ ಬೆಂಗಳೂರಿಗೆ ಬರಲಿದ್ದಾರೆಂಬ ಮಾಹಿತಿ ಮೇರೆಗೆ ಶಿವಕುಮಾರ್‌ ಮನವೊಲಿಸಲು ಮುಂದಾಗಿದ್ದರು.

ಆದರೆ ಎಸ್‌.ಟಿ.ಸೋಮಶೇಖರ್‌ ಸಹ ಬುಧವಾರ ರಾತ್ರಿಯೇ ಮುಂಬೈನಿಂದ ಬೆಂಗಳೂರಿಗೆ ಬಂದರೂ ಮನೆಗೆ ಹೋಗಲಿಲ್ಲ. ಮನೆಯಲ್ಲಿ ಡಿ.ಕೆ.ಶಿವಕುಮಾರ್‌ ತಮಗಾಗಿ ಕಾದುಕುಳಿತಿರುವ ವಿಚಾರ ತಿಳಿದು ಬೇರೆಡೆಗೆ ತೆರಳಿದ್ದರು. ಇತ್ತ ತಡರಾತ್ರಿ 1.30ರವರೆಗೂ ಕಾದರೂ ಸೋಮಶೇಖರ್‌ ಮನೆಯತ್ತ ಸುಳಿಯಲಿಲ್ಲ. ಸುಮಾರು ಒಂದು ತಾಸು ಸೋಮಶೇಖರ್‌ ಭೇಟಿಯಾಗಿ ಕಾದು ಕುಳಿತ್ತಿದ್ದ ಡಿ.ಕೆ.ಶಿವಕುಮಾರ್‌, ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಬರಿಗೈಯಲ್ಲಿ ವಾಪಸಾಗಿದ್ದಾರೆ.

ಈ ನಡುವೆ ಡಿ.ಕೆ.ಶಿವಕುಮಾರ್‌ ಅವರು ತಡರಾತ್ರಿ ಎಸ್‌.ಟಿ.ಸೋಮಶೇಖರ್‌ ನಿವಾಸಕ್ಕೆ ಧಾವಿಸಿರುವ ವಿಚಾರ ತಿಳಿದ ಮೈಕೋ ಲೇಔಟ್‌ ಠಾಣೆ ಪೊಲೀಸರು ರಾತ್ರೋರಾತ್ರಿ ಸೋಮಶೇಖರ್‌ ನಿವಾಸದ ಬಳಿ ದೌಡಾಯಿಸಿ ಬಿಗಿ ಬಂದೋಬಸ್‌್ತ ಕಲ್ಪಿಸಿದ್ದರು.