ಶೀಘ್ರ ರಾಮನಗರದಲ್ಲಿ ಮಾವು ಸಂಸ್ಕರಣಾ ಘಟಕ
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕಣ್ವ ಜಲಾಶಯದ ಬಳಿಯಲ್ಲಿ 20 ಎಕರೆ ಜಮೀನಿನಲ್ಲಿ ರಾಜ್ಯ ಸರ್ಕಾರ ಮಾವು ಸಂಸ್ಕರಣಾ ಘಟಕ ಸ್ಥಾಪನೆಗೆ ಮುಂದಾಗಿದೆ.
ಬೆಂಗಳೂರು : ರಾಜ್ಯದ ಮಾವಿಗೆ ಹೆಚ್ಚಿನ ಮಾರುಕಟ್ಟೆಒದಗಿಸುವ ಉದ್ದೇಶದಿಂದ ಮಾವಿನ ಉಪ ಉತ್ಪನ್ನಗಳನ್ನು ತಯಾರಿಸಲು ‘ಮಾವು ಸಂಸ್ಕರಣ ಘಟಕ’ವನ್ನು ರಾಮನಗರ ಜಿಲ್ಲೆಯಲ್ಲಿ ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಈ ಸಂಬಂಧ ಜೂನ್ ಮೊದಲ ವಾರದಲ್ಲಿ ಖಾಸಗಿ ಸಂಸ್ಥೆಗಳಿಂದ ಟೆಂಡರ್ ಕರೆಯಲು ನಿರ್ಧರಿಸಿದೆ.
ಘಟಕ ಸ್ಥಾಪನಗೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕಣ್ವ ಜಲಾಶಯದ ಬಳಿಯಲ್ಲಿ 20 ಎಕರೆ ಜಮೀನನ್ನು ಗುರುತಿಸಲಾಗಿದೆ. ಖಾಸಗಿ ಸಂಸ್ಥೆ ಘಟಕ ಸ್ಥಾಪಿಸಲಿದ್ದು, ಇದಕ್ಕೆ ಪೂರಕವಾಗಿ ರಸ್ತೆ, ನೀರು ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಮನಗರ, ಮೈಸೂರು ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶದ ವಿವಿಧ ಭಾಗಗಳಲ್ಲಿ ಬೆಳೆಯುವ ಮಾವಿನ ಹಣ್ಣನ್ನು ಸಂಸ್ಕರಿಸುವುದು. ಅಲ್ಲದೆ, ಮಾವಿನ ಹಣ್ಣಿನಿಂದ ತಯಾರಿಸುವ ರಸ ಸೇರಿದಂತೆ ಇತರೆ ವಿವಿಧ ಉಪ ಉತ್ಪನ್ನಗಳು ಈ ಘಟಕದಲ್ಲಿ ತಯಾರಾಗಲಿವೆ.
ಜೂನ್ ಮೊದಲ ವಾರದಲ್ಲಿ ಟೆಂಡರ್:
ಉದ್ದೇಶಿತ ಮಾವು ಸಂಸ್ಕರಣಾ ಘಟಕದ ಪ್ರಾರಂಭಕ್ಕೆ ಸಂಬಂಧಿಸಿದಂತೆ ಜೂನ್ ಮೊದಲ ವಾರದಲ್ಲಿ ಟೆಂಡರ್ ಕರೆಯಲಾಗುವುದು. ಹಣ್ಣು ಮಾರಾಟ ಮತ್ತು ಹಣ್ಣಿನ ರಸ ಉತ್ಪಾದನೆ ಮಾಡುವ ಕಂಪನಿಗಳು ಟೆಂಡರ್‌ನಲ್ಲಿ ಭಾಗವಹಿಸಲಿದ್ದು, ಅರ್ಹವಾದ ಕಂಪನಿಗೆ ಸಂಸ್ಕರಣಾ ಘಟಕ ಸ್ಥಾಪನಗೆ ಅವಕಾಶ ಕಲ್ಪಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.
ವರ್ಷ ಪೂರ್ತಿ ಸಂರಕ್ಷಣೆ:
ಮಾವು ಸಂಸ್ಕರಣ ಘಟಕದಲ್ಲಿ ಮಾವಿನ ಹಣ್ಣಿನ ಸಿಪ್ಪೆ ಮತ್ತು ಓಟೆ ಪ್ರತ್ಯೇಕ ಮಾಡಿ ಹಣ್ಣಿನ ತಿರುಳನ್ನು ಮಾತ್ರ ಸಂಗ್ರಹಿಸಿರುತ್ತಾರೆ. ಈ ತಿರುಳನ್ನು ಶೀತಲ ಕೇಂದ್ರಗಳಲ್ಲಿಟ್ಟು ಜ್ಯೂಸ್ ಸೇರಿದಂತೆ ಇತರೆ ಉಪ ಉತ್ಪನ್ನಗಳಿಗೆ ಬಳಕೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೆ, ವರ್ಷದ ಎಲ್ಲ ಸಂದರ್ಭಗಳಲ್ಲಿಯೂ ಅದನ್ನು ಬಳಕೆ ಮಾಡಲು ನೆರವಾಗುವಂತೆ ಸಂಗ್ರಹಿಸಿಡಲು ವ್ಯವಸ್ಥೆ ಮಾಡಲಾಗುತ್ತಿದೆ.
ಈವರೆಗೂ ರಾಜ್ಯದಲ್ಲಿ ಬೆಳೆಯುವ ಮಾವಿನ ಹಣ್ಣಿನ ಸಂಸ್ಕರಣೆಗಾಗಿ ಆಂಧ್ರಪ್ರದೇಶ ಚಿತ್ತೂರಿಗೆ ಕಳುಹಿಸಲಾಗುತ್ತಿತ್ತು. ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳ ಬಹುತೇಕ ಮಾವಿನ ಹಣ್ಣನ್ನು ಅಲ್ಲಿಗೆ ಸರಬರಾಜು ಮಾಡಲಾಗುತ್ತಿತ್ತು. ಅಲ್ಲದೆ, ಕೆಲವು ಉದ್ಯಮಿಗಳು ಮುಂಬೈಗೂ ಸರಬರಾಜು ಮಾಡುತ್ತಿದ್ದರು. ರಾಮನಗರದಲ್ಲಿ ಸಂಸ್ಕರಣಾ ಘಟಕ ಪ್ರಾರಂಭವಾದರೆ ಹೊರ ರಾಜ್ಯಗಳಿಗೆ ಕಳಿಸುವ ಅಗತ್ಯವಿರುವುದಿಲ್ಲ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಬಜೆಟ್‌ನಲ್ಲಿ ಘೋಷಣೆ
ರಾಜ್ಯದ ಮಾವು, ಟೊಮಟೋ ಸೇರಿದಂತೆ ಇನ್ನಿತರೆ ತೋಟಗಾರಿಕಾ ಬೆಳೆಗಳಿಗೆ ಸುಸ್ಥಿರ ಮಾರುಕಟ್ಟೆವ್ಯವಸ್ಥೆ, ಉತ್ತಮ ಬೆಲೆ ಒದಗಿಸುವ ಮೂಲಕ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಸರ್ಕಾರ ಘೋಷಿಸಿತ್ತು. ಅಲ್ಲದೆ, ರಾಮನಗರ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಅಂತಾರಾಷ್ಟ್ರೀಯ ಗುಣ ಮಟ್ಟದ ಮಾವು ಉತ್ಪನ್ನಗಳ ಸಂಸ್ಕರಣಾ ಘಟಕ ಪ್ರಾರಂಭಿಸುವುದಾಗಿ 2019-20 ಆಯವ್ಯಯದಲ್ಲಿ ಘೋಷಣೆ ಮಾಡಿ 20 ಕೋಟಿ ನಿಗದಿ ಪಡಿಸಿತ್ತು.
ಮಾವಿನ ಸಂಸ್ಕರಣಾ ಘಟಕಕ್ಕಾಗಿ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕಣ್ವ ಜಲಾಶಯದ ಬಳಿ 20 ಎಕರೆ ಜಮೀನನ್ನು ಗುರುತಿಸಲಾಗಿದೆ. ಚುನಾವಣಾ ನೀತಿ ಸಂಹಿತೆ ಅವಧಿ ಮುಗಿದ ಬಳಿಕ ಟೆಂಡರ್ ಕರೆದು ಘಟಕದ ಕಾರ್ಯಾರಂಭಕ್ಕೆ ಚಾಲನೆ ನೀಡಲಾಗುವುದು.
-ಡಾ.ಎಂ.ವಿ.ವೆಂಕಟೇಶ್, ತೋಟಗಾರಿಕೆ ಇಲಾಖೆಯ ನಿರ್ದೇಶಕ.