Asianet Suvarna News Asianet Suvarna News

ಕೇಂದ್ರ ಬಜೆಟ್ ಬಗ್ಗೆ ರಾಜ್ಯ ನಾಯಕರು ಏನಂದ್ರು?

ಸತತ ಎರಡನೇ ಸಾರಿ ಅಧಿಕಾರಕ್ಕೆ ಏರಿದ ಮೋದಿ ಸರಕಾರ ಎರಡನೇ ಅವಧಿಯ ಮೊದಲ ಬಜೆಟ್ ಮಂಡನೆ ಮಾಡಿದೆ. ಸಹಜವಾಗಿಯೇ ಬಜೆಟ್ ಬಗ್ಗೆ ಪರ ಮತ್ತು ವಿರೋಧದ ಅಭಿಪ್ರಾಯಗಳು ಬಂದಿವೆ. 

karnataka Leaders opinion on union budget 2019
Author
Bengaluru, First Published Jul 5, 2019, 8:25 PM IST

ಬೆಂಗಳೂರು[ಜು. 05] ಕೇಂದ್ರ ಸರಕಾರದ ಬಜೆಟ್ ಬಗ್ಗೆ ರಾಜ್ಯದ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ಅವರವರ ಭಾವ, ಅವರವರ ದೃಷ್ಟಿಕೋನಕ್ಕೆ ಸಂಬಂಧಿಸಿ ವಿವಿಧ ಅಭಿಪ್ರಾಯ ಹೊರಹಾಕಿದ್ದಾರೆ.

ಡಾ.ಉಮೇಶ್ ಜಾಧವ್: ಭಾರತ ದೇಶದ ಇತಿಹಾಸದಲ್ಲೇ ಒಳ್ಳೆಯ ಬಜೆಟ್. ಕರ್ನಾಟಕದ ಬಸವಣ್ಣ ಅವರ ಕಾಯಕ ಮತ್ತು ದಾಸೋಹದ ಆಧಾರದಲ್ಲಿ ಬಜೆಟ್ ಮಂಡನೆಯಾಗಿದೆ. ಎಲ್ಲ ವರ್ಗದವರನ್ನು ಗಮನದಲ್ಲಿರಿಸಿಕೊಂಡು ಬಜೆಟ್ ಮಾಡಲಾಗಿದೆ. ಇಲೆಕ್ಟ್ರೀಕ್ ವಾಹನಗಳಿಗೆ ಪ್ರೋತ್ಸಾಹ ನೀಡಲಾಗಿದೆ. ಎಲ್ಲರಿಗೂ ಮನೆ ಮತ್ತು ಎಲ್ಲ ಮನೆಗಳಿಗೆ ವಿದ್ಯುತ್ ನೀಡುವ ನಿರ್ಧಾರಕ್ಕೆ ಬರಲಾಗಿದೆ. ಆಧಾರ್ ಕಾರ್ಡ್ ನ‌ ಮೂಲಕವೇ ತೆರಿಗೆ ಪಾವತಿ ಮಾಡುವ ವ್ಯವಸ್ಥೆ ಮಾಡಿರುವುದು ಒಳ್ಳೆಯ ಬೆಳವಣಿಗೆ ಎಂದು ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ: ಜಾಗತಿಕವಾಗಿ ತೈಲಬೆಲೆ ಕಡಿಮೆಯಾಗುತ್ತಿದ್ದರೂ ಮೋದಿ ಸರ್ಕಾರ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಯನ್ನು ಎರಡು ರೂಪಾಯಿಗಳಷ್ಟು ಏರಿಸಿದೆ. ಇದರಿಂದ ಸಹಜವಾಗಿಯೇ ಅಗತ್ಯವಸ್ತುಗಳ ಬೆಲೆ ಏರಿಕೆಯಾಗಲಿದೆ, ಸಾರಿಗೆ ದುಬಾರಿಯಾಗಲಿದೆ. ಇದರಿಂದ ಸಾಮಾನ್ಯ ಜನರ ಕಷ್ಟಗಳು ಹೆಚ್ಚಾಗಲಿವೆ. ಕಾಯಕವೇ ಕೈಲಾಸ ಎಂಬ ಬಸವಣ್ಣನವರ ವಚನವನ್ನು ಉಲ್ಲೇಖಿಸಿದ ಮಾತ್ರಕ್ಕೆ ಉದ್ಯೋಗ ಸೃಷ್ಟಿಯಾಗುವುದಿಲ್ಲ ಎನ್ನುವುದು ಹಣಕಾಸ ಸಚಿವೆ  ನಿರ್ಮಲಾ ಸೀತಾರಾಮನ್ ಅವರಿಗೆ ತಿಳಿದಿರಲಿ. ತಂತ್ರ-ಮಂತ್ರದಿಂದ ಚುನಾವಣೆ ಗೆಲ್ಲಬಹುದೇನೋ,ಆದರೆ ಉದ್ಯೋಗವನ್ನು ಸೃಷ್ಟಿಸಲಾಗುವುದಿಲ್ಲ‌. ರೈತರ ಆದಾಯವನ್ನು ದುಪ್ಪಟ್ಟುಗೊಳಿಸುತ್ತೇವೆ ಎಂದು 5  ವರ್ಷಗಳ ಹಿಂದೆ ಆಶ್ವಾಸನೆ ನೀಡಿದ್ದ ಮೋದಿ ಸರ್ಕಾರ ಈ ಆಯವ್ಯಯ ಪತ್ರದಲ್ಲಿಯೂ ಅದರ ಬಗ್ಗೆ ಉಲ್ಲೇಖ ಮಾಡಿಲ್ಲ. ಕಳೆದ ಐದು ವರ್ಷಗಳಲ್ಲಿ ಕೇವಲ ಶೇ. 0.3ರನಷ್ಟು ಮಾತ್ರ ಬಜೆಟ್ ಹಣವನ್ನು ಖರ್ಚು ಮಾಡಿರುವುದು ಸರ್ಕಾರದ ರೈತ ವಿರೋಧಿ ನೀತಿಗೆ ಸಾಕ್ಷಿ ಎಂದು ಸಿದ್ದರಾಮಯ್ಯ ಟ್ವಿಟರ್ ಮೂಲಕ ಹೇಳಿದ್ದಾರೆ.

ಜಿ. ಸಿ. ಚಂದ್ರಶೇಖರ್:  ನಿರಾಶದಾಯಕ ಬಜೆಟ್. ಕರ್ನಾಟಕಕ್ಕೆ ಭಾರಿ ನಿರೀಕ್ಷೆಯಿತ್ತು. ಉತ್ತರ ಕರ್ನಾಟಕಕ್ಕೆ ಏಮ್ಸ್ ಸಿಗಬಹುದು ಎಂದು ಆಸೆ ಪಟ್ಟಿದ್ದೇವು. ಕುಡಿಯುವ ನೀರಿನ ಬೇಡಿಕೆಗಳಿಗೆ ಸ್ಪಂದನೆ ಸಿಗಲಿಲ್ಲ. ೫ ಲಕ್ಷಕ್ಕಿಂತ ಹೆಚ್ಚು ಆದಾಯ ಇರುವವರಿಗೆ 2.5 ಲಕ್ಷಕ್ಕೆ ಮಾತ್ರ ತೆರಿಗೆ ವಿನಾಯಿತಿ ನೀಡಿರುವುದು ತಪ್ಪು. ಪೆಟ್ರೋಲ್ ಮೇಲೆ ಸೆಸ್ ಹಾಕಿರುವುದು ಬೇಸರ ತಂದಿದೆ. ತ್ರಿಭಾಷಾ ಸೂತ್ರದ ಮೂಲಕ ಪ್ರಾದೇಶಿಕ ಭಾಷೆಗಳ‌ ಕತ್ತು ಹಿಚುಕಬಾರದು. ಚಿನ್ನಕ್ಕೆ ತೆರಿಗೆ ಹಾಕಿರುವುದು ಮಹಿಳೆಯರಿಗೆ ಕಹಿ ಅನುಭವ ತರಲಿದೆ ಎಂದು ರಾಜ್ಯ ಸಭಾ ಸದಸ್ಯ ಜಿ. ಸಿ. ಚಂದ್ರಶೇಖರ್ ಪ್ರತಿಕ್ರಿಯೆ ನೀಡಿದ್ದಾರೆ.

ಡಿ. ಕೆ . ಸುರೇಶ್:  ಹೊಸ ಸರ್ಕಾರ ಬಂದ ಮೇಲೆ ದೇಶದ ಜನ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಮೋದಿ ಅವರಿಗೆ ನಿರೀಕ್ಷೆ ಮಿರಿ ಮತ ಹಾಕಿದ್ದರು. ಮೋದಿ ಬಗ್ಗೆಗಿನ ಟೀಕೆಗಳಿಗೆ ಈ ಬಜೆಟ್ ನಲ್ಲಿ ಉತ್ತರ ಸಿಗಬಹುದು ಎಂಬ ನಿರೀಕ್ಷೆಯಿತ್ತು. ಅದು ಹುಸಿಯಾಗಿದೆ. ದೇಶದಲ್ಲಿ ಬರ ಮತ್ತು ಪ್ರವಾಹ ಎದ್ದು ಕಾಣುತ್ತಿದೆ. 24 ಲಕ್ಷ ಕೋಟಿ ರೂ. ಗಳ ಬಜೆಟ್ ನಲ್ಲಿ ಬರ ಮತ್ತು ಪ್ರವಾಹ ನಿಭಾವಣೆಗೆ ಏನನ್ನೂ ನೀಡಲಾಗಿಲ್ಲ.

ಬಜೆಟ್ ಕುರಿತ ಎಲ್ಲ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮಹಿಳಾ ಪರ ಬಜೆಟ್ ಎಂದು ಹೇಳಿಕೊಂಡರು ಮಹಿಳೆಯರಿಗೆ ಏನನ್ನೂ ನೀಡಿಲ್ಲ. ಮುದ್ರಾ ಯೋಜನೆಯಲ್ಲಿ 1 ಲಕ್ಷ ರೂ ಮಹಿಳೆಯರಿಗೆ ನೀಡುತ್ತೇನೆ ಎಂದು ಘೋಷಿಸಿದರೂ ಕೂಡ ಈಗಾಗಲೇ 10 ಲಕ್ಷ ರೂ ತನಕ ಮುದ್ರಾ ಯೋಜನೆಯಡಿಯಲ್ಲಿ ಹಣ ಲಭಿಸುತ್ತದೆ. ಭೂ ಸಾರಿಗೆಗೆ ಅನುದಾನದಲ್ಲಿ ಕಡಿತವಾಗಿದೆ. ಈ ಬಜೆಟ್ ಮೋದಿ ಸರ್ಕಾರದ ಮೇಲಿನ ಭರವಸೆಯನ್ನು ಹುಸಿಗೊಳಿಸಿದೆ. ರೈತರಿಗೆ, ಯುವಕರಿಗೆ ಅನ್ಯಾಯವಾಗಿದೆ. ಕಾಯಕವೇ ಕೈಲಾಸ ಎಂಬ ಬಸವಣ್ಣನವರ ಉಕ್ತಿಯನ್ನು ಎರಡು ಮೂರು ಬಾರಿ ಹೇಳಿದರೂ ಕೂಡ ಅದಕ್ಕೆ ಪೂರಕವಾದ ಕ್ರಮ ಬಜೆಟ್ ನಲ್ಲಿ ಕಾಣುತ್ತಿಲ್ಲ.

ಹಾಸನ ಸಂಸದ ಪ್ರಜ್ವಲ್ ರೇವಣ್ಣ: ಇದು ಘೋಷಣೆ ಬಜೆಟ್. ಅಂಕಿ ಸಂಖ್ಯೆಯನ್ನು ನೀಡದೆ ಬಜೆಟ್. ಹಳೆ ಮದ್ಯ ಹೊಸ ಬಾಟಲ್ ಅನ್ನುವ ರೀತಿಯ ಬಜೆಟ್. ನಿರೀಕ್ಷೆಗೆ ತಕ್ಕಂತ ಬಜೆಟ್ ಅಲ್ಲ. ಕೃಷಿಯಲ್ಲಿ ಹಳೆ ಯೋಜನೆಗಳು ಮುಂದುವರಿದಿವೆ. ಯುವಕನಾಗಿ ಯುವಕರಿಗೆ ಆದ್ಯತೆ ಸಿಗಬಹುದು ಎಂದು ನಿರೀಕ್ಷಿಸಿದೆ. 45 ವರ್ಷದಲ್ಲಿಯೇ ಉದ್ಯೋಗಕ್ಕೆ ಸಂಬಂಧಿಸಿದಂತೆ ತುರ್ತು ಸ್ಥಿತಿ ಇದ್ದರೂ ಅದಕ್ಕೆ ಈ ಬಜೆಟ್ ನಲ್ಲಿ ಸ್ಪಂದನೆಯಿಲ್ಲ. 400 ಕೋಟಿ ಹೆಚ್ಚು ಆದಾಯ ಇರುವ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡುವ ಬದಲು ಕಡಿವಾಣ ಹಾಕಲಾಗಿದೆ. ಪೆಟ್ರೋಲಿಯಂ ದರ ಏರಿಕೆಯಾಗಿದೆ. ಜನ ಸಾಮಾನ್ಯರಿಗೆ ಇದರಿಂದ ಹೊರೆಯಾಗಲಿದೆ.1 ಕೋಟಿಗೆ ಶೇ. 2 ತೆರಿಗೆ ಹಾಕಿದರೆ ಹಳ್ಳಿಗಳಲ್ಲಿ ದುಷ್ಪರಿಣಾಮ ಆಗಲಿದೆ. ಇದೊಂದು ಸರಾಸರಿ ಬಜೆಟ್ ಎಂದು ಪ್ರಜ್ವಲ್ ಹೇಳಿದ್ದಾರೆ.

Follow Us:
Download App:
  • android
  • ios