ಬೆಂಗಳೂರು [ಜು.11] :  ಶಾಸಕರ ಸರಣಿ ರಾಜೀನಾಮೆಯಿಂದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಮೇಲೆ ಪತನದ ತೂಗುಗತ್ತಿ ನೇತಾಡುತ್ತಿರುವ ಮಧ್ಯೆಯೇ ಶುಕ್ರವಾರದಿಂದ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ಆರಂಭವಾಗಲಿದೆ.

ಈ ತಿಂಗಳ 26ರವರೆಗೆ ಅಧಿವೇಶನಕ್ಕೆ ವೇಳಾಪಟ್ಟಿ ನಿಗದಿಯಾಗಿದ್ದು, ಶಾಸಕರ ರಾಜೀನಾಮೆ ಅಂಗೀಕಾರಕ್ಕೆ ಸಂಬಂಧಿಸಿದಂತೆ ಗುರುವಾರ ಸುಪ್ರೀಂಕೋರ್ಟ್‌ನಲ್ಲಿಯ ಬೆಳವಣಿಗೆ ಆಧರಿಸಿ ಆಡಳಿತಾರೂಢ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳು ತಮ್ಮ ರಣತಂತ್ರ ರೂಪಿಸುವ ಸಾಧ್ಯತೆಯಿದೆ. ಇದಕ್ಕೆ ಪ್ರತಿಯಾಗಿ ಪ್ರತಿಪಕ್ಷ ಬಿಜೆಪಿಯು ಮೊದಲ ದಿನದಿಂದಲೇ ವಿಶ್ವಾಸಮತ ಯಾಚಿಸುವಂತೆ ಸರ್ಕಾರಕ್ಕೆ ಪಟ್ಟು ಹಿಡಿಯುವ ನಿರೀಕ್ಷೆಯಿದೆ. ಈ ಬಗ್ಗೆ ಗುರುವಾರ ಸಂಜೆ ಸ್ಪಷ್ಟಚಿತ್ರಣ ಹೊರಬೀಳುವ ಸಂಭವವಿದೆ.

ಇದೆಲ್ಲರ ನಡುವೆ ಶಾಸಕರ ಮನವೊಲಿಕೆ ಪ್ರಯತ್ನ ವಿಫಲವಾಗುತ್ತಿರುವುದರಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಧಿವೇಶನದ ಮೊದಲ ದಿನವೇ ವಿದಾಯ ಭಾಷಣ ಮಾಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂಬ ಮಾತೂ ತೇಲಿಬರುತ್ತಿದೆ. ಆದರೆ, ಇದನ್ನು ಮುಖ್ಯಮಂತ್ರಿಗಳ ಕಚೇರಿಯಾಗಲಿ ಅಥವಾ ಆಡಳಿತಾರೂಢ ಪಕ್ಷಗಳ ಮುಖಂಡರು ಪುಷ್ಟೀಕರಿಸಿಲ್ಲ.

ಆದರೆ, ಗುರುವಾರ ದಿಢೀರನೆ ಜೆಡಿಎಸ್‌ ಪಕ್ಷದ ವರಿಷ್ಠ ನಾಯಕರೂ ಆಗಿರುವ ತಮ್ಮ ತಂದೆ ಎಚ್‌.ಡಿ.ದೇವೇಗೌಡರನ್ನು ಕಂಡು ಕುಮಾರಸ್ವಾಮಿ ಸುದೀರ್ಘ ಸಮಾಲೋಚನೆ ನಡೆಸಿದರು. ಈ ವೇಳೆ ರಾಜೀನಾಮೆಯ ಇಂಗಿತವನ್ನೂ ವ್ಯಕ್ತಪಡಿಸಿದರು. ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಗೌಡರು, ಸರ್ಕಾರ ಪತನಗೊಳ್ಳುವುದು ಸ್ಪಷ್ಟವಾದ ಬಳಿಕ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದು ಸೂಕ್ತ ಎಂಬ ಕಿವಿಮಾತನ್ನು ಹೇಳಿದ್ದಾರೆ ಎನ್ನಲಾಗಿದೆ.

ಒಂದಂತೂ ನಿಜ. ಈ ಅಧಿವೇಶನ ಮೊದಲ ದಿನದಿಂದಲೇ ರಣಾಂಗಣವಾಗಿ ಪರಿವರ್ತನೆಯಾಗುವುದು ನಿಶ್ಚಿತವಾಗಿದೆ. ಪ್ರತಿಪಕ್ಷ ಬಿಜೆಪಿ ಯಾವುದೇ ಕಾರಣಕ್ಕೂ ಸದನ ಸುಸೂತ್ರವಾಗಿ ಸಾಗಲು ಅವಕಾಶ ನೀಡುವುದಿಲ್ಲ. 16 ಶಾಸಕರ ರಾಜೀನಾಮೆ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಬಹುಮತ ಇಲ್ಲ ಎಂದೇ ಬಿಜೆಪಿ ಧರಣಿ, ಪ್ರತಿಭಟನೆ ನಡೆಸುವುದು ಬಹುತೇಕ ಖಚಿತವಾಗಿದೆ.