ಕಾಂಗ್ರೆಸ್ ಪಕ್ಷದ ಐದು ವರ್ಷಗಳ ಆಡಳಿತ ಅವಧಿಯ ಕೊನೆಯ ಬಜೆಟ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಣಿಯಾಗುತ್ತಿದ್ದು, ಫೆಬ್ರವರಿ 15 ಅಥವಾ 17ರಂದು ಬಜೆಟ್ ಮಂಡಿಸಲಿದ್ದಾರೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಬೆಂಗಳೂರು: ಕಾಂಗ್ರೆಸ್ ಪಕ್ಷದ ಐದು ವರ್ಷಗಳ ಆಡಳಿತ ಅವಧಿಯ ಕೊನೆಯ ಬಜೆಟ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಣಿಯಾಗುತ್ತಿದ್ದು, ಫೆಬ್ರವರಿ 15 ಅಥವಾ 17ರಂದು ಬಜೆಟ್ ಮಂಡಿಸಲಿದ್ದಾರೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಜ.17ರಿಂದ ಫೆಬ್ರವರಿ 2ರವರೆಗೆ ಭಾನುವಾರ ಹೊರತುಪಡಿಸಿ 12 ದಿನಗಳ ಕಾಲ ಹಣಕಾಸು ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳು, ನಿಗಮ-ಮಂಡಳಿಗಳು, ಪ್ರಮುಖ ಸಂಘ-ಸಂಸ್ಥೆಗಳು, ರೈತ ಮುಖಂಡರು ಹಾಗೂ ಆರ್ಥಿಕ ತಜ್ಞರ ಜತೆ ಸರಣಿ ಸಮಾಲೋಚನಾ ಸಭೆಗಳನ್ನು ನಡೆಸಲಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್ ಜನಪ್ರಿಯ ಬಜೆಟ್ ಆಗುವ ನಿರೀಕ್ಷೆ ಇದ್ದು, ಈ ಹಿನ್ನೆಲೆಯಲ್ಲಿ ಎಲ್ಲ ವಲಯಗಳ ಬೇಕು-ಬೇಡಿಕೆಗಳನ್ನು ಸಿಎಂ ಆಲಿಸಲಿದ್ದಾರೆ. ಇದೇ ವೇಳೆ ನ್ಯಾ.ಸದಾಶಿವ ಆಯೋಗದ ವರದಿಯ ಶಿಫಾರಸುಗಳ ಜಾರಿ, ಜಾತಿ ಸಮೀಕ್ಷೆಯನ್ನು ಪ್ರಕಟಿಸುವುದರಿಂದ ಆಗುವ ಸಾಧಕ- ಬಾಧಕಗಳು ಹಾಗೂ ರಾಜ್ಯ ಸರ್ಕಾರಿ ನೌಕರರ ಆರನೇ ವೇತನ ಆಯೋಗದ ಜಾರಿ ಕುರಿತಂತೆಯೂ ಮಹತ್ವದ ಚರ್ಚೆ ನಡೆಯಲಿದ್ದು, ನಿರಂತರ ಸಭೆಗಳನ್ನು ನಡೆಸಲಿದ್ದಾರೆ.
