ಬೆಂಗಳೂರು[ಜು.10]: ರಾಜ್ಯದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ರಾಜೀನಾಮೆ ನೀಡಿರುವ ಅತೃಪ್ತ ಶಾಸಕರು ಮುಂಬೈ ಹೋಟೆಲ್ ನಲ್ಲಿ ಸೇರಿದ್ದರೆ, ಹೋಟೆಲ್ ಹೊರಗೆ ಧರಣಿ ನಡೆಸುವಂತೆ ಕುಳಿತಿರುವ ಡಿ. ಕೆ ಶಿವಕುಮಾರ್ ಅತೃಪ್ತರ ಮನವೊಲಿಸಲು ಒಂದು ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಇತ್ತ ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ. ಇಂತಹ ಪತಿಸ್ಥಿತಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್ ಯಡಿಯೂರಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತಾ 'ಸಿಎಂ ಕುಮಾರಸ್ವಾಮಿ ಸರ್ಕಾರ ಬಹುಮತ ಕಳೆದುಕೊಂಡಿದೆ, ವಿಶ್ವಾಸಮತ ಯಾಚನೆ ಪ್ರಶ್ನೆಯೇ ಇಲ್ಲ' ಎನ್ನುವ ಮೂಲಕ ಸರ್ಕಾರ ರಚಿಸುವ ಸೂಚನೆ ನೀಡಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳಾಗುತ್ತಿದ್ದು, ದೋಸ್ತಿ ಸರ್ಕಾರ ಪತನಗೊಳ್ಳುವ ಭೀತಿಯಲ್ಲಿದೆ. ಹೀಗಿರುವಾಗ ಬಿ. ಎಸ್ ಯಡಿಯೂರಪ್ಪ ರಾಜ್ಯಪಾಲರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಿಎಸ್ ವೈ 'ಸಿಎಂ ಕುಮಾರಸ್ವಾಮಿ ಸರ್ಕಾರ ಬಹುಮತ ಕಳೆದುಕೊಂಡಿದೆ. 13 ಶಾಸಕರು ರಾಜೀನಾಮೆಯನ್ನ ಈಗಾಗಲೇ ಸಲ್ಲಿಸಿದ್ದಾರೆ. ವಿಶ್ವಾಸಮತ ಯಾಚನೆ ಪ್ರಶ್ನೆಯೇ ಇಲ್ಲ. ಸಿಎಂ ಆಗಿ ಮುಂದುವರಿಯಲು ಕುಮಾರಸ್ವಾಮಿಗೆ ನೈತಿಕ ಹಕ್ಕಿಲ್ಲ, ತಕ್ಷಣವೇ ಸಿಎಂ ಕುಮಾರಸ್ವಾಮಿ ರಾಜೀನಾಮೆ ನೀಡಬೇಕು. ರಾಜ್ಯಪಾಲರಿಗೆ ವಾಸ್ತವಿಕ ಪರಿಸ್ಥಿತಿಯನ್ನು ಹೇಳಿದ್ದೇವೆ' ಎಂದಿದ್ದಾರೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದೇ ಸಂದರ್ಭದಲ್ಲಿ 'ಇಬ್ಬರು ಪಕ್ಷೇತರ ಶಾಸಕರು ಬಿಜೆಪಿ ಬೆಂಬಲಿಸಿ ಪತ್ರ ನೀಡಿದ್ದಾರೆ' ಎಂದಿರುವ ಬಿಎಸ್. ಯಡಿಯೂರಪ್ಪ ಬಿಜೆಪಿ ಸರ್ಕಾರ ರಚಿಸಲು ಸಜ್ಜಾಗಿದೆ ಎಂಬ ಸೂಚನೆ ನೀಡಿದ್ದಾರೆ.