Asianet Suvarna News Asianet Suvarna News

ಸ್ಪೀಕರ್, ಸಿದ್ದರಾಮಯ್ಯ ಮೇಲೆ ಹೊಸ ಕಳಂಕ

ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಹೈ ಡ್ರಾಮ ಮುಂದುವರಿದಿದೆ. ಆದರೆ ಇದೇ ವೇಳೆ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಸಿದ್ದರಾಮಯ್ಯ ಮೇಲೆ ಹೊಸ ಕಳಂಕ ಅಂಟಿದೆ. 

Karnataka Political Crisis Again Floor test postponed
Author
Bengaluru, First Published Jul 23, 2019, 7:21 AM IST

ಬೆಂಗಳೂರು [ಜು.23]: ವಿಶ್ವಾಸ ಮತ ನಿರ್ಣಯ ಕುರಿತ ಹೈಡ್ರಾಮಾ ಸೋಮವಾರವೂ ಮುಂದುವರೆದಿದ್ದು, ತಡರಾತ್ರಿಯವರೆಗೂ ಕಲಾಪ ನಡೆದರೂ ಯಾವುದೂ ಇತ್ಯರ್ಥವಾಗಿರಲಿಲ್ಲ. ಯಾವುದೇ ಪರಿಸ್ಥಿತಿಯಲ್ಲೂ ಈ ಪ್ರಕ್ರಿಯೆಯನ್ನು ಸೋಮವಾರ ಪೂರ್ಣಗೊಳಿಸುವುದಾಗಿ ಸ್ಪೀಕರ್‌ ಕೆ.ಆರ್‌. ರಮೇಶ್‌ ಕುಮಾರ್‌ ಹಾಗೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸದನದಲ್ಲಿ ನೀಡಿದ್ದ ಭರವಸೆ ಹುಸಿಯಾಗಿದ್ದು, ಅವರು ವಚನಭ್ರಷ್ಟರಾಗಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದರು.

ವಿಶ್ವಾಸಮತ ಯಾಚನೆ ನಿರ್ಣಯದ ಪ್ರಕ್ರಿಯೆಯನ್ನು ಸೋಮವಾರವೇ ಮುಗಿಸೋಣ. ಈ ವಿಚಾರದಲ್ಲಿ ನನ್ನನ್ನು ವಚನಭ್ರಷ್ಟನನ್ನಾಗಿ ಮಾಡಬೇಡಿ ಎಂದು ಖಡಕ್ಕಾಗಿ ನುಡಿದಿದ್ದ ಸ್ಪೀಕರ್‌ ಕೆ.ಆರ್‌.ರಮೇಶ್‌ ವಚನಭ್ರಷ್ಟರಾಗಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಶುಕ್ರವಾರದ ಕಲಾಪದಲ್ಲಿ ಸೋಮವಾರ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪೂರ್ಣಗೊಳಿಸೋಣ ಎಂದಿದ್ದರು. ಆದರೆ, ಈಗ ಮಂಗಳವಾರದ ಆದೇಶ ಕಾದುನೋಡುವ ಉದ್ದೇಶದಿಂದ ಹೈಡ್ರಾಮಾ ಸೃಷ್ಟಿಸಿ ಸದನದ ಕಲಾಪವನ್ನು ತಡರಾತ್ರಿಯವರೆಗೂ ಲಂಬಿಸಲಾಗುತ್ತಿದೆ ಎಂದು ಬಿಜೆಪಿ ನಾಯಕರು ಮೊಗಸಾಲೆಯಲ್ಲಿ ಆರೋಪಿಸಿದರು.

ಶುಕ್ರವಾರದ ಕಲಾಪದ ವೇಳೆ ಇನ್ನೂ 20ಕ್ಕೂ ಹೆಚ್ಚು ಶಾಸಕರು ಈ ನಿರ್ಣಯದ ಮೇಲೆ ಮಾತನಾಡಬೇಕಿರುವುದರಿಂದ ಕಲಾಪವನ್ನು ಸೋಮವಾರ ಮುಂದೂಡೋಣ ಎಂದು ಸ್ಪೀಕರ್‌ ಹೇಳಿದ್ದರು. ಇದಕ್ಕೆ ಆಕ್ಷೇಪಿಸಿದ್ದ ಬಿಜೆಪಿಯು ಶುಕ್ರವಾರದ ಕಲಾಪದ ವೇಳೆ ಪ್ರತಿಪಕ್ಷ ಬಿಜೆಪಿ ಅಂದೇ ವಿಶ್ವಾಸಮತ ಯಾಚನೆ ನಿರ್ಣಯ ಪೂರ್ಣಗೊಳಿಸಲು ಪಟ್ಟು ಹಿಡಿದಿತ್ತು. ಆಗ ಸ್ಪೀಕರ್‌ ರಮೇಶ್‌ ಕುಮಾರ್‌ ಸಾಕಷ್ಟುಶಾಸಕರು ವಿಶ್ವಾಸಮತ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಬೇಕು ಎಂದಿದ್ದಾರೆ. ಮಾತನಾಡುವುದು ಶಾಸಕರ ಹಕ್ಕು. ಅವರ ಹಕ್ಕಿಗೆ ಚ್ಯುತಿ ಬರುವಂತೆ ನಡೆದುಕೊಳ್ಳಲು ಆಗುವುದಿಲ್ಲ. ಹೀಗಾಗಿ ಸದನವನ್ನು ಸೋಮವಾರ ನಡೆಸೋಣ. ಸೋಮವಾರ ಈ ಪ್ರಕ್ರಿಯೆ ಪೂರ್ಣಗೊಳಿಸೋಣ. ಅಂದು ಎಷ್ಟೇ ಹೊತ್ತಾದರೂ ನಿರ್ಣಯವನ್ನು ಮತಕ್ಕೆ ಹಾಕೋಣ ಎಂದು ಹೇಳಿ ಸದನವನ್ನು ಮುಂದೂಡಿದ್ದರು.

ಆದರೆ, ಸೋಮವಾರ ತಡರಾತ್ರಿಯವರೆಗೂ ಸನದವನ್ನು ನಡೆಸಲಾಯಿತಾದರೂ ನಿರ್ಣಯವನ್ನು ಮತಕ್ಕೆ ಹಾಕಲಿಲ್ಲ. ಇಡೀ ದಿನ ಸುದೀರ್ಘ ಚರ್ಚೆಯಲ್ಲೇ ಸದಸ್ಯರು ಕಾಲ ಕಳೆದರು. ಸಂಜೆ ವೇಳೆ ಮತ್ತೆ ಚರ್ಚೆಗೆ ಇನ್ನಷ್ಟುಕಾಲಾವಕಾಶ ಕೋರಿ ಸದನದಲ್ಲಿ ಮೈತ್ರಿಕೂಟದ ಸದಸ್ಯರು ಗದ್ದಲ ಎಬ್ಬಿಸಿದರು. ಇದರ ನಡುವೆ, ಕೆಲ ನಿಮಿಷ ಸದನ ಮುಂದೂಡಲ್ಪಟ್ಟಾಗ ಮುಖ್ಯಮಂತ್ರಿ ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ವಿವಿಧ ನಾಯಕರು ಸ್ಪೀಕರ್‌ ಕಚೇರಿಗೆ ತೆರಳಿ ಮಂಗಳವಾರ ಸುಪ್ರೀಂಕೋರ್ಟ್‌ನಲ್ಲಿ ನಾವು ಸಲ್ಲಿಸಿರುವ ಶಾಸಕರಿಗೆ ವಿಪ್‌ ಜಾರಿ ವಿಚಾರದ ಅರ್ಜಿ ವಿಚಾರಣೆ ಬರಲಿದೆ. ಅಲ್ಲದೆ, ಇನ್ನೂ ಕೆಲ ಶಾಸಕರು ಮಾತನಾಡಬೇಕಿದೆ. ಹಾಗಾಗಿ ಸದನವನ್ನು ಮುಂದೂಡಿ ಇನ್ನೂ ಒಂದೆರಡು ದಿನ ಚರ್ಚೆಗೆ ಅವಕಾಶ ನೀಡಿ ಎಂದು ಕೋರಿದರು. ಇದರ ಬೆನ್ನಲ್ಲೇ ಪ್ರತಿಪಕ್ಷ ನಾಯಕ ಯಡಿಯೂರಪ್ಪ ಕೂಡ ಸ್ಪೀಕರ್‌ ಕಚೇರಿಗೆ ತೆರಳಿ ಎಷ್ಟೇ ಹೊತ್ತಾದರೂ ನಾವು ಕೂರುತ್ತೇವೆ. ಇಂದೇ ವಿಶ್ವಾಸಮತ ಪ್ರಕ್ರಿಯೆ ಪೂರ್ಣಗೊಳಿಸಿ ಎಂದು ಪಟ್ಟು ಹಿಡಿದರು.

ಬಳಿಕ ಸ್ಪೀಕರ್‌ ಸದನ ಪುನಾರಂಭಿಸಿದಾಗ ಆಡಳಿತ ಪಕ್ಷದ ಸದಸ್ಯರು ಬೇಕೇ ಬೇಕು ನ್ಯಾಯ ಬೇಕು, ಸಂವಿಧಾನ ಉಳಿಸಿ ಎಂದು ಘೋಷಣೆ ಕೂಗಿ ಗದ್ದಲ ಎಬ್ಬಿಸಿದರು. ಸ್ಪೀಕರ್‌ ಎಷ್ಟೇ ಮನವಿ ಮಾಡಿದರೂ ಗದ್ದಲ ಮುಂದುವರೆಸಿದರು. ಬಳಿಕ ಸಿದ್ದರಾಮಯ್ಯ ಅವರು ಸೂಚಿಸಿದ ಮೇಲೆ ಶಾಸಕರು ತಮ್ಮ ಸ್ಥಳಗಳಿಗೆ ಹೋಗಿ ಕುಳಿತುಕೊಂಡರು. ಕೊನೆಗೆ 10 ಗಂಟೆಯಾದರೂ ಮತ್ತೆ ಕೆಲ ನಾಯಕರ ಮಾತು ಮುಂದುವರೆದಿತ್ತು. ಮುಖ್ಯಮಂತ್ರಿ ಅವರು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರು ಮತ್ತು ತಾವು ಮಾತನಾಡಬೇಕಿದೆ, ಹಾಗಾಗಿ ಸದನ ಮುಂದೂಡಬೇಕು ಎಂದು ಮತ್ತೆ ಮನವಿ ಮಾಡಿದರು. ಇದಕ್ಕೆ ಬೇಸರದಿಂದಲೇ ಮಾತನಾಡಿದ ಸ್ಪೀಕರ್‌, ರಾಜ್ಯದ ಜನರು ನಿಮ್ಮನ್ನು ನೇರ ಪ್ರಸಾರದಲ್ಲಿ ನೋಡುತ್ತಿದ್ದಾರೆ. ಮೊದಲೇ ಹೇಳಿದಂತೆ ಸೋಮವಾರವೇ ವಿಶ್ವಾಸಮತ ಯಾಚನೆ ನಿರ್ಣಯ ಮುಗಿಸಿದರೆ ಒಳ್ಳೆಯದು ಎಂದರು. ಆದರೆ, ತಡರಾತ್ರಿಯವರೆಗೆ ಕಲಾಪ ನಡೆದರೂ ನಿರ್ಣಯವನ್ನು ಮತಕ್ಕೆ ಹಾಕಿರಲಿಲ್ಲ.

Follow Us:
Download App:
  • android
  • ios