ಬೆಂಗಳೂರು[ಜು.13] :  ಶಾಸಕರ ಸರಣಿ ರಾಜೀನಾಮೆ ಹಿನ್ನೆಲೆಯಲ್ಲಿ ಇನ್ನೇನು ಸಮ್ಮಿಶ್ರ ಸರ್ಕಾರ ಪತನಗೊಳ್ಳಬಹುದು ಎಂಬ ಭೀತಿ ಉಂಟಾಗಿರುವ ನಡುವೆಯೇ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾತ್ರ ಖುಷಿ ಖುಷಿಯಾಗಿದ್ದಾರೆ. ಹಾಗಂತ ಖುದ್ದು ಕುಮಾರಸ್ವಾಮಿ ಅವರೇ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ.

ಆಡಳಿತಾರೂಢ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ 16 ಶಾಸಕರು ರಾಜೀನಾಮೆ ನೀಡಿದ್ದೂ ಅಲ್ಲದೆ ಸರ್ಕಾರಕ್ಕೆ ಬೆಂಬಲ ನೀಡಿದ್ದ ಇಬ್ಬರು ಪಕ್ಷೇತರ ಶಾಸಕರು ಸಚಿವ ಸ್ಥಾನವನ್ನೂ ಧಿಕ್ಕರಿಸಿ ಪ್ರತಿಪಕ್ಷ ಬಿಜೆಪಿ ಪಾಳೆಯ ಸೇರಿದ್ದಾರೆ. ಹೀಗಾಗಿ, ಶಾಸಕರ ರಾಜೀನಾಮೆ ಅಂಗೀಕಾರಗೊಂಡಲ್ಲಿ ಸರ್ಕಾರ ಪತನಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬ ಸನ್ನಿವೇಶವಿದೆ. ಆದರೂ ಕುಮಾರಸ್ವಾಮಿ ಅವರು ಮಾತ್ರ ಆತಂಕಕ್ಕೆ ಒಳಗಾಗದೆ ತಣ್ಣಗಿದ್ದುಕೊಂಡೇ ತೆರೆಮರೆಯಲ್ಲಿ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಶುಕ್ರವಾರ ಅಧಿವೇಶನದ ವೇಳೆ ತಮ್ಮ ಆಪ್ತರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು ಸರ್ಕಾರಕ್ಕೆ ಯಾವುದೇ ಆಪತ್ತು ಎದುರಾಗುವುದಿಲ್ಲ. ಸರ್ಕಾರ ಸುರಕ್ಷಿತವಾಗಿದೆ. ವಿಶ್ವಾಸಮತ ಯಾಚನೆ ನಿರ್ಣಯವನ್ನು ನಾನೇ ಮಂಡಿಸಿ ಗೆಲುವು ಸಾಧಿಸುತ್ತೇನೆ. ಹೀಗಾಗಿಯೇ ನಾನು ಆತಂಕಕ್ಕೆ ಒಳಗಾಗದೆ ಖುಷಿಯಾಗಿದ್ದೇನೆ ಎಂಬ ಮಾತುಗಳನ್ನು ಆಡಿದರು ಎನ್ನಲಾಗಿದೆ.

ರಾಜೀನಾಮೆ ನೀಡಿರುವ ಶಾಸಕರ ಪೈಕಿ ಹಲವರು ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ. ಆ ಪೈಕಿ ಅನೇಕರು ವಿಶ್ವಾಸಮತ ಯಾಚನೆ ದಿನದಂದು ವಾಪಸ್‌ ಬಂದು ಸರ್ಕಾರವನ್ನು ಬೆಂಬಲಿಸುತ್ತಾರೆ. ಈ ಬಗ್ಗೆ ಮಾತುಕತೆಯೂ ನಡೆದಿದೆ. ನನಗೆ ಯಾವ ಚಿಂತೆಯೂ ಇಲ್ಲ. ನನ್ನ ಮುಖದಲ್ಲೂ ಯಾವುದೇ ಆತಂಕದ ಛಾಯೆಗಳಿಲ್ಲ ಎಂದು ವಿಶ್ವಾಸದಿಂದ ಹೇಳಿದರು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.