ರಮೇಶ್‌ ಬನ್ನಿಕುಪ್ಪೆ, ಕನ್ನಡಪ್ರಭ

ಬೆಂಗಳೂರು[ಜೂ.25]: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಹೆಚ್ಚಿನ ಆಸಕ್ತಿ ವಹಿಸಿರುವ ಇಸ್ರೇಲ್‌ ತಂತ್ರಜ್ಞಾನ ಆಧಾರಿತ ಕೃಷಿ ಪದ್ಧತಿಯನ್ನು ರಾಜ್ಯದಲ್ಲಿ ಯಶಸ್ವಿಯಾಗಿ ಅನುಷ್ಠಾನ ಮಾಡುವ ಸಂಬಂಧ ಪ್ರಾತ್ಯಕ್ಷಿಕೆ, ರೈತರಿಗೆ ತರಬೇತಿ, ಪ್ರಚಾರ ಮುಂತಾದ ಅಂಶಗಳ ಬಗ್ಗೆ ವರದಿ ನೀಡುವ ಜವಾಬ್ದಾರಿಯನ್ನು ರಾಜ್ಯದ ನಾಲ್ಕು ಕೃಷಿ ಹಾಗೂ ಒಂದು ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ವಹಿಸಲಾಗಿದೆ.

ಈ ವಿವಿಗಳು ಆಗಸ್ಟ್‌ ತಿಂಗಳ ಅಂತ್ಯದ ವೇಳೆಗೆ ವರದಿ ನೀಡಲಿದ್ದು, ವರದಿ ಆಧಾರದಲ್ಲಿ ಹಂತ ಹಂತವಾಗಿ ಇಸ್ರೇಲ್‌ ಮಾದರಿ ಕೃಷಿ ಯೋಜನೆಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ.

ಯೋಜನೆಯ ರೂಪರೇಷೆಗಳ ಸಿದ್ಧತೆ ಮಾಡಿಕೊಳ್ಳುವುದಕ್ಕಾಗಿ ಈಗಾಗಲೇ ಪ್ರತ್ಯೇಕವಾಗಿ ತಜ್ಞರನ್ನು ಒಳಗೊಂಡ ‘ವಿಶೇಷ ಮಿಷನ್‌’ ರಚಿಸಲಾಗಿದೆ. ಸೋಮವಾರ ರಾಜ್ಯ ಸರ್ಕಾರದ ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮಾ ಅಧ್ಯಕ್ಷತೆಯಲ್ಲಿ ಕೃಷಿ, ತೋಟಗಾರಿಕೆ ಇಲಾಖೆ ಕಾರ್ಯದರ್ಶಿಗಳು ಸಭೆ ನಡೆಸಿ, ಯೋಜನೆ ಅನುಷ್ಠಾನ ಸಂಬಂಧ ಚರ್ಚಿಸಲಾಗಿದೆ.

ಇತ್ತೀಚೆಗೆ ರಾಜ್ಯ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳ ಉಪಕುಲಪತಿಗಳು ಭಾಗವಹಿಸಿದ್ದ ಸಭೆಯಲ್ಲಿ ಯೋಜನೆಯ ಅನುಷ್ಠಾನಕ್ಕೆ ನೆರವಾಗುವ ವಿವಿಧ ಕಾರ್ಯಕ್ರಮಗಳ ನಿರ್ವಹಣೆಗೆ ಹಲವು ಜವಾಬ್ದಾರಿಗಳನ್ನು ವಹಿಸಲಾಗಿದೆ. ಯೋಜನೆ ಕುರಿತಂತೆ ವಿಶ್ವವಿದ್ಯಾಲಯಗಳಿಂದ ಇದೇ ಆಗಸ್ಟ್‌ ತಿಂಗಳ ಅಂತ್ಯದ ವೇಳೆಗೆ ವರದಿ ಸಿದ್ಧವಾಗಲಿದೆ. ಈ ವರದಿ ಆಧಾರದಲ್ಲಿ ಹಂತ ಹಂತವಾಗಿ ಯೋಜನೆ ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ವಿಶೇಷ ಮಿಷನ್‌ ನಿರ್ದೇಶಕ ಮನೋಜ್‌ ರಾಜನ್‌ ತಿಳಿಸಿದ್ದಾರೆ.

ಇಸ್ರೇಲ್‌ ಮಾದರಿ ಕೃಷಿ ಪದ್ಧತಿಯಲ್ಲಿ ವೈಜ್ಞಾನಿಕವಾಗಿ ನೀರಿನ ಬಳಕೆ, ನಿಖರವಾದ ಬೇಸಾಯ ಪದ್ಧತಿ, ಸಂರಕ್ಷಿತ ಹಾಗೂ ಸ್ವಯಂಚಾಲಿತ ನೀರಿನ ಬಳಕೆ, ರೈತರ ಕೃಷಿ ಚಟುವಟಿಕೆಗಳಲ್ಲಿನ ಸಾಮರ್ಥ್ಯ ವೃದ್ಧಿ ಹಾಗೂ ಪಾಲಿ ಹೌಸ್‌ಗಳನ್ನು ನಿರ್ಮಿಸಿ ಸಾಮೂಹಿಕ ಕೃಷಿ ಪದ್ಧತಿ ಜಾರಿ ಮಾಡುವುದು ಪ್ರಮುಖವಾಗಿದೆ. ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆಗೆ 145.92 ಹಾಗೂ ತೋಟಗಾರಿಕೆ ಇಲಾಖೆಗೆ 135 ಕೋಟಿ ರು.ಗಳ ಅನುದಾನ ಬಿಡುಗಡೆಯಾಗಿದೆ. ಈ ಮೊತ್ತದಲ್ಲಿ ಯೋಜನೆ ಜಾರಿ ಮಾಡಲಾಗುವುದು ಎಂದಿದ್ದಾರೆ.

ಶಿವಮೊಗ್ಗ ಕೃಷಿ ವಿವಿಯಲ್ಲಿ ಕೋರ್ಸ್‌:

ಇಸ್ರೇಲ್‌ ತಂತ್ರಜ್ಞಾನ ಆಧಾರಿತ ಕೃಷಿ ಅಳವಡಿಕೆಗೆ ಸಂಬಂಧಿಸಿದಂತೆ ನೂತನವಾಗಿ ಒಂದು ವರ್ಷದ ಅವಧಿಯ ಕೋರ್ಸ್‌ ಪ್ರಾರಂಭಿಸಬೇಕು. ಈ ಕೋರ್ಸ್‌ನಲ್ಲಿ ನಾಲ್ಕು ತಿಂಗಳ ತರಗತಿ ಮತ್ತು ಎಂಟು ತಿಂಗಳ ಕಾಲ ಕೃಷಿ ಭೂಮಿಯಲ್ಲಿ ಪ್ರಾಯೋಗಿಕ ತರಬೇತಿ ನೀಡುವಂತೆ ನಿಯಮಗಳನ್ನು ಸಿದ್ಧಪಡಿಸಬೇಕು. ಆ ಮೂಲಕ ಯುವ ಸಮುದಾಯವನ್ನು ಕೃಷಿ ಕ್ಷೇತ್ರದತ್ತ ಸೆಳೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.

ಬೆಂಗಳೂರು ವಿವಿಯಿಂದ ರೈತರಿಗೆ ಪ್ರಾತ್ಯಕ್ಷಿಕೆ:

ಬೆಂಗಳೂರು ಕೃಷಿ ವಿದ್ಯಾಲಯದಿಂದ ಒಂದು, ಎರಡು ಮತ್ತು ಮೂರು ಎಕರೆ ಭೂಮಿಯಲ್ಲಿ ಪಾಲಿ ಹೌಸ್‌ ನಿರ್ಮಾಣ, ವೈಜ್ಞಾನಿಕವಾಗಿ ನೀರಿನ ಬಳಕೆ, ಬೆಳೆಯ ನಿರ್ವಹಣೆ ಮತ್ತು ಬೆಳೆ ಕೊಯ್ಲು ಕುರಿತ ಪ್ರಾತ್ಯಕ್ಷಿಕೆಗಳ ಮಾದರಿಗಳನ್ನು ಸಿದ್ಧಪಡಿಸಲು ಸೂಚಿಸಲಾಗಿದೆ. ಈ ಪ್ರಾತ್ಯಕ್ಷಿಕೆಗಳನ್ನು ವಿವಿ ಆವರಣ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಆಯ್ದ ರೈತರ ಜಮೀನುಗಳಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ. ಅವುಗಳ ಮೂಲಕ ಇತರೆ ರೈತರಿಗೆ ಮಾಹಿತಿ ಒದಗಿಸಲು ತೀರ್ಮಾನಿಸಲಾಗಿದೆ.

ಧಾರವಾಡ ವಿವಿಯಿಂದ ರೈತರಿಗೆ ಕಾರ್ಯಾಗಾರ:

ವೈಜ್ಞಾನಿಕವಾಗಿ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಸಂಬಂಧ ರೈತರಿಗೆ ಮೂರು ಮತ್ತು ಐದು ದಿನಗಳ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲು ಯೋಜನೆ ಸಿದ್ಧಪಡಿಸಲು ಧಾರವಾಡದ ಕೃಷಿ ವಿವಿಗೆ ಸೂಚಿಸಲಾಗಿದೆ. ಇಸ್ರೇಲ್‌ ಕೃಷಿಗೆ ಸಂಬಂಧಿಸಿದ ತರಬೇತಿ ಪಡೆದುಕೊಳ್ಳಲು ಯಾವ ರೈತರನ್ನು ಆಯ್ಕೆ ಮಾಡಬೇಕು ಎಂಬುದರ ಕುರಿತಂತೆ ದತ್ತಾಂಶ ಸಂಗ್ರಹ ಮಾಡಿಕೊಳ್ಳುಲು ಈ ವಿವಿಗೆ ನಿರ್ದೇಶನ ನೀಡಲಾಗಿದೆ.

ರಾಯಚೂರು ವಿವಿಯಿಂದ ರೈತರಿಗೆ ಮಾಹಿತಿ:

ಇಸ್ರೇಲ್‌ ಪದ್ಧತಿಗೆ ಸಂಬಂಧಿಸಿದಂತೆ ರೈತರಿಗೆ ಯಾವ ರೀತಿಯಲ್ಲಿ ಮಾಹಿತಿ ನೀಡಬೇಕು, ಅವುಗಳ ಅನುಷ್ಠಾನಕ್ಕೆ ಏನು ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ರೂಪರೇಷೆಗಳ ಸಿದ್ಧತೆಗೆ ರಾಯಚೂರಿನ ಕೃಷಿ ವಿಶ್ವವಿದ್ಯಾಲಕ್ಕೆ ತಿಳಿಸಲಾಗಿದೆ. ಅಲ್ಲದೆ, ಯೋಜನೆ ಕುರಿತು ಮಾಹಿತಿ ಪ್ರಸಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಹೊಸ ತಳಿ ಗುರುತಿಸಲು ಬಾಗಲಕೋಟೆ ವಿವಿಗೆ ಸೂಚನೆ:

ಇಸ್ರೇಲ್‌ ತಂತ್ರಜ್ಞಾನ ಆಧಾರಿತ ಕೃಷಿ ಪದ್ಧತಿಗೆ ಹೊಂದಿಕೊಳ್ಳುವಂತಹ ನೂತನ 35 ತಳಿಗಳನ್ನು ಗುರುತಿಸುವಂತೆ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ನಿರ್ದೇಶಿಸಲಾಗಿದೆ. ಜೊತೆಗೆ, ಈ ತಳಿಗಳಿಗೆ ರಸಗೊಬ್ಬರಗಳ ಬಳಕೆ, ಬೇಸಾಯ ಪದ್ಧತಿ ಹಾಗೂ ಕಟಾವು ಮಾಡುವ ಸಂಬಂಧ ವರದಿ ಸಿದ್ಧಪಡಿಸಬೇಕು. ಈ ವರದಿಯನ್ನು ರೈತರಿಗೆ ತಲುಪಿಸಿ ಅದರ ಜಾರಿಗೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿರುವುದಾಗಿ ಮನೋಜ್‌ ರಾಜನ್‌ ಹೇಳಿದ್ದಾರೆ.

ಯಾರಿಗೆ, ಯಾವ ಹೊಣೆ?

1. ಶಿವಮೊಗ್ಗ ಕೃಷಿ ವಿವಿ: 1 ವರ್ಷದ ಕೋರ್ಸ್‌. 4 ತಿಂಗಳ ತರಬೇತಿ, 8 ತಿಂಗಳ ಪ್ರಯೋಗಕ್ಕೆ ನಿಯಮಾವಳಿ ಸಿದ್ಧಪಡಿಸುವ ಹೊಣೆ

2. ಬೆಂಗಳೂರು ಕೃಷಿ ವಿವಿ: ಪಾಲಿ ಹೌಸ್‌ ನಿರ್ಮಾಣ, ನೀರಿನ ವೈಜ್ಞಾನಿಕ ಬಳಕೆ, ಬೆಳೆ ನಿರ್ವಹಣೆ, ಕೊಯ್ಲು ಪ್ರಾತ್ಯಕ್ಷಿಕೆ ಸಿದ್ಧತೆಯ ಹೊಣೆ

3. ಧಾರವಾಡ ಕೃಷಿ ವಿವಿ: ರೈತರಿಗೆ 3 ಮತ್ತು 5 ದಿನಗಳ ತರಬೇತಿ ಕಾರ್ಯಾಗಾರ ನಡೆಸಲು ಯೋಜನೆ ರೂಪಿಸುವ ಜವಾಬ್ದಾರಿ

4. ರಾಯಚೂರು ಕೃಷಿ ವಿವಿ: ರೈತರಿಗೆ ಯಾವ ರೀತಿ ಮಾಹಿತಿ ನೀಡಬೇಕು, ಅನುಷ್ಠಾನ ಹೇಗೆ ಎಂಬ ರೂಪುರೇಷೆ ಸಿದ್ಧತೆಯ ಹೊಣೆ

5. ಬಾಗಲಕೋಟೆ ತೋಟಗಾರಿಕೆ ವಿವಿ: ಇಸ್ರೇಲ್‌ ಕೃಷಿಗೆ ಹೊಂದುವ 35 ತಳಿ ಗುರುತಿಸಿ, ತತ್ಸಂಬಂಧಿ ಸಮಗ್ರ ವರದಿ ಸಿದ್ಧತೆ ಹೊಣೆ