Asianet Suvarna News Asianet Suvarna News

2 ನೇ ವರ್ಷಕ್ಕೆಕರ್ನಾಟಕ ಸರ್ಕಾರ : ಫಲಿತಾಂಶ ಪರಿಣಾಮ ಬೀರುತ್ತಾ?

 ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾರ ಒಂದು ವರ್ಷದವನ್ನು ಯಶಸ್ವಿಯಾಗಿ ಪೂರೈಸಿ ಲೋಕಸಭಾ ಚುನಾವಣಾ ಫಲಿತಾಂಶದ ದಿನದಂದೇ 2ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಸಂದರ್ಭದಲ್ಲಿ ಚುನಾವಣಾ ಫಲಿತಾಂಶ ಪರಿಣಾಮ ಬೀರುತ್ತಾ ಎನ್ನುವುದು ಪ್ರಶ್ನೆಯಾಗಿದೆ. 

Karnataka JDS Congress Alliance Govt Completed 1 Year
Author
Bengaluru, First Published May 23, 2019, 6:48 AM IST

ಬೆಂಗಳೂರು :  ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳುವ ದಿನವಾದ ಗುರುವಾರದಂದೇ ರಾಜ್ಯದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ತನ್ನ ಮೊದಲ ವರ್ಷ ಪೂರೈಸಿ ಎರಡನೇ ವರ್ಷಕ್ಕೆ ಕಾಲಿಡುತ್ತಿದೆ.

ಸರಿಯಾಗಿ ಕಳೆದ ವರ್ಷದ ಮೇ 23ರಂದು ವಿಧಾನಸೌಧದ ಮುಂಭಾಗ ಅಪಾರ ಜನಸ್ತೋಮದ ಸಮ್ಮುಖದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳಲ್ಲದೆ ರಾಷ್ಟ್ರದ ಇತರ ಹಲವು ಪ್ರಾದೇಶಿಕ ಪಕ್ಷಗಳ ನಾಯಕರ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿಯಾಗಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿಯಾಗಿ ಡಾ.ಜಿ.ಪರಮೇಶ್ವರ್‌ ಪ್ರಮಾಣವಚನ ಸ್ವೀಕರಿಸಿದ್ದರು.

ಆದರೆ, ರಾಜ್ಯ ಸರ್ಕಾರ ಒಂದು ವರ್ಷ ಪೂರೈಸಿದ ಸಂಭ್ರಮ ಮಾತ್ರ ಉಭಯ ಪಕ್ಷಗಳಲ್ಲೂ ಕಂಡುಬರುತ್ತಿಲ್ಲ. ಒಂದು ವರ್ಷ ಸರಿದೂಗಿಸಿಕೊಂಡು ಬಂದ ಆಯಾಸವೇ ಎದ್ದು ಕಾಣುತ್ತಿದೆ. ಜೊತೆಗೆ ಎರಡನೇ ವರ್ಷ ಸರ್ಕಾರ ಸುಸೂತ್ರವಾಗಿ ಮುಂದುವರೆಯುತ್ತದೆಯೇ ಅಥವಾ ಇಲ್ಲವೇ ಎಂಬ ಕುತೂಹಲ ಹಾಗೂ ಆತಂಕವೇ ಹೆಚ್ಚು ಕಂಡುಬರುತ್ತಿದೆ. ಕಳೆದ ವರ್ಷ ಈ ದಿನವಿದ್ದ ಉತ್ಸಾಹ ಮತ್ತು ನಿರೀಕ್ಷೆ ಈಗ ಉಭಯ ಪಕ್ಷಗಳ ನಾಯಕರಲ್ಲೂ ಉಳಿದಿಲ್ಲ. ಗುರುವಾರ ಸರ್ಕಾರದ ಮಟ್ಟಿಗೆ ನಿರ್ಣಾಯಕ ದಿನವಾಗಿ ಪರಿಣಮಿಸಿದೆ. ಲೋಕಸಭಾ ಚುನಾವಣೆಯ ಫಲಿತಾಂಶದೊಂದಿಗೆ ಸಮ್ಮಿಶ್ರ ಸರ್ಕಾರದ ಭವಿಷ್ಯವೂ ತಳಕು ಹಾಕಿಕೊಂಡಿದೆ.

ಈ ಒಂದು ವರ್ಷದ ಅವಧಿಯಲ್ಲಿ ಸರ್ಕಾರದ ಅಸ್ತಿತ್ವದ ಬಗ್ಗೆ ಹತ್ತು ಹಲವು ರೀತಿಯ ಅನುಮಾನ, ವದಂತಿಗಳು ಕೇಳಿಬಂದಿವೆ. ಇದೆಲ್ಲಕ್ಕೂ ಪುಷ್ಟಿನೀಡುವಂತೆ ಮಿತ್ರ ಪಕ್ಷಗಳ ನಡುವೆಯೇ ತೀವ್ರ ಆಂತರಿಕ ತಿಕ್ಕಾಟವೂ ನಡೆದಿದೆ. ಅದೀಗ ಬಹಿರಂಗ ವಾಕ್ಸಮರಕ್ಕೂ ತಿರುಗಿದೆ. ಹೀಗಿರುವಾಗ ಲೋಕಸಭಾ ಚುನಾವಣೆಯ ಫಲಿತಾಂಶ ಉಭಯ ಪಕ್ಷಗಳ ನಿರೀಕ್ಷೆಯಂತೆ ಬರದಿದ್ದರೆ ಸರ್ಕಾರ ಉಳಿಯುವುದೇ ಅನುಮಾನ ಎಂಬಷ್ಟರ ಮಟ್ಟಿಗೆ ರಾಜ್ಯ ರಾಜಕಾರಣದಲ್ಲಿ ಬಿರುಸಿನ ಲೆಕ್ಕಾಚಾರ ನಡೆಯುತ್ತಿದೆ.

ಈಗಾಗಲೇ ಕಾಂಗ್ರೆಸ್ಸಿನ ಹಲವು ಶಾಸಕರು ಚುನಾವಣಾ ಪ್ರಕ್ರಿಯೆ ಆರಂಭವಾಗುವ ಮೊದಲೇ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಜೊತೆಗೆ ಬಿಜೆಪಿ ಜತೆ ಸೇರಿ ಪರ್ಯಾಯ ಸರ್ಕಾರ ರಚಿಸುವ ಸಂಬಂಧ ಮುಂಬೈಗೆ ತೆರಳಿ ಸಿದ್ಧತೆಯನ್ನೂ ನಡೆಸಿದ್ದರು. ಆದರೆ, ಕೊನೆ ಗಳಿಗೆಯಲ್ಲಿ ಬಿಜೆಪಿ ವರಿಷ್ಠರು ಹಸಿರು ನಿಶಾನೆ ತೋರದೇ ಇದ್ದುದರಿಂದ ವಾಪಸಾಗಿದ್ದರು.

ಇದೀಗ ಲೋಕಸಭಾ ಚುನಾವಣೆಯಲ್ಲಿ ಉಭಯ ಪಕ್ಷಗಳು ಸ್ಥಾನ ಹೊಂದಾಣಿಕೆ ಮಾಡಿಕೊಂಡು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 21ರಲ್ಲಿ ಕಾಂಗ್ರೆಸ್‌ ಮತ್ತು 7ರಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಒಂದು ವೇಳೆ ಫಲಿತಾಂಶ ಮಿತ್ರ ಪಕ್ಷಗಳಿಗೆ ಕಹಿಯಾದಲ್ಲಿ ಬಿರುಕು ಹೆಚ್ಚಾಗುವ ಸಾಧ್ಯತೆಯಿದೆ. ಆಡಳಿತಾರೂಢ ಪಕ್ಷಗಳ ಅತೃಪ್ತ ಶಾಸಕರು ಬಿಜೆಪಿಯತ್ತ ಆಕರ್ಷಿತರಾಗಿ ಅತ್ತ ವಲಸೆ ಹೋದಲ್ಲಿ ಸಮ್ಮಿಶ್ರ ಸರ್ಕಾರದ ಅಸ್ತಿತ್ವಕ್ಕೇ ಧಕ್ಕೆ ಉಂಟಾಗುವ ಸಾಧ್ಯತೆಯೇ ಹೆಚ್ಚು.

ಕಳೆದ ಒಂದು ವರ್ಷಧ ಅವಧಿಯಲ್ಲಿ ಸರ್ಕಾರದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹತ್ತು ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸುವ ಪ್ರಯತ್ನ ಮಾಡಿದ್ದಾರೆ. ಅವರು ಮಂಡಿಸಿದ ಎರಡು ಬಜೆಟ್‌ಗಳು ಸಮ್ಮಿಶ್ರ ಸರ್ಕಾರದ ಒಲವು, ನಿಲುವುಗಳು ಹಾಗೂ ಸಾಗಬೇಕಾದ ಹಾದಿಯನ್ನು ಸೂಚಿಸಿವೆ. ವಿಧಾನಸಭಾ ಚುನಾವಣೆ ವೇಳೆ ನೀಡಿದ ಭರವಸೆಯಂತೆ ರೈತರ ಬೆಳೆ ಸಾಲಮನ್ನಾ ಯೊಜನೆಯನ್ನು ಪಾರದರ್ಶಕವಾಗಿ ಜಾರಿಗೊಳಿಸುವ ಪ್ರಯತ್ನ ನಡೆದಿದೆ. ಕುಮಾರಸ್ವಾಮಿ ಅವರ ಪ್ರಕಾರ, ಈಗಾಗಲೇ 15.5 ಲಕ್ಷ ರೈತರ ಸಾಲಮನ್ನಾ ಮಾಡಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಎಲ್ಲಾ ಅರ್ಹ ರೈತರಿಗೂ ಈ ಸೌಲಭ್ಯ ದೊರೆಯಲಿದೆ. ಜೊತೆಗೆ ರಸ್ತೆ ಬದಿಯ ಸಣ್ಣ ವ್ಯಾಪಾರಿಗಳಿಗೆ ಸಾಲ ನೀಡುವ ಬಡವರ ಬಂಧು ಯೋಜನೆ ಸೇರಿದಂತೆ ಇಸ್ರೇಲ್‌ ಮಾದರಿ ಕೃಷಿ, ಸಾವಯವ ಕೃಷಿಗೆ ಒತ್ತು, ರೈತ ಸಲಹಾ ಸಮಿತಿ ಸ್ಥಾಪನೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.

ಆದರೆ, ಮಿತ್ರ ಪಕ್ಷಗಳ ನಡುವಿನ ಆಂತರಿಕ ತಿಕ್ಕಾಟವೇ ಹೆಚ್ಚಾಗಿ ಸರ್ಕಾರದ ಹಲವು ಜನಪರ ಯೋಜನೆಗಳ ಪ್ರಭಾವವನ್ನೇ ಮಾಯವಾಗುವಂತೆ ಮಾಡಿದ್ದು ಸುಳ್ಳೇನಲ್ಲ. ಇದೀಗ ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಉಭಯ ಪಕ್ಷಗಳ ನಡುವೆ ಯಾವುದೇ ರೀತಿಯ ಬಿಕ್ಕಟ್ಟು ಸೃಷ್ಟಿಯಾಗದಿದ್ದರೆ ಸರ್ಕಾರ ಎರಡನೇ ವರ್ಷವನ್ನು ಸುಗಮವಾಗಿ ಪೂರೈಸಲು ಅನುವು ಮಾಡಿಕೊಟ್ಟಂತಾಗುತ್ತದೆ. ಇಲ್ಲದಿದ್ದರೆ ಮಿತ್ರ ಪಕ್ಷಗಳ ಕಚ್ಚಾಟ ಹೆಚ್ಚಾಗಿ ಸರ್ಕಾರದ ಅಸ್ತಿತ್ವವೇ ಅಲುಗಾಡುವ ಪರಿಸ್ಥಿತಿ ಎದುರಾಗಬಹುದು ಎನ್ನಲಾಗಿದೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ಸಮ್ಮಿಶ್ರ ಸರ್ಕಾರ ರೂಪಿಸಿರುವ ಕಾರ್ಯಕ್ರಮಗಳು ಜನರಲ್ಲಿ ಜನಪರ, ರೈತರ ಪರ ಹಾಗೂ ಎಲ್ಲ ವರ್ಗದವರ ಆಶೋತ್ತರಗಳಿಗೆ ಸ್ಪಂದಿಸುವ ಸರ್ಕಾರ ಎಂಬ ಭಾವನೆ ಮೂಡಿಸಿರುವುದು ತೃಪ್ತಿ ತಂದಿದೆ. ನಮ್ಮ ಮುಂದಿನ ನಡೆಗೆ ಅದೇ ಸ್ಫೂರ್ತಿಯೂ ಆಗಿದೆ.

- ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ವರದಿ :  ವಿಜಯ್‌ ಮಲಗಿಹಾಳ

Follow Us:
Download App:
  • android
  • ios