ಬೆಂಗಳೂರು : ವಿವಾಹವಾಗಲು ಬೆಂಗಳೂರಿಗೆ ಬಂದು ಇಲ್ಲಿಯೇ ಅಕ್ರಮವಾಗಿ ನೆಲೆಸಿ ಜೈಲು ಸೇರಿದ ಪಾಕಿಸ್ತಾನಿ ದಂಪತಿಯನ್ನು ಮೇ ರೊಳಗೆ ಪಾಕಿಸ್ತಾನಕ್ಕೆ ಗಡೀಪಾರು ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಶುಕ್ರವಾರ ಕಟ್ಟಪ್ಪಣೆ ಮಾಡಿದೆ. 

ಪ್ರಕರಣದಲ್ಲಿ 42 ತಿಂಗಳ ಶಿಕ್ಷೆಗೆ ಗುರಿಯಾಗಿರುವ ಪಾಕಿಸ್ತಾನದ ದಂಪತಿ ಕಾಸೀಫ್ ಶಂಶುದ್ದೀನ್ ಮತ್ತು ಪತ್ನಿ ಕಿರಾಣ್ ಗುಲಾಮ್ ಅಲಿ ಎಂಬುವರು ಶಿಕ್ಷೆಯ ಅವಧಿಯನ್ನು ಕಡಿತಗೊಳಿಸಿ ಜೈಲಿನಿಂದ ಬಿಡುಗಡೆ ಮಾಡಲು ಆದೇಶಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. 

ಶುಕ್ರವಾರ ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ| ಅರವಿಂದ ಕುಮಾರ್, ದಂಪತಿಗೆ ನಗರದ ಎರಡು ಅಧೀನ ನ್ಯಾಯಾಲಯಗಳು ವಿಧಿಸಿದ್ದ ಪ್ರತ್ಯೇಕ 21 ತಿಂಗಳ ಜೈಲು ಶಿಕ್ಷೆಯನ್ನು ಏಕಕಾಲದಲ್ಲಿ ಜಾರಿಗೆ ಬರುವಂತೆ ಆದೇಶಿಸಿದರು. ಅಲ್ಲದೆ, ಕಾನೂನು ಪ್ರಕಾರ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಿ ಅರ್ಜಿದಾರರನ್ನು ತಪ್ಪದೇ ಮೇ 5 ರೊಳಗೆ ಪಾಕಿಸ್ತಾನಕ್ಕೆ ಹಸ್ತಾಂತರಿಸಬೇಕು ಎಂದು ಆದೇಶಿಸಿದರು.

ವಾಘಾ ಗಡಿಗೆ ಬಿಡಿ: ಇದಕ್ಕೂ ಮುನ್ನ ಕೇಂದ್ರ ಸರ್ಕಾರದ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪ್ರಭುಲಿಂಗ ನಾವದಗಿ, ತಾವು ಪಾಕಿಸ್ತಾನದವರು ಎಂದು ಅರ್ಜಿದಾರರು ಹೇಳುತ್ತಿದ್ದಾರೆ. ವಾಸ್ತವವಾಗಿ ಅವರು ಪಾಕಿಸ್ತಾನದವರೇ ಅಥವಾ ಅಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಆ ಸಂಬಂಧ ಪಾಕಿಸ್ತಾನ ರಾಯಭಾರ ಕಚೇರಿಯೊಂದಿಗೆ ಮಾತುಕತೆ ನಡೆಸಬೇಕಿದೆ. ಕಾಲಾವಕಾಶ ಬೇಕು ಎಂದರು.

ಇದರಿಂದ ಕೋಪೋದ್ರಿಕ್ತರಾದ ನ್ಯಾಯಮೂರ್ತಿ, ತಾವು ಪಾಕಿಸ್ತಾನದವರು ಎಂದು ಅರ್ಜಿದಾರರೇ ಹೇಳುತ್ತಿದ್ದಾರೆ. ಹೀಗಾಗಿ ಅವರನ್ನು ಏಕೆ ದೇಶದೊಳಗೆ ಇಟ್ಟುಕೊಂಡು ದಿನ ದೂಡುತ್ತೀರಿ? ಇದು ದೇಶದ ಭದ್ರತೆ ವಿಚಾರ. ಹೀಗಾಗಿ ಅವರು ಒಂದು ಕ್ಷಣವೂ ನಮ್ಮ ದೇಶದಲ್ಲಿರಬಾರದು. ಇ-ಮೇಲ್ ಮಾಡುತ್ತೀರೋ ಅಥವಾ ನೀವೇ ಹೋಗಿ ಬಿಟ್ಟುಬರುತ್ತೀರೋ ಎಂಬುದು ಗೊತ್ತಿಲ್ಲ. ಅವರಿಗೆ ನಮ್ಮ ದೇಶದ ಪ್ರಜೆಗಳ ತೆರಿಗೆ ಹಣ ಖರ್ಚು ಮಾಡಲು ಬಿಡುವುದಿಲ್ಲ.

ಇತರೆ ದೇಶದ ಕ್ರಿಮಿನಲ್‌ಗಳು ನಮ್ಮ ದೇಶದಲ್ಲಿರಲು ಯೋಗ್ಯರಲ್ಲ. ಕೂಡಲೇ ಅರ್ಜಿದಾರರನ್ನು ವಾಘಾ ಗಡಿಗೆ ಕರೆದೊಯ್ದು ಬಿಟ್ಟು ಬಿಡಿ ಎಂದು ಕಟುವಾಗಿ ನುಡಿದರು. ಅದಕ್ಕೆ ನಾವದಗಿ ಪ್ರತಿಕ್ರಿಯಿಸಿ, ಹಾಗೆ ಮಾಡಲು ಸಾಧ್ಯವಿಲ್ಲ ಸ್ವಾಮಿ. ಕೇಂದ್ರ ಸರ್ಕಾರ ಪ್ರಾಥಮಿಕ ವಿಚಾರಣೆ ನಡೆಸಬೇಕು. ಪಾಕಿಸ್ತಾನ ಹೈ ಕಮೀಷನ್ ಜೊತೆಗೆ ಮಾತುಕತೆ ನಡೆಸಿ, ಅರ್ಜಿದಾರರು ಆ ದೇಶದವರೇ ಎಂಬುದನ್ನು ಖಚಿತಪಡಿಸಿಕೊಂಡು ವರದಿ ಪಡೆಯಬೇಕು. ನಂತರವಷ್ಟೇ ಪಾಕಿಸ್ತಾನ ಅರ್ಜಿದಾರರನ್ನು ತನ್ನ ಸುಪರ್ದಿಗೆ ಪಡೆಯುತ್ತದೆ. ಅದಕ್ಕಾಗಿ ಕಾಲಾವಕಾಶ ಬೇಕಿದೆ ಎಂದು ತಿಳಿಸಿದರು.

ಆ ಮನವಿಗೂ ಒಪ್ಪದ ನ್ಯಾಯಮೂರ್ತಿ, ಅದೆಲ್ಲಾ ಗೊತ್ತಿಲ್ಲ. 24 ಗಂಟೆಯಲ್ಲಿ ಅರ್ಜಿದಾರರನ್ನು ವಾಘಾ ಗಡಿಗೆಕರೆದೊಯ್ದು ಬಿಡಬೇಕಷ್ಟೆ. ಈ ಸಂಬಂಧ ಆದೇಶಿಸಲು ಹೈಕೋರ್ಟ್‌ಗೆ ಅಧಿಕಾರವಿದೆ. ಅದನ್ನು ಬಳಸಿ ನಾನು ಆದೇಶ ಹೊರಡಿಸುತ್ತೇನೆ ಎಂದು ಪುನರುಚ್ಚರಿಸಿದರು. ನಾವದಗಿ ಪ್ರತಿಕ್ರಿಯಿಸಿ, 24ಗಂಟೆ ಸಾಕಾಗುವುದಿಲ್ಲ. ಶನಿವಾರ ಹಾಗೂ ಭಾನುವಾರ ರಜೆ ಇರಲಿದೆ. ಸೋಮವಾರದಿಂದ ನಮಗೆ ಮೂರು ದಿನ ಕಾಲಾವಕಾಶಬೇಕಿದೆ ಎಂದರು.ಅದಕ್ಕೆ ನ್ಯಾಯಮೂರ್ತಿಗಳು ಒಪ್ಪಿದರು. ಮೇ 5 ರೊಳಗೆ ಪಾಕಿಸ್ತಾನಕ್ಕೆ ಕಳುಹಿಸಿ ಎಂದು ಆದೇಶಿಸಿ ಅರ್ಜಿ ಇತ್ಯರ್ಥಪಡಿಸಿದರು.