ಬೆಂಗಳೂರು, [ಜೂನ್.06]: ರಾಜ್ಯ ಸರ್ಕಾರಿ ನೌಕರರಿಗೆ ಸಹಕಾರಿಯಾಗುವಂತಹ ಹಲವು ನಿರ್ಣಯಗಳಿಗೆ ರಾಜ್ಯ ಸಚಿವ ಸಂಪುಟ ಸಭೆ ಅಸ್ತು ಎಂದಿದೆ.

ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಇಂದು [ಗುರುವಾರ] ನಡೆದ ಕ್ಯಾಬಿನೆಟ್ ಸಭೆಯಲ್ಲಿ ರಜೆ ಪರಿಷ್ಕರಣೆ, ವಿವಾದಿತ ಜಿಂದಾಲ್ ಗೆ ಜಮೀನು ಸೇರಿದಂತೆ ಹಲವು ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. 

ಸರ್ಕಾರಿ ನೌಕರರಿಗೆ 2ನೇ ಶನಿವಾರದ ಜತೆಗೆ 4ನೇ ಶನಿವಾರ ಕೂಡ ರಜೆ ಘೋಷಣೆ ಮಾಡಿದ್ರೆ, ಕನಕ, ವಾಲ್ಮೀಕಿ ಹಾಗೂ ಬಸವ ಜಯಂತಿಗೂ ರಜೆ ಮುಂದುವರಿಯಲಿದೆ. 

ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಹಲವು ಸಚಿವರುಗಳ ಅಪಸ್ವರದ ನಡುವೆಯೇ ಹಲವು ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.  ಇವತ್ತಿನ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳೇನು? ಈ ಕೆಳಗಿನಂತಿವೆ.

ಸರ್ಕಾರಿ ನೌಕರರಿಗೆ ಡಬಲ್ ಧಮಾಕ 
ಹೌದು..ರಾಜ್ಯ ಸರ್ಕಾರಿ ನೌಕರರಿಗೆ ಡಬಲ್ ಧಮಾಕ ಸಿಕ್ಕಿದೆ. ಕನಕ, ವಾಲ್ಮೀಕಿ ಹಾಗೂ ಬಸವ ಜಯಂತಿಗೂ ರಜೆ ಮುಂದುವರಿಸಲಾಗಿದ್ದು, ಸರ್ಕಾರಿ ನೌಕರರಿಗೆ ನಾಲ್ಕನೇ ಶನಿವಾರವೂ ರಜೆ ಘೋಷಣೆ ಮಾಡಿದೆ. ಸಚಿವರ ವಿರೋಧದ ನಡುವೆಯೂ ರಜೆಗೆ  ಸಂಪುಟ ಒಪ್ಪಿಗೆ ನೀಡಿದೆ. ಇನ್ನು ಕಹಿ ವಿಚಾರ ಅಂದ್ರೆ  ಸರ್ಕಾರಿ ನೌಕರರಿಗೆ ಈ ಹಿಂದೆ ಇದ್ದ 15 ಸಿಎಲ್ ರಜೆಗಳನ್ನ 10ಕ್ಕೆ ಕಡಿತ ಮಾಡಲಾಗಿದೆ. 

ಪ್ರತಿ ಲೀಟರ್ ನೀರಿನ ಬೆಲೆ ಏರಿಕೆ 
ಪ್ರಸ್ತುತ ಪ್ರತಿ ಲೀಟರ್‌ಗೆ 10 ಪೈಸೆ ದರದಂತೆ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ. ಆದರೆ ನಿರ್ವಹಣಾ ವೆಚ್ಚ 25 ಪೈಸೆ ಆಗುತ್ತಿದೆ, ಇದನ್ನು ಸರಿದುಗಿಸಲು ಕಾಲಕಾಲಕ್ಕೆ ಪ್ರತಿ ಲೀಟರ್‍ ಗೆ 25 ಪೈಸೆ ಏರಿಕೆ ಮಾಡಲು ಮತ್ತು 5 ವರ್ಷಗಳ ಕಾಲ ನಿರ್ವಹಣೆ ಮತ್ತು ಕಾರ್ಯಾಚರಣೆ ನಿಗದಿಗೊಳಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಸಿಇಟಿ ಮಾದರಿಯಲ್ಲೇ ಕೌನ್ಸಿಲಿಂಗ್ ಮೂಲಕ ವರ್ಗಾವಣೆ
 ಸಿ ಮತ್ತು ಡಿ ಗ್ರೂಪ್ ನೌಕರರ ವರ್ಗಾವಣೆಯಲ್ಲಿ ಪಾರದರ್ಶಕತೆಗೆ ವ್ಯವಸ್ಥೆ ಮಾಡಲಾಗಿದ್ದು, ಸಿಇಟಿ ಮಾದರಿಯಲ್ಲೇ ಕೌನ್ಸಿಲಿಂಗ್ ಮೂಲಕ ವರ್ಗಾವಣೆಗೆ ನಿರ್ಧರಿಸಲಾಗಿದೆ. ವರ್ಗಾವಣೆಗೆ ಸಿ ಗ್ರೂಪ್ ಗೆ 5 ವರ್ಷ, ಡಿ ಗ್ರೂಪ್ ಗೆ 7 ವರ್ಷ ನಿಗದಿ ಮಾಡಲಾಗಿದೆ. ಮುಂಬರುವ ಅಧಿವೇಶನಲ್ಲಿ ಕಾಯ್ದೆ ಮಂಡಿಸಿ ಜಾರಿಗೆ ತರಲು ಸೂಚಿಸಲಾಗಿದೆ.

ಸಂಪುಟ ಸಭೆಯಲ್ಲಿ ಜಿಂದಾಲ್ ದಂಗಲ್
ಮೈತ್ರಿ ಸರ್ಕಾರ ಸಚಿವರ ನಡುವೆ ಶುರುವಾದ ಜಿಂದಾಲ್ ದಂಗಲ್ ಸಚಿವ ಸಂಪುಟದಲ್ಲಿ ನಡೆಯಿತು. ಜಿಂದಾಲ್ ಗೆ ಭೂಮಿ ನೀಡುತ್ತಿರುವ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪವಾಗಿದ್ದು, ಭೂಮಿ ನೀಡೋದಾದ್ರೆ ಸರ್ಕಾರದ ಜತೆ ಕಟ್ಟುನಿಟ್ಟಾಗಿ ಒಪ್ಪಂದವಾಗಬೇಕು.  ಕನ್ನಡಿಗರಿಗೆ ಶೇ 15 ರಷ್ಟು ಉದ್ಯೋಗ ಕೊಡುವಂತೆ ಸಚಿವರು ಷರತ್ತು  ವಿಧಿಸಿದರು. 

ಅನ್ನಭಾಗ್ಯ ಯೋಜನೆ ಯಥಾಸ್ಥಿತಿಗೆ ಸಂಪುಟ ಅಸ್ತು
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಹತ್ವಕಾಂಕ್ಷಿ ಯೋಜನೆಯಾದ ಅನ್ನಭಾಗ್ಯಕ್ಕೆ ಕುಮಾರಸ್ವಾಮಿ ಕೊಕ್ಕೆ ಹಾಕ್ತಾರೆ ಎನ್ನಲಾಗಿತ್ತು. ಆದ್ರೆ  7 ಕೆ.ಜಿಯನ್ನೇ ನೀಡಲು ನಿರ್ಧರಿಸಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಣೆ ಹೊರಗುತ್ತಿಗೆ ನೀಡಲು ನಿರ್ಧರಿಸಲಾಗಿದೆ. ನೀರಿನ ಘಟಕದಲ್ಲಿ 5 ರೂಪಾಯಿ ನಾಣ್ಯದ ಬದಲು ಸ್ಮಾರ್ಟ್ ಕಾರ್ಡ್ ಬಳಕೆ ತೀರ್ಮಾನಸಲಾಗಿದೆ. ಕೆ.ಸಿ ವ್ಯಾಲಿ 2ನೇ ಹಂತದ ಯೋಜನೆಗೆ 450 ಕೋಟಿ ವೆಚ್ಚಕ್ಕೆ ಒಪ್ಪಿಗೆ ನೀಡಲಾಗಿದೆ.

ಕೆಲ ನಿರ್ಧಾರಗಳಿಗೆ ಸಚಿವರಿಂದಲೇ ಅಪಸ್ವರಗಳು
ಇಂದಿನ ಕ್ಯಾಬಿನೆಟ್ ಸಭೆಯಲ್ಲಿ ಸಿಎಂ ಕೆಲ ನಿರ್ಧಾರಗಳಿಗೆ ಕಾಂಗ್ರೆಸ್ ಸಚಿವರಿಂದಲೇ ಅಪಸ್ವರಗಳು ಕೇಳಿಬಂದಿದ್ದು, ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಕೋರ್ಟ್ ಆದೇಶ ಬಂದ್ರೂ ಅನುಷ್ಠಾನ ವಿಳಂಬವೇಕೆ ಅಂತಾ ಪ್ರಿಯಾಂಕ್ ಖರ್ಗೆ ಪ್ರಶ್ನೆ ಎತ್ತಿದ್ದಾರೆ. ಇನ್ನು ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನ 10 ಕೆ.ಜಿ ನೀಡುವ ಪ್ರಸ್ತಾವನೆಗೆ ಸಿಎಂ ವಿರೋಧ ವ್ಯಕ್ತಪಡಿಸಿದ್ದಾರೆ.