ಬೆಂಗಳೂರು :  ಬೆಳಗಾವಿ ಅಧಿವೇಶನದಂತಹ ಪ್ರಮುಖ ಸಂದರ್ಭದಲ್ಲಿ ಮಲೇಷಿಯಾಗೆ ತೆರಳಿದ್ದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ವಿದೇಶ ಪ್ರವಾಸವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿ ಬುಧವಾರ ತಡರಾತ್ರಿ ರಾಜ್ಯಕ್ಕೆ ವಾಪಸಾಗಿದ್ದಾರೆ.

ಪೂರ್ವ ನಿಯೋಜಿತ ಕಾರ್ಯಕ್ರಮದಂತೆ ಸ್ನೇಹಿತರೊಬ್ಬರ ಮಗಳ ಮದುವೆಗೆ ಸೋಮವಾರ ಮಲೇಷಿಯಾಗೆ ತೆರಳಿದ್ದ ಅವರು ಶುಕ್ರವಾರ ವಾಪಸಾಗಲಿದ್ದಾರೆ ಎಂದು ಹೇಳಲಾಗಿತ್ತು. ಸಮ್ಮಿಶ್ರ ಸರ್ಕಾರಕ್ಕೆ ಅಗ್ನಿ ಪರೀಕ್ಷೆಯಾಗಬಲ್ಲ ಅಧಿವೇಶನದ ವೇಳೆಯಲ್ಲಿ ವಿದೇಶ ಪ್ರವಾಸಕ್ಕೆ ತೆರಳಿದ್ದು ತೀವ್ರ ಚರ್ಚೆಗೆ ಕಾರಣವಾಗಿತ್ತು. ಇದೀಗ ತಮ್ಮ ಪ್ರವಾಸ ಮೊಟಕುಗೊಳಿಸಿಕೊಂಡು ಎರಡು ದಿನ ಮೊದಲೇ ವಾಪಸಾಗಿದ್ದಾರೆ.

ಮದುವೆ ಕಾರ್ಯಕ್ರಮ ಮುಗಿದ ಹಿನ್ನೆಲೆಯಲ್ಲಿ ವಾಪಸಾಗುತ್ತಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಅವರ ಆಪ್ತ ಮೂಲಗಳು ಬುಧವಾರ ರಾತ್ರಿ ತಿಳಿಸಿವೆ.

ಮತ್ತೊಂದೆಡೆ ಅವರು ಗುರುವಾರವೇ ರಾಜ್ಯದಲ್ಲಿ ಲಭ್ಯವಿದ್ದರೂ, ವೈಯಕ್ತಿಕ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಗುರುವಾರ ಹಾಗೂ ಶುಕ್ರವಾರ ಅಧಿವೇಶನದಲ್ಲಿ ಭಾಗವಹಿಸುವುದಿಲ್ಲ. ಸೋಮವಾರವೇ ಅಧಿವೇಶನ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಿರಿಯರ ಅತೃಪ್ತಿ ಕಾರಣ?:  ಈ ನಡುವೆ ಸರ್ಕಾರಕ್ಕೆ ಸವಾಲಾಗುವಂತಹ ಸಂದರ್ಭದಲ್ಲಿ ವಿದೇಶಕ್ಕೆ ತೆರಳಿದ ಬಗ್ಗೆ ಹಾಗೂ ತಮಗೆ ಸಮಯ ಸಿಕ್ಕಾಗ ಶಾಸಕಾಂಗ ಪಕ್ಷದ ಸಭೆ ನಡೆಸಲು ಮುಂದಾಗುವ ಸಿದ್ದರಾಮಯ್ಯ ಅವರ ಧೋರಣೆ ಬಗ್ಗೆ ಕಾಂಗ್ರೆಸ್‌ನ ಕೆಲ ಹಿರಿಯ ಶಾಸಕರು ತೀವ್ರ ಅಸಮಾಧಾನಗೊಂಡಿರುವುದು ಸಿದ್ದರಾಮಯ್ಯ ಅವರು ಪ್ರವಾಸ ಮೊಟಕುಗೊಳಿಸಲು ಕಾರಣ ಎಂದು ಹೇಳಲಾಗುತ್ತಿದೆ.

ಹಿರಿಯ ಶಾಸಕರು ಮಂಗಳವಾರ ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯನ್ನು ಬಹಿಷ್ಕರಿಸುವ ಮೂಲಕ ಪಕ್ಷಕ್ಕೆ ಸಂಬಂಧಿಸಿದಂತೆ ಮನಸ್ಸೋ ಇಚ್ಛೆ ನಿರ್ಧಾರ ಕೈಗೊಳ್ಳುತ್ತಿರುವ ಸಿದ್ದರಾಮಯ್ಯ ಅವರ ವಿರುದ್ಧ ಬಂಡೆಳಲು ನಿರ್ಧರಿಸಿದ್ದಾರೆ ಎನ್ನಲಾಗಿದ್ದು, ಇದು ವಿಕೋಪಕ್ಕೆ ಹೋಗದಂತೆ ತಡೆಯಲು ಸಿದ್ದರಾಮಯ್ಯ ಪ್ರವಾಸ ಮೊಟಕುಗೊಳಿಸಿ ಹಿಂತಿರುಗಿದ್ದಾರೆ ಎಂದು ಹೇಳಲಾಗುತ್ತಿದೆ.