ದೇಶದ ಪ್ರಪ್ರಥಮ ಸಾರ್ವತ್ರಿಕ ಆರೋಗ್ಯ ಸೇವೆ ಎಂಬ ಹೆಗ್ಗಳಿಕೆ ಪಡೆದ ಹಾಗೂ ರಾಜ್ಯದ ಸುಮಾರು 1.43 ಕೋಟಿ ಕುಟುಂಬಗಳಿಗೆ ಉಚಿತ ಸಾರ್ವತ್ರಿಕ ಆರೋಗ್ಯ ಸೇವೆ ಒದಗಿಸುವ ಗುರಿ ಹೊಂದಿರುವ ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ‘ಆರೋಗ್ಯ ಕರ್ನಾಟಕ’ ಯೋಜನೆಗೆ ಶುಕ್ರವಾರ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.

ಬೆಂಗಳೂರು : ದೇಶದ ಪ್ರಪ್ರಥಮ ಸಾರ್ವತ್ರಿಕ ಆರೋಗ್ಯ ಸೇವೆ ಎಂಬ ಹೆಗ್ಗಳಿಕೆ ಪಡೆದ ಹಾಗೂ ರಾಜ್ಯದ ಸುಮಾರು 1.43 ಕೋಟಿ ಕುಟುಂಬಗಳಿಗೆ ಉಚಿತ ಸಾರ್ವತ್ರಿಕ ಆರೋಗ್ಯ ಸೇವೆ ಒದಗಿಸುವ ಗುರಿ ಹೊಂದಿರುವ ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ‘ಆರೋಗ್ಯ ಕರ್ನಾಟಕ’ ಯೋಜನೆಗೆ ಶುಕ್ರವಾರ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.

ಕಡು ಬಡವರಿಗೂ ಗುಣಮಟ್ಟದ ಆರೋಗ್ಯ ಸೇವೆ ದೊರೆಯಬೇಕು ಎಂಬ ಆಶಯದೊಂದಿಗೆ ಈ ಯೋಜನೆ ರೂಪಿಸಲಾಗಿದೆ. ಈ ಯೋಜನೆ ಅಡಿಯಲ್ಲಿ ಹಲವು ಆರೋಗ್ಯ ಸೇವೆಗಳನ್ನು ನಾಡಿನ ಜನರು ಪಡೆಯಬಹುದು ಎಂದು ಸಿದ್ದರಾಮಯ್ಯ ಹೇಳಿದರು.

ನಗರದ ಅಂಬೇಡ್ಕರ್‌ ಭವನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಯೋಜನೆಗೆ ಚಾಲನೆ ನೀಡಿದ ಅವರು, ಬಡವರಿಗೆ ಗುಣಮಟ್ಟದ ಆರೋಗ್ಯ ಸೇವೆ ದೊರೆಯಬೇಕು ಹಾಗೂ ಖಾಸಗಿ ಆಸ್ಪತ್ರೆಗಳು ಬಡವರನ್ನು ಶೋಷಿಸುವುದನ್ನು ತಪ್ಪಿಸಬೇಕು ಎಂಬುದು ಸರ್ಕಾರದ ಉದ್ದೇಶ. ಇದಕ್ಕಾಗಿಯೇ ಬಿಲ್‌ ಕಟ್ಟಲಿಲ್ಲ ಎಂಬ ಕಾರಣಕ್ಕೆ ಮೃತದೇಹವನ್ನು ಸಂಬಂಧಿಕರಿಗೆ ನೀಡುವುದಿಲ್ಲ ಎಂದು ಖಾಸಗಿ ಆಸ್ಪತ್ರೆಗಳು ಹೇಳದಂತಹ ತಿದ್ದುಪಡಿಯನ್ನು ಕೆಪಿಎಂಇ (ಕರ್ನಾಟಕ ಪ್ರೈವೇಟ್‌ ಮೆಡಿಕಲ್‌ ಎಸ್ಟಾಬ್ಲಿಷ್‌ಮೆಂಟ್‌ ಆಕ್ಟ್) ಕಾಯ್ದೆಗೆ ತಂದಿದ್ದಾಗಿ ತಿಳಿಸಿದರು.

ಆರೋಗ್ಯ ಭಾಗ್ಯ ಎಂದಿದ್ದ ಈ ಯೋಜನೆಯನ್ನು ‘ಆರೋಗ್ಯ ಕರ್ನಾಟಕ’ ಎಂದು ಪರಿವರ್ತಿಸಿದ್ದು, ಸಾರ್ವತ್ರಿಕ ಆರೋಗ್ಯ ಸೇವೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲಾಗಿದೆ. ಬಡತನ ರೇಖೆಗಿಂತ ಕೆಳಗಿರುವವರಿಗೆ 1.5 ಲಕ್ಷ ರು.ವರೆಗೆ ಉಚಿತವಾಗಿ ಚಿಕಿತ್ಸೆ ಮತ್ತು ಎಪಿಎಲ್‌ ಕಾರ್ಡುದಾರರಿಗೆ ಶೇ.30ರಷ್ಟುಚಿಕಿತ್ಸೆ ಹಣವನ್ನು ಸರ್ಕಾರವೇ ಪಾವತಿಸಲಿದೆ ಎಂದು ಹೇಳಿದರು.

ಆರೋಗ್ಯ ಸಚಿವ ರಮೇಶ್‌ಕುಮಾರ್‌ ಮಾತನಾಡಿ, ಅಸಂಘಟಿತ, ಅಸಹಾಯಕ ಜನರಿಗೆ ತೊಂದರೆಯಾದಾಗ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗುವುದಿಲ್ಲ ಎಂದಾದರೆ ಜನರ ಆರೋಗ್ಯ ಕಾಪಾಡಲು ಸಮರ್ಥವಲ್ಲದ ಸರ್ಕಾರ ಇದ್ದರೆಷ್ಟು, ಹೋದರೆಷ್ಟು? ಬಡಜನರ ಆರೋಗ್ಯ ಕಾಪಾಡುವುದು ನಮ್ಮ ಕರ್ತವ್ಯ. ಅದಕ್ಕಾಗಿಯೇ ಸಾರ್ವತ್ರಿಕ ಆರೋಗ್ಯ ಸೇವೆ ಯೋಜನೆ ಜಾರಿಗೆ ತಂದಿದ್ದೇವೆ. ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌, ಜಿಲ್ಲಾ ಆಸ್ಪತ್ರೆಗಳಲ್ಲಿ ಎಂಆರ್‌ಐ ಸ್ಕಾ್ಯನಿಂಗ್‌ ಕೇಂದ್ರ ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಶೀಘ್ರವೇ ಖಾಸಗಿ ಆಸ್ಪತ್ರೆ ವೈದ್ಯರು, ಸರ್ಕಾರಿ ವೈದ್ಯರು ಹಾಗೂ ಸ್ವತಂತ್ರವಾಗಿ ಕೆಲಸ ಮಾಡುತ್ತಿರುವ ವೈದ್ಯರನ್ನು ಒಂದೆಡೆ ಸೇರಿಸಿ ವಿವಿಧ ಚಿಕಿತ್ಸೆಗಳಿಗೆ ಎಷ್ಟುಶುಲ್ಕ ವಿಧಿಸಬೇಕು ಎಂದು ತೀರ್ಮಾನಿಸಲಾಗುವುದು. ಬಳಿಕ ಎಲ್ಲ ಆಸ್ಪತ್ರೆಗಳಲ್ಲಿ ಪರಿಷ್ಕೃತ ಶುಲ್ಕದ ದರಪಟ್ಟಿಯನ್ನು ಪ್ರದರ್ಶನ ಮಾಡಲೇಬೇಕು. ಜನರಿಗೆ ಯಾವುದೇ ಆರೋಗ್ಯ ಸಮಸ್ಯೆಯಾದರೂ ಮೊದಲಿಗೆ ಸರ್ಕಾರಿ ಆಸ್ಪತ್ರೆಗೆ ಹೋಗಬೇಕು. ಅಲ್ಲಿ ಚಿಕಿತ್ಸೆಗೆ ಸೌಲಭ್ಯ ಇಲ್ಲದಿದ್ದರೆ ಖಾಸಗಿ ಆಸ್ಪತ್ರೆಗೆ ಹೋಗಬೇಕು. ಅದೂ ಕೂಡ ಸರ್ಕಾರಿ ವೈದ್ಯರ ಶಿಫಾರಸಿನ ಆಧಾರದಲ್ಲಿಯೇ ಹೋಗಿ ಚಿಕಿತ್ಸೆ ಪಡೆಯಬೇಕು. ರಾಜ್ಯದ ಎಲ್ಲ ಆಸ್ಪತ್ರೆಗಳಿಗೂ ಎಲ್ಲ ಬಗೆಯ ವೈದ್ಯಕೀಯ ಸೇವೆ ಒದಗಿಸುವಂತಹ ಸೌಕರ್ಯವನ್ನು ಸರ್ಕಾರ ನೀಡಲಿದೆ ಎಂದರು.

ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್‌ ರುದ್ರಪ್ಪ ಪಾಟೀಲ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಸದೀಯ ಕಾರ್ಯದರ್ಶಿ ಉಮೇಶ್‌ ಜಿ.ಜಾಧವ್‌, ಮೇಯರ್‌ ಸಂಪತ್‌ರಾಜ್‌, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅಜಯ್‌ಸೇಠ್‌ ಮತ್ತಿತರರು ಉಪಸ್ಥಿತರಿದ್ದರು.

ಯಾರಾರ‍ಯರಿಗೆ ಸೌಲಭ್ಯ?

ಬಿಪಿಎಲ್‌ ಮತ್ತು ಎಪಿಎಲ್‌ ಕಾರ್ಡ್‌ ಹೊಂದಿರುವವರಿಗೆ ಮಾತ್ರ ಆರೋಗ್ಯ ಕರ್ನಾಟಕದಡಿ ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯ. ಖಾಸಗಿ ಅಥವಾ ಸರ್ಕಾರಿ ಆರೋಗ್ಯ ವಿಮೆ ಹೊಂದಿರುವವರು, ಕಾರ್ಪೋರೇಟ್‌ ಸಮೂಹ ಆರೋಗ್ಯ ವಿಮೆ ಹೊಂದಿರುವವರು, ಶಾಸಕರು, ಸರ್ಕಾರಿ ನೌಕರರು ಹಾಗೂ ಇಎಸ್‌ಐ ಸೌಲಭ್ಯ ಹೊಂದಿರುವವರಿಗೆ ಈ ಯೋಜನೆ ಅನ್ವಯಿಸುವುದಿಲ್ಲ.

ಹೇಗೆ ಪಡೆಯೋದು?

ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಯೋಜನೆಗೆ ನೋಂದಣಿ ಮಾಡಲಾಗುತ್ತದೆ. ಆಧಾರ್‌ ಕಾರ್ಡ್‌ ಮತ್ತು ಪಡಿತರ ಚೀಟಿ ಇರಬೇಕು. 10 ರು. ನೀಡಿ ಹೆಲ್ತ್‌ ಕಾರ್ಡ್‌ ಪಡೆಯಬೇಕು. ಮುಂದೆ ಚಿಕಿತ್ಸೆಗೆ ಹೋಗುವಾಗ ಈ ಕಾರ್ಡ್‌ ಒಯ್ಯಬೇಕು. ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ (ಅಲ್ಲಿ ಚಿಕಿತ್ಸೆ ಲಭ್ಯವಿಲ್ಲದಿದ್ದರೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು) ಈ ಕಾರ್ಡ್‌ ಹೊಂದಿರುವ ಬಿಪಿಎಲ್‌ ಕುಟುಂಬಗಳಿಗೆ 1.5 ಲಕ್ಷ ರು.ವರೆಗಿನ ಚಿಕಿತ್ಸೆ ಉಚಿತ. ಎಪಿಎಲ್‌ ಕುಟುಂಬಗಳಿಗಾದರೆ ಚಿಕಿತ್ಸೆ ವೆಚ್ಚದ ಶೇ.30ರಷ್ಟನ್ನು ಸರ್ಕಾರವೇ ಪಾವತಿಸುತ್ತದೆ.

ಇಡೀ ದೇಶದಲ್ಲೇ ಅತಿ ಹೆಚ್ಚು ವೈದ್ಯಕೀಯ ಕಾಲೇಜುಗಳು ನಮ್ಮ ರಾಜ್ಯದಲ್ಲಿವೆ. ಆದರೆ, ಎಲ್ಲಾ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ. 2350 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಇದೆ. ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಜ್ಞರ ಕೊರತೆ ಇದೆ. ಹಾಗಾದರೆ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ವೈದ್ಯಕೀಯ ಶಿಕ್ಷಣ ನೀಡಿದ ವೈದ್ಯರೆಲ್ಲಾ ಎಲ್ಲಿ ಹೋಗಿದ್ದಾರೆ? ಮಾನವೀಯ ಮೌಲ್ಯಗಳ ಬಗ್ಗೆ ವೈದ್ಯರಿಗೆ ಆಲೋಚನೆ, ಆಸಕ್ತಿ, ಕರುಣೆ ಇಲ್ಲದಿದ್ದರೆ ಅವರು ಯಾವ ಗೌರವಕ್ಕೂ ಪಾತ್ರವಾಗುವುದಿಲ್ಲ.

- ರಮೇಶ್‌ಕುಮಾರ್‌, ಆರೋಗ್ಯ ಸಚಿವ