ಚಾಮರಾಜನಗರ[ಸೆ.26]: ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಭಯ ಹೋಗಲಾಡಿಸಿ ಪರೀಕ್ಷೆ ಬಗ್ಗೆ ಆತ್ಮವಿಶ್ವಾಸ ಮೂಡಿಸುವ ಸಲುವಾಗಿ 6 ಮತ್ತು 8ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಸಚಿವ ಎಸ್‌. ಸುರೇಶ್‌ ಕುಮಾರ್‌ ಅವರು ತಿಳಿಸಿದರು.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಬಳಿಕ ಬುಧವಾರ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಸುರೇಶ್‌ ಕುಮಾರ್‌ ಅವರು ಬ್ಯಾಡಮೂಡ್ಲು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಪರೀಕ್ಷೆ ಬಗ್ಗೆ ಚರ್ಚಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.

ವಿದ್ಯಾರ್ಥಿಗಳು ನೇರವಾಗಿ ಎಸ್‌ಎಸ್‌ಎಲ್‌ಸಿಯಲ್ಲಿ ಪಬ್ಲಿಕ್‌ ಪರೀಕ್ಷೆ ಎದುರಿಸುವುದರಿಂದ ಕೆಲವೊಮ್ಮೆ ಆತಂಕ ಎದುರಿಸಬೇಕಾತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಭಯ ಹೋಗಲಾಡಿಸಲು 6 ಮತ್ತು 8ನೇ ತರಗತಿಯಲ್ಲಿ ಪಬ್ಲಿಕ್‌ ಪರೀಕ್ಷೆ ನಡೆಸುವಂತೆ ವಿಧಾನ ಪರಿಷತ್‌ ಸದಸ್ಯರು ಮತ್ತು ಪೋಷಕರು ಒತ್ತಾಯ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಇದರ ಬಗ್ಗೆ ಚಿಂತನೆ ನಡಸಲಾಗಿದೆ ಎಂದರು.

ಕರ್ನಾಟಕ ಪಬ್ಲಿಕ್‌ ಶಾಲೆಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಪ್ರತಿ ತರಗತಿಗೆ 30 ಬದಲು 60 ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳುವಂತೆ ಒತ್ತಡ ಬಂದಿದೆ. ಇದರ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಮತ್ತು ಪಬ್ಲಿಕ್‌ ಶಾಲೆಯ ಶಿಕ್ಷಣ ಮಾಧ್ಯಮದ ಬಗ್ಗೆ ಸಾಹಿತಿಗಳು ಆಕ್ಷೇಪ ವ್ಯಕ್ತಪಡಿಸಿಕಿದ್ದಾರೆ. ಇದರ ಬಗ್ಗೆ ಸಾಹಿತಿಗಳ ಜೊತೆಗೆ ಚರ್ಚಿಸಿ ಅಂತಿಮವಾಗಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಅಭಿವೃದ್ಧಿ ಕಾರ್ಯದ ವಿಚಾರದಲ್ಲಿ ರಾಜಕೀಯ ಮಾಡಬಾರದು. ಮಕ್ಕಳ ಭವಿಷ್ಯ ನಿಟ್ಟಿನಲ್ಲಿ ಒಳ್ಳೆಯ ಕಾರ್ಯಮಾಡಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ಸಲಹೆ ನೀಡಿದರು.

ಮಾತ್ರೆ ನುಂಗಿಸಿ ಮಗ್ಗಿ ಕೇಳಿದರು:

ಬ್ಯಾಡಮೂಡ್ಲು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ವಿಟಮಿನ್‌ ಮಾತ್ರೆ ನುಂಗಿಸಿದ ಸಚಿವ ಸುರೇಶ್‌ ಕುಮಾರ್‌ ಅವರು ವಿದ್ಯಾರ್ಥಿಗಳಿಂದ ಮಗ್ಗಿ ಹೇಳಿಸಿದರು.