ಬೆಂಗಳೂರು [ಜು.16]:  ವಿಶ್ವಾಸಮತ ಯಾಚನೆಗೆ ದಿನಾಂಕ ನಿಗದಿಯಾದ ಮೇಲೆ ಹಳೇ ದಿನಾಂಕ ನಮೂದಿಸಿ ವರ್ಗಾವಣೆ, ಮುಂಬಡ್ತಿ ಹಾಗೂ ಅನುದಾನ ಬಿಡುಗಡೆ ಪ್ರಕ್ರಿಯೆಯಲ್ಲಿ ಸಚಿವರು ಅತ್ಯುತ್ಸಾಹದಿಂದ ತೊಡಗಿದ್ದಾರೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಸಂದಿಗ್ಧ ಪರಿಸ್ಥಿತಿಯಲ್ಲಿ ಯಾವುದೇ ಪ್ರಮುಖ ನಿರ್ಣಯ ತೆಗೆದುಕೊಳ್ಳಬಾರದು ಎಂದು ಮುಖ್ಯ ಕಾರ್ಯದರ್ಶಿಗಳಿಗೆ ರಾಜ್ಯಪಾಲರು ಸೂಚಿಸಿದ್ದಾರೆ. ಹೀಗಿದ್ದರೂ ಸಹ ಸಚಿವರು ವ್ಯವಹಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಬಹುಮತ ಸಾಬೀತಿಗೆ ಸ್ಪೀಕರ್‌ ದಿನಾಂಕ ನಿಗದಿ ಮಾಡಿದ ಮೇಲೆ ಎಲ್ಲಾ ಮಂತ್ರಿಗಳು ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ಹಿಂದಿನ ದಿನಾಂಕ ಬಳಸಿ ವರ್ಗಾವಣೆ ಮತ್ತು ಮುಂಬಡ್ತಿ ಹಾಗೂ ಅನುದಾನಗಳಿಗೆ ಆದೇಶ ಹೊರಡಿಸುತ್ತಿದ್ದಾರೆ. 

ಭ್ರಷ್ಟಾಚಾರದಲ್ಲಿ ಸಚಿವರು ಸಂಪೂರ್ಣವಾಗಿ ಮುಳುಗಿದ್ದಾರೆ. ಅವರು ಕಡತಗಳ ವಿಲೇವಾರಿ ವೇಗ ನೋಡಿದರೆ ಸರ್ಕಾರ ಉಳಿಯುವ ನಂಬಿಕೆಯೇ ಸಚಿವರಿಗೆ ಇಲ್ಲ ಎನ್ನುವಂತಿದೆ ಎಂದು ಲೇವಡಿ ಮಾಡಿದರು.