ಬೆಂಗಳೂರು[ಜು.14]: ರಾಜ್ಯ ರಾಜಕೀಯ ವಲಯದಲ್ಲಿ ಕ್ಷಿಪ್ರ ಬೆಳವಣಿಗೆಗಳು ಘಟಿಸಿರುವ ಬೆನ್ನಲ್ಲೇ ಹೈಕಮಾಂಡ್‌ ಸೂಚನೆ ಮೇರೆಗೆ ರಾಜ್ಯ ಬಿಜೆಪಿ ನಾಯಕರು ಶನಿವಾರ ದೆಹಲಿಗೆ ತೆರಳಿದ್ದು, ತೀವ್ರ ಕುತೂಹಲ ಮೂಡಿಸಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾತ್ರಿ 9 ಗಂಟೆ ಸುಮಾರಿಗೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ಪಕ್ಷದ ವರಿಷ್ಠರ ಭೇಟಿ ಸಲುವಾಗಿ ದೆಹಲಿಗೆ ಪ್ರಯಾಣ ಬೆಳೆಸಿದರು.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ದೆಹಲಿಗೆ ತೆರಳುವ ಮುನ್ನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅರವಿಂದ ಲಿಂಬಾವಳಿ, ‘ದೆಹಲಿ ಭೇಟಿಯಲ್ಲಿ ವಿಶೇಷವೇನೂ ಇಲ್ಲ. ಕೆಲಸದ ನಿಮಿತ್ತ ದೆಹಲಿಗೆ ಆಗಾಗ್ಗೆ ಹೋಗುತ್ತಿರುತ್ತೇನೆ. ಅದೇ ರೀತಿ ಈಗಲೂ ಸಹ ಹೋಗುತ್ತಿರುವೆ’ ಎಂದು ಹಾರಿಕೆ ಉತ್ತರ ನೀಡಿದ್ದಾರೆ.

ಇತ್ತೀಚಿನ ಮೈತ್ರಿ ಪಕ್ಷದ ಶಾಸಕರ ರಾಜೀನಾಮೆ ಪರ್ವದ ಹಿಂದೆ ಅರವಿಂದ ಲಿಂಬಾವಳಿ ಅವರು ಪ್ರಮುಖ ಪಾತ್ರವಹಿಸಿದ್ದರು ಎನ್ನಲಾಗುತ್ತಿದೆ. ಅದೇ ರೀತಿ ಕಾಂಗ್ರೆಸ್‌ ವಿರುದ್ಧ ಬಂಡಾಯ ಸಾರಿದ್ದ ತಮ್ಮ ಸೋದರ ರಮೇಶ್‌ ಜಾರಕಿಹೊಳಿ ಬೆನ್ನಿಗೆ ಬಾಲಚಂದ್ರ ಜಾರಕಿಹೊಳಿ ನಿಂತಿದ್ದರು. ಹೀಗಾಗಿ ರಾಜ್ಯ ಸರ್ಕಾರದ ಭವಿಷ್ಯವು ಕ್ಲೈಮ್ಯಾಕ್ಸ್‌ ಹಂತದ ತಲುಪಿರುವ ಹೊತ್ತಿನಲ್ಲೇ ಈ ಇಬ್ಬರು ನಾಯಕರಿಗೆ ವರಿಷ್ಠರ ಕರೆ ಬಂದಿರುವುದು ಕುತೂಹಲಕ್ಕೆ ಕಾರಣವಾಗಿದೆ.