ಬೆಂಗಳೂರು, [ಅ.04]: ಮಕ್ಕಳ ಕಲಿಕಾ ಮಟ್ಟ ಹೆಚ್ಚಿಸುವ ಉದ್ದೇಶದಿಂದ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ 7ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ಜಾರಿಯಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಹೇಳಿದ್ದಾರೆ.

ಇಂದು [ಶುಕ್ರವಾರ] ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ 2004-05ರಲ್ಲಿ ಪಬ್ಲಿಕ್​ ಪರೀಕ್ಷೆಯನ್ನು ರದ್ದು ಮಾಡಿತ್ತು. ನಂತರ ಈಗ ಮತ್ತೆ ಆರಂಭಿಸಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪಬ್ಲಿಕ್​ ಪರೀಕ್ಷೆ ಮತ್ತೆ ಆರಂಭಿಸಲಾಗಿದೆ ಎಂದು ​ತಿಳಿಸಿದರು. 

6, 8ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ, ಎಲ್ಲಾ ವಿದ್ಯಾರ್ಥಿಗಳಿಗೂ ವಿಮಾ ಸೌಲಭ್ಯ!

7ನೇ ತರಗತಿ ಪಬ್ಲಿಕ್​ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ತಯಾರಿಸಲಿದೆ. ರಾಜ್ಯಮಟ್ಟದಲ್ಲಿ ಉತ್ತರ ಪತ್ರಿಕೆ ಮೌಲ್ಯ ಮಾಪನ ನಡೆಯಲಿದೆ ಎಂದು ಸಚಿವರು ಮಾಹಿತಿ ನೀಡಿದರು. 

SSLC ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ವಿದ್ಯಾರ್ಥಿಗಳನ್ನು ತಯಾರು ಮಾಡುವ ಉದ್ದೇಶದಿಂದ 7ನೇ ತರಗತಿಯಲ್ಲಿಯೇ ಪಬ್ಲಿಕ್ ಪರೀಕ್ಷೆ ನಡೆಸಬೇಕು ಎಂದು ಶಿಕ್ಷಣ ಇಲಾಖೆ ಸರ್ಕಾರಕ್ಕೆ ಈ ಹಿಂದೆ ಪ್ರಸ್ತಾವನೆ ಸಲ್ಲಿಸಿತ್ತು.