ಎಂ.ಆರ್‌. ಚಂದ್ರಮೌಳಿ

ಬೆಂಗಳೂರು [ಆ.19]:  ನಗರ ಪ್ರದೇಶದಲ್ಲಿ ತ್ಯಾಜ್ಯೋತ್ಪಾದಕರಿಂದ ವಸೂಲಿ ಮಾಡುತ್ತಿರುವ ಬಳಕೆದಾರರ ಶುಲ್ಕ ಜಾರಿ ಹಾಗೂ ದಂಡ ವಿಧಿಸುವ ವ್ಯವಸ್ಥೆಯನ್ನು ಇನ್ನು ಮುಂದೆ ಗ್ರಾಮೀಣ ಪ್ರದೇಶಗಳಲ್ಲಿನ ಮನೆಗಳು, ವ್ಯಾಪಾರಿಗಳು, ಆಸ್ಪತ್ರೆಗಳು, ಹೋಟೆಲ್‌ಗಳು, ಮಾರುಕಟ್ಟೆಮುಂತಾದವುಗಳಿಗೆ ವಿಧಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ವಿಶೇಷವಾಗಿ ತೆರೆದ ಸ್ಥಳದಲ್ಲಿ ಕಸ ಸುರಿಯುವುದು, ಉಗಿಯುವುದು, ಘನ ತ್ಯಾಜ್ಯ ವಿಂಗಡಣೆ ಮಾಡದಿದ್ದಲ್ಲಿ, ಸುಟ್ಟರೆ, ಕುಪ್ಪೆ ಹಾಕಿದರೆ, ಹೂಳಿದರೂ ಅಂತಹ ವ್ಯಕ್ತಿ ಇಲ್ಲವೇ ವ್ಯಾಪಾರಿ ಮತ್ತಿತರ ಸಂಸ್ಥೆಗಳಿಗೆ ದಂಡ ವಿಧಿಸುವ ವ್ಯವಸ್ಥೆ ಜಾರಿಗೊಳಿಸಲು ಉದ್ದೇಶಿಸಿದೆ.

ಗ್ರಾಮ ಪಂಚಾಯತಿಗಳಲ್ಲಿ ನೈರ್ಮಲ್ಯ ಕಾಪಾಡಲು, ಆದಾಯ ಹೆಚ್ಚಿಸಲು ಹಾಗೂ ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಿದ್ಧಪಡಿಸಿರುವ ‘ಕರ್ನಾಟಕ ರಾಜ್ಯ ನೈರ್ಮಲ್ಯ ಮತ್ತು ತ್ಯಾಜ್ಯ ನಿರ್ವಹಣಾ ನೀತಿ’ ಜಾರಿಗೆ ಪೂರಕವಾಗಿ ಪಂಚಾಯತಿಗಳು ಯಾರಿಗೆ ಎಷ್ಟುಶುಲ್ಕ ವಿಧಿಸಬೇಕೆಂದು ಶಿಫಾರಸು ಮಾಡಲಾಗಿದೆ. ಈ ಕರಡು ನೀತಿಯ ಬಗ್ಗೆ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳಿಂದ ಆಕ್ಷೇಪಗಳನ್ನು ಆಹ್ವಾನಿಸಲಾಗಿದೆ. ಈ ಆಕ್ಷೇಪಗಳು ಬಂದ ನಂತರ ಅವುಗಳನ್ನು ಪರಿಶೀಲಿಸಿ ನಂತರ ಜಾರಿಗೆ ತರಲು ಇಲಾಖೆ ಉದ್ದೇಶಿಸಿದೆ.

ಬಳಕೆದಾರರ ಶುಲ್ಕ ಹಾಗೂ ದಂಡದ ಪ್ರಮಾಣವನ್ನು ಜನಸಂಖ್ಯೆಗೆ ಅನುಗುಣವಾಗಿ ಮೂರು ವಿಭಾಗವಾಗಿ ನಿಗದಿಪಡಿಸಲಾಗುತ್ತದೆ. 50ರಿಂದ 500 ಜನಸಂಖ್ಯೆ ಇರುವ ಗ್ರಾಮ, 500ರಿಂದ ಎರಡು ಸಾವಿರ ಜನರಿರುವ ಗ್ರಾಮ ಹಾಗೂ ಎರಡು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಗ್ರಾಮಕ್ಕೆ ಪ್ರತ್ಯೇಕ ಶುಲ್ಕ ಹಾಗೂ ದಂಡ ನಿಗದಿಪಡಿಸುವ ಶಿಫಾರಸು ಸಹ ಮಾಡಲಾಗಿದೆ.

ಯಾರಿಗೆ ಎಷ್ಟುಬಳಕೆದಾರರ ಶುಲ್ಕ?:  200 ಚದರಡಿವರೆಗಿನ ಪ್ರದೇಶದಲ್ಲಿ ಕಟ್ಟಿದ ವಾಸದ ಮನೆಗೆ ಪ್ರತಿ ತಿಂಗಳು 20 ರು., 200ರಿಂದ 500 ಚದರ ಅಡಿವರೆಗಿನ ಪ್ರದೇಶದಲ್ಲಿ ಕಟ್ಟಿದ ಮನೆಗೆ 30 ರು., 500 ಚದರ ಅಡಿಗಿಂತ ಹೆಚ್ಚಿನ ಪ್ರದೇಶದಲ್ಲಿ ಕಟ್ಟಿದ ಮನೆಗಳಿಗೆ 40ರಿಂದ ಗರಿಷ್ಠ 60 ರು. ಶುಲ್ಕ ವಿಧಿಸುವ ಶಿಫಾರಸು ಮಾಡಲಾಗಿದೆ.

200 ಚದರಡಿಗಿಂತ ಕಡಿಮೆ ಪ್ರದೇಶದ ಸಣ್ಣ ವಾಣಿಜ್ಯ ಸ್ಥಾಪನೆಗಳು, ಅಂಗಡಿಗಳು ಮತ್ತು ಹೋಟೆಲ್‌, ಡಾಬಾ, ಮೆಸ್‌, ಉಪಾಹಾರ ಮಂದಿರಗಳು ಕ್ಯಾಂಟೀನ್‌ಗಳು ಮತ್ತು ಸಿಹಿ ತಿನಿಸಿನ ಅಂಗಡಿಗಳಿಗೆ ಕನಿಷ್ಠ 60 ರು.ನಿಂದ 90 ರು., 200 ಅಡಿಯಿಂದ 700 ಚದರ ಅಡಿಗಿಂತ ಕಡಿಮೆ ಇರುವ ದೊಡ್ಡ ಮಳಿಗೆಗಳು, ವಾಣಿಜ್ಯ ಸ್ಥಾಪನೆಗಳು ಮತ್ತು ಉಪಾಹಾರ ಗೃಹಗಳಿಗೆ ಕನಿಷ್ಠ 100 ರು.ನಿಂದ ಗರಿಷ್ಠ 200 ರು. ಹಾಗೂ 700 ಚದರಡಿಗಿಂತ ಹೆಚ್ಚಿರುವ ದೊಡ್ಡ ವಾಣಿಜ್ಯ ಮಳಿಗೆಗಳು ಮತ್ತು ವಾಣಿಜ್ಯ ಸ್ಥಾಪನೆಗಳಿಗೆ ಕನಿಷ್ಠ 200 ರು.ನಿಂದ ಗರಿಷ್ಠ 500 ರು. ಬಳಕೆದಾರರ ಶುಲ್ಕ ವಿಧಿಸುವ ಶಿಫಾರಸು ಮಾಡಲಾಗಿದೆ.

100 ಚದರಡಿಯೊಳಗಿನ ಸ್ಥಳ ಹೊಂದಿರುವ ಅತಿಥಿ ಗೃಹಗಳು, ಲಾಡ್ಜ್‌ಗಳು, ಧರ್ಮಶಾಲೆಗಳಿಗೆ ಕನಿಷ್ಠ 150 ರು.ನಿಂದ ಗರಿಷ್ಠ 250 ರು. ಹಾಗೂ 1000 ಚದರಡಿಗಿಂತ ಮೀರಿದ ಪ್ರದೇಶದಲ್ಲಿರುವ ಅತಿಥಿ ಗೃಹಗಳು. ಲಾಡ್ಜ್‌ಗಳು, ಧರ್ಮಶಾಲೆಗಳಿಗೆ ಕನಿಷ್ಠ 200 ರು.ನಿಂದ 500 ರು. ಶುಲ್ಕ ವಿಧಿಸುವ ಶಿಫಾರಸು ಮಾಡಲಾಗಿದೆ.

20 ಹಾಸಿಗೆ ಸೌಲಭ್ಯ ಇರುವ ಆಸ್ಪತ್ರೆ, ಔಷಧಾಲಯ, ಔಷಧ ವಿತರಣಾ ಕೇಂದ್ರಗಳಿಗೆ ಕನಿಷ್ಠ 110 ರು.ನಿಂದ ಗರಿಷ್ಠ 150 ರು., 20 ಹಾಸಿಗೆಗಿಂತ ಹೆಚ್ಚಿನ ಸೌಲಭ್ಯ ಇರುವ ಆಸ್ಪತ್ರೆಗಳು, ಔಷಧಾಲಯಗಳು ಮತ್ತು ಔಷಧ ವಿತರಣಾ ಕೇಂದ್ರಗಳಿಗೆ ಕನಿಷ್ಠ 200 ರು.ನಿಂದ 500 ರು. ಹಾಗೂ ಸಣ್ಣ ಮತ್ತು ಗುಡಿ ಕೈಗಾರಿಕಾ ಘಟಕಗಳಿಗೆ 200ರು. ನಿಂದ 300 ರು. ಶುಲ್ಕ ವಿಧಿಸುವ ಶಿಫಾರಸು ಮಾಡಲಾಗಿದೆ.

ಒಂದು ಸಾವಿರ ಚದರಡಿವರೆಗೆ ಇರುವ ಕಲ್ಯಾಣ ಮಂಟಪ ಮತ್ತು ಸಮಾರಂಭದ ಹಾಲ್‌ಗಳಿಗೆ ಪ್ರತಿ ಸಮಾರಂಭಕ್ಕೂ ಕನಿಷ್ಠ 800 ರು.ನಿಂದ 1200 ರು., 1000 ಚದರಡಿಗಿಂತ ಹೆಚಿರುವ ಕಲ್ಯಾಣ ಮಂಟಪ ಮತ್ತು ಸಮಾರಂಭದ ಹಾಲ್‌ಗಳಿಗೆ ಕನಿಷ್ಠ 1200 ರು.ನಿಂದ 2000 ರು. ಶುಲ್ಕ ವಿಧಿಸಲಾಗುವುದು. ಒಂದು ಸಾವಿರ ಚದರಡಿ ಮೀರಿದ ಕಲ್ಯಾಣ ಮಂಟಪ ಮತ್ತು ಸಮಾರಂಭದ ಹಾಲ್‌ಗಳಿಗೆ ಕನಿಷ್ಠ 1200 ರು.ನಿಂದ ಗರಿಷ್ಠ 2000 ರು. ಶುಲ್ಕ ವಿಧಿಸುವ ಶಿಫಾರಸು ಮಾಡಲಾಗಿದೆ.

ಶಾಲೆ, ಕಾಲೇಜು, ದೇವಸ್ಥಾನಕ್ಕೂ ಶುಲ್ಕ: ಪ್ರತಿ ದಿನ 50 ಕೆ.ಜಿ.ಗಿಂತ ಕಡಿಮೆ ತ್ಯಾಜ್ಯ ಉತ್ಪಾದಿಸುವ ತರಕಾರಿ ಮತ್ತು ಇತರ ಮಾರುಕಟ್ಟೆಗೆ ಪ್ರತಿ ತಿಂಗಳು ಕನಿಷ್ಠ 150 ರು.ನಿಂದ 250 ರು., 50 ಕೆ.ಜಿ.ಗಿಂತ ಹೆಚ್ಚು ತ್ಯಾಜ್ಯ ಉತ್ಪಾದಿಸುವುದಕ್ಕೆ 200 ರು.ನಿಂದ 300 ರು. ಹಾಗೂ 50 ಕೆ.ಜಿ.ಗಿಂತ ಕಡಿಮೆ ತ್ಯಾಜ್ಯ ಉತ್ಪಾದನೆ ಮಾಡುವ ಶಾಲೆ, ಕಾಲೇಜು, ಪೂಜಾ ಸ್ಥಳಗಳು, ಪ್ರವಾಸಿ ಕೇಂದ್ರ ಇತ್ಯಾದಿಗಳಿಗೆ ಕನಿಷ್ಠ 200 ರು.ನಿಂದ 300 ರು. ಹಾಗೂ 50 ಕೆ.ಜಿ.ಗಿಂತ ಹೆಚ್ಚಿನ ತ್ಯಾಜ್ಯ ಉತ್ಪಾದಿಸಿದರೆ ಕನಿಷ್ಠ 200 ರು.ನಿಂದ 500 ರು. ಶುಲ್ಕ ವಿಧಿಸುವ ಶಿಫಾರಸು ಮಾಡಲಾಗಿದೆ.

ನಿಯಮ ಉಲ್ಲಂಘನೆಗೆ ದಂಡ:  ನಗರ ಪ್ರದೇಶದಲ್ಲಿರುವಂತೆ ಗ್ರಾಮೀಣ ಪ್ರದೇಶದಲ್ಲೂ ಸಾರ್ವಜನಿಕ ಸ್ಥಳ ಹೊಲಸು ಮಾಡುವವರಿಗೆ ದಂಡ ವಿಧಿಸಲಾಗುವುದು. ತೆರೆದ ಸ್ಥಳಗಳಲ್ಲಿ ಕಸ ಸುರಿಯುವುದು, ಉಗಿಯುವುದು, ಮೂತ್ರ ವಿಸರ್ಜನೆ ಮಾಡುವ ವ್ಯಕ್ತಿಗಳಿಗೆ ಕನಿಷ್ಠ 500 ರು.ಗಳಿಂದ ಒಂದು ಸಾವಿರ ದಂಡ ವಿಧಿಸಲಾಗುವುದು. ಬೃಹತ್‌ ತ್ಯಾಜ್ಯೋತ್ಪಾದಕರು ಘನ ತ್ಯಾಜ್ಯ ವಿಂಗಡಣೆ ಮಾಡಲು ವಿಫಲರಾದಲ್ಲಿ ಕನಿಷ್ಠ ಎರಡರಿಂದ ಐದು ಸಾವಿರ ರು.ವರೆಗೆ ದಂಡ, ಬೃಹತ್‌ ತ್ಯಾಜ್ಯೋತ್ಪಾದಕನಿಂದ ಘನ ತ್ಯಾಜ್ಯದ ಸುಡುವಿಕೆ, ಕುಪ್ಪೆ ಹಾಕುವಿಕೆ ಅಥವಾ ಹೂಳುವ ಮೂಲಕ ವಿಲೇವಾರಿ ಮಾಡಿದ್ದಲ್ಲಿ ಕನಿಷ್ಠ ಎರಡರಿಂದ ಐದು ಸಾವಿರ ರು. ದಂಡ ವಿಧಿಸುವ ಶಿಫಾರಸು ಮಾಡಲಾಗಿದೆ.