ಬೆಂಗಳೂರು :  ಸಿಸಿಬಿ ಹೆಚ್ಚುವರಿ ಪೊಲೀಸ್‌ ಆಯುಕ್ತ ಆಲೋಕ್‌ ಕುಮಾರ್‌ ಅವರು ‘ರೌಡಿ ಪರೇಡ್‌’ ಹೆಸರಲ್ಲಿ ತನ್ನನ್ನು ಸಿಸಿಬಿ ಕಚೇರಿಗೆ ಕರೆಸಿ ಮೂರು ದಿನಗಳ ಕಾಲ ಅಕ್ರಮ ಬಂಧನದಲ್ಲಿರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸುವ ಮೂಲಕ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ರೌಡಿ ಶೀಟರ್‌ ಸುನೀಲ್‌ ಕುಮಾರ್‌ ಅಲಿಯಾಸ್‌ ಸೈಲೆಂಟ್‌ ಸುನೀಲ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ.

ಈ ಕುರಿತಂತೆ ಸುನೀಲ್‌ ಕುಮಾರ್‌ ತಕರಾರು ಅರ್ಜಿ ಸಲ್ಲಿಸಿದ್ದು, ಅದರ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ಏಕಸದಸ್ಯ ನ್ಯಾಯಪೀಠವು ರಾಜ್ಯ ಗೃಹ ಇಲಾಖೆ ಹಾಗೂ ಸಿಸಿಬಿ ಹೆಚ್ಚುವರಿ ಪೊಲೀಸ್‌ ಆಯುಕ್ತ ಆಲೋಕ್‌ ಕುಮಾರ್‌ ಅವರಿಗೆ ತುರ್ತು ನೋಟಿಸ್‌ ಜಾರಿಗೊಳಿಸಿದೆ. ಅಲ್ಲದೆ, ಅರ್ಜಿದಾರರಿಗೆ ಅನಗತ್ಯ ಕಿರುಕುಳ ನೀಡದಂತೆ ಮಧ್ಯಂತರ ನಿರ್ದೇಶನ ನೀಡಿತು.

ಸಿಸಿಬಿ ಅಧಿಕಾರಿಗಳು ಏಪ್ರಿಲ್‌ 10ರಂದು ತನ್ನ ಪತ್ನಿಯ ಮೊಬೈಲ್‌ಗೆ ಕರೆ ಮಾಡಿ, ಮೇ 12ರಂದು ನಡೆಯುವ ರೌಡಿ ಪರೇಡ್‌ಗೆ ಹಾಜರಾಗಲು ಪತಿಗೆ ಹೇಳುವಂತೆ ಸೂಚಿಸಿದ್ದರು. ಅದರಂತೆ ಏ.12ರಂದು ಸಿಸಿಬಿ ಕಚೇರಿಗೆ ಹೋಗಿದ್ದೆ. ರೌಡಿ ಪರೇಡ್‌ ವೇಳೆ ಆಲೋಕ್‌ ಕುಮಾರ್‌ ತನ್ನ ಮೇಲೆ ಸಿಟ್ಟಿನಿಂದ ಏರು ಧ್ವನಿಯಲ್ಲಿ ಅವಾಚ್ಯ ಶಬ್ದಗಳಿಂದ ಬೈಯ್ದರು. ತನ್ನ ಮೇಲೆ ದೈಹಿಕ ಹಲ್ಲೆ ನಡೆಸಿದರು. ರಾತ್ರಿ 10.30ರ ತನಕ ಸಿಸಿಬಿ ಕಚೇರಿಯಲ್ಲಿ ಕೂರಿಸಿಕೊಂಡು ಮರು ದಿನ (ಏ.13) ಬರುವಂತೆ ಸೂಚಿಸಿದರು. ಅದರಂತೆ ಏ.13, 14 ಮತ್ತು 15ರಂದು ಸತತವಾಗಿ ಸಿಸಿಬಿ ಕಚೇರಿಗೆ ಹೋದೆ. ಆದರೆ, ಆಲೋಕ್‌ಕುಮಾರ್‌ ಭೇಟಿ ಆಗಲಿಲ್ಲ. ಕೊನೆ ದಿನ ಸಿಸಿಬಿಯ ಇಬ್ಬರು ಗೂಂಡಾ ಕಾಯ್ದೆಯಡಿ ಕೇಸ್‌ ಹಾಕುವುದಾಗಿ ಬೆದರಿಸಿದರು ಎಂದು ಅರ್ಜಿಯಲ್ಲಿ ಸುನೀಲ್‌ ದೂರಿದ್ದಾನೆ.

ಅಲ್ಲದೆ, ಕಾನೂನು ರೀತಿ ನೋಟಿಸ್‌ ನೀಡಿದರೆ ವಿಚಾರಣೆಗೆ ಹಾಜರಾಗಲು ನಾನು ಸಿದ್ಧ. ಆದರೆ, ತನ್ನ ವಿಚಾರದಲ್ಲಿ ಆಲೋಕ್‌ ಕುಮಾರ್‌ ಅವರು ಹುದ್ದೆ ಮತ್ತು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಯಾವುದೇ ನೋಟಿಸ್‌ ನೀಡದೆಯೇ ತನ್ನನ್ನು ಸಿಸಿಬಿ ಕಚೇರಿಗೆ ಕರೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸುವ ಮೂಲಕ ಮಾನಸಿಕ ಕಿರುಕುಳ ನೀಡಿದ್ದಾರೆ. ಅವರ ನಡೆ ಅಮಾನವೀಯ, ಕಾನೂನು ಬಾಹಿರ ಹಾಗೂ ಮಾನವ ಹಕ್ಕುಗಳ ಸ್ಪಷ್ಟಉಲ್ಲಂಘನೆ. ಆದ್ದರಿಂದ ತನ್ನ ವಿರುದ್ಧ ಕಾನೂನು ಬಾಹಿರ ಕ್ರಮ ಕೈಗೊಳ್ಳದಂತೆ, ಅನಗತ್ಯವಾಗಿ ಕಿರುಕುಳ ನೀಡದಂತೆ ಮತ್ತು ತನಗೆ ಪರಿಹಾರ ನೀಡುವಂತೆ ಅಲೋಕ್‌ ಕುಮಾರ್‌ ಅವರಿಗೆ ನಿರ್ದೇಶಿಸಬೇಕು ಎಂದು ಕೋರಿದ್ದಾನೆ.