ಕಾರ್ನಾಡರ ನಾಟಕ ಕಟ್ಟುವಿಕೆ, ಪ್ರೆಸೆಂಟೇಷನ್ ನನಗಿಷ್ಟ

news | Saturday, March 10th, 2018
Suvarna Web Desk
Highlights

ನಾನು ಮೂಲತಃ ಸಾಹಿತ್ಯ ಪ್ರೇಮಿ. ಅಲ್ಲದೇ ನಾಟಕ, ಬೀದಿ ನಾಟಕಗಳಲ್ಲಿ ತೊಡಗಿದ್ದವನು. ಹಾಗಾಗಿ ನಾಟಕ ಕಟ್ಟಲು ಆಸಕ್ತಿ ಬಂತು. ಬೀದಿ ನಾಟಕ ಪ್ರಕಾರವನ್ನು ರಂಗದ ಮೇಲೂ ತರಬಹುದಲ್ಲಾ ಎಂಬ ಅಲೋಚನೆ ಬಂತು. ಪೊಲಿಟಿಕಲ್ ಸಟೈರ್ ಅನ್ನು ಅಳವಡಿಸಿ ಕೊಂಡು ಹೀಗೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದಾಗ ಹುಟ್ಟಿಕೊಂಡದ್ದೆ ಬೀದಿ ಬಿಂಬ ರಂಗದ ತುಂಬ ನಾಟಕ. ಬಹುಶಃ ಆಗ ಇಂತಹ ಪ್ರಯೋಗ ಹೊಸತು.

ಕನ್ನಡ ಮಾಧ್ಯಮದಲ್ಲೇ ಓದಿದ ಕರಣಂಗೆ ಬಾಲ್ಯದಲ್ಲೇ ಕನ್ನಡ ಭಾಷೆ ಬಗ್ಗೆ ಅಪಾರ ಪ್ರೇಮ. ಹೈಸ್ಕೂಲ್‌ನಲ್ಲೇ ರತ್ನಾಕರವರ್ಣಿಯ - 'ಭರತೇಶ ವೈಭವ'ವನ್ನು ಹೊಸಗನ್ನಡದಲ್ಲಿ ನಾಟಕ ರೂಪಕ್ಕೆ ತಂದಿದ್ದರು. ಅಲ್ಲದೇ ಬಾಹುಬಲಿ ಪಾತ್ರದಲ್ಲಿ ಅವರದೇ ಅಭಿನಯ. ಆಮೇಲೆ ಬಿಎಸ್ಸಿ. ಕಾಲೇಜು ದಿನಗಳಲ್ಲೂ ನಾಟಕ ತಂಡದ ಜೊತೆ ಒಡನಾಟ ಮುಂದುವರಿಯಿತು. ಬೀದಿ ನಾಟಕಗಳಲ್ಲೂ ನಟಿಸುತ್ತಿದ್ದರು. ಅದೇ ಅವರನ್ನು ನಾಟಕಕಾರನಾಗಲು ಪ್ರೇರೇಪಿಸಿದ್ದು. ಕಾದಂಬರಿಕಾರನೆಂದು ಪ್ರಸಿದ್ಧಿಯಾಗುವ ಮೊದಲೇ ಎರಡು ನಾಟಕ ಬರೆದಿದ್ದಾರೆ ಕರಣಂ ಪವನ್ ಪ್ರಸಾದ್. ಮಾರ್ಚ್ 11 ರಂದು ಅವರ ಎರಡು ನಾಟಕಗಳ ಪ್ರದರ್ಶನವಿದೆ. ಈ ಸಂದರ್ಭದಲ್ಲಿ ಕಾದಂಬರಿಕಾರ, ನಾಟಕಕಾರ ಮತ್ತು ನಟನೆಯಲ್ಲೂ ತನ್ನ ಶಕ್ತಿ ಸಾಮರ್ಥ್ಯ ತೋರಿಸಿರುವ ಕರಣಂ ಪವನ್ ಪ್ರಸಾದ್ ಜೊತೆ ಮಾತುಕತೆ.

ಒಂದರ ಹಿಂದೆ ಒಂದರಂತೆ ನಾಟಕ ಬರೆಯಲು ಕಾರಣವೇನು?

ನಾನು ಮೂಲತಃ ಸಾಹಿತ್ಯ ಪ್ರೇಮಿ. ಅಲ್ಲದೇ ನಾಟಕ, ಬೀದಿ ನಾಟಕಗಳಲ್ಲಿ ತೊಡಗಿದ್ದವನು. ಹಾಗಾಗಿ ನಾಟಕ ಕಟ್ಟಲು ಆಸಕ್ತಿ ಬಂತು. ಬೀದಿ ನಾಟಕ ಪ್ರಕಾರವನ್ನು ರಂಗದ ಮೇಲೂ ತರಬಹುದಲ್ಲಾ ಎಂಬ ಅಲೋಚನೆ ಬಂತು. ಪೊಲಿಟಿಕಲ್ ಸಟೈರ್ ಅನ್ನು ಅಳವಡಿಸಿ ಕೊಂಡು ಹೀಗೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದಾಗ ಹುಟ್ಟಿಕೊಂಡದ್ದೆ ಬೀದಿ ಬಿಂಬ ರಂಗದ ತುಂಬ ನಾಟಕ. ಬಹುಶಃ ಆಗ ಇಂತಹ ಪ್ರಯೋಗ ಹೊಸತು.

ಈ ನಾಟಕದ ಮೊದಲ ಪ್ರಯೋಗ ಯಾವ ತಂಡ ಮಾಡಿತು? ನಿರ್ದೇಶಕರ‌ ಯಾರು?

2011ರಲ್ಲಿ ಎಸ್‌ಎನ್ ಅಶೋಕ್ ಅವರ 'ವಂದೇ ಮಾತರಂ ಟ್ರಸ್ಟ್'ನ ಮೂಲಕ ಮೊದಲ ಬಾರಿಗೆ ನಾನೇ ನಿರ್ದೇಶಿಸಿದೆ. ಅದರಲ್ಲಿನ ಪ್ರಮುಖ ಪಾತ್ರವಾದ ನಾಟಕದಲ್ಲಿನ ನಾಟಕಕಾರ ಪ್ರಭಂಜನ್ ಪಾತ್ರವನ್ನು ನಾನೇ ನಿರ್ವಹಿಸಿದೆ. ಕೆಎಚ್ ಕಲಾಸೌಧದಲ್ಲಿ ಇದರ ಮೊಟ್ಟ ಮೊದಲ ಪ್ರದರ್ಶನ ಹೌಸ್‌'ಫುಲ್ ಆಯ್ತು. ಈ ಪ್ರತಿಕ್ರಿಯೆಯೇ ನನಗೆ ಮುಂದೆ ನಾಟಕ ಬರೆಯಲು, ನಟಿಸಲು ಹೆಚ್ಚು ಪ್ರೋತ್ಸಾಹ ಕೊಟ್ಟಿತು.

ಆನಂತರದಲ್ಲಿ ಪುರಹರ ರಚನೆಯಾಯ್ತಾ?

ಇಲ್ಲ 'ಬೀದಿ ಬಿಂಬ' ನಾಟಕವನ್ನು ಸತತ ಒಂದು ವರ್ಷಗಳಿಗೂ ಹೆಚ್ಚು ಕಾಲ ಬೆಂಗಳೂರಲ್ಲದೇ ನಾಡಿನ ಬಹುತೇಕ ನಗರಗಳಲ್ಲಿ ಪ್ರದರ್ಶಿಸುತ್ತಾ ಬಂದೆವು. ಬೀದಿ ನಾಟಕವನ್ನು ರಂಗದ ಮೇಲೆ ತಂದದ್ದೇ ವಿಶೇಷವಾಗಿದ್ದರಿಂದು ಅದು 24, 25 ಪ್ರದರ್ಶನಗಳಾದವು. ನಮ್ಮ ನಂತರ ಡ್ರಾಮಾಟ್ರಿಕ್ಸ್, ಮೈಸೂರಿನ ಆಯಾಮ, ಗೆಜ್ಜೆ ಹೆಜ್ಜೆಗಳು ಪ್ರದರ್ಶಿಸಿದವು. ರಂಗಾಯಣದಲ್ಲೂ ಪ್ರದರ್ಶನಗೊಂಡಿದೆ. ಆನಂತರದಲ್ಲಿ ಬರೆದದ್ದು 'ಪುರಹರ' ನಾಟಕ.

ಪುರಹರ ನಾಟಕ ಬರೆಯಲು ಸ್ಫೂರ್ತಿ ಏನು?

ಮೊದಲಿಂದಲೂ ಇತಿಹಾಸವನ್ನು ಅಭ್ಯಾಸ ಮಾಡ್ತಿದ್ದೆ. ಒಂದು ಕಾಲಘಟ್ಟದಲ್ಲಿ ವೈಷ್ಣವ ಹಾಗೂ ಶೈವರ ನಡುವೆ ಕಿತ್ತಾಟ, ತಿಕ್ಕಾಟಗಳು ನಡೆಯುತ್ತಿತ್ತು. ಅದರ ಮೇಲೆ ಮುಸ್ಲಿಮರ ಆಕ್ರಮಣ ಕೂಡ ನಡೆದಿತ್ತು. ಬಿಜಾಪುರದ ಸುಲ್ತಾನನಾದ ಆದಿಲ್ ಶಾಹಿಯು ಗಣಪತಿ ಹಾಗೂ ಸರಸ್ವತಿ ಮಂದಿರವನ್ನು ಕಟ್ಟಿಸಿದ್ದ. ಸರಸ್ವತಿಗಾಗಿ ಶ್ಲೋಕಗಳನ್ನು ರಚಿಸಿದ್ದ ಎಂದು ಓದಿದ್ದೆ. ಇದೊಂದು ವಿಶೇಷ ಪಾತ್ರವಾಗುತ್ತೆ ಎನಿಸಿ ಅದರ ಹಿಂದೆ ಹೊರಟಾಗ ಹುಟ್ಟಿದ್ದ ಜಾನಪದೀಯ ಮ್ಯಾಜಿಕಲ್ ರಿಯಲಿಸಂನ ಮೂಲಕ ವಿಜಯನಗರದ ಪತನದ ಕಾಲಘಟ್ಟಕ್ಕೆ ಹೋಲಿಸಿ ನಡೆಯುವ ಕತೆಯಾಗಿಸಿದೆ. ಈ ನಾಟಕವನ್ನು ಶ್ರೀಕಂಠ ಶ್ರೌತಿ ನಿರ್ದೇಶಿಸಿದ್ದರು. ಆದರೆ ನಾಟಕದ ಮುಖ್ಯ ಪಾತ್ರವಾದ ಆದಿಲ್ ಶಾಹಿಯ ಪಾತ್ರ ನಾನೇ ಮಾಡಿದ್ದೆ. ಈ ನಾಟಕವು ತುಂಬಾ ಗಂಭೀರವಾದ ನಾಟಕವಾಗಿದ್ದರಿಂದ ಟೀಕೆಗಳು ಹೆಚ್ಚು ಬಂದವು. ಇದರ ರಂಗ ಸಜ್ಜಿಕೆಯು ಸ್ವಲ್ಪ ದುಬಾರಿಯಾದ್ದರಿಂದ ನಾವು ಇದನ್ನು ಹೆಚ್ಚು ಪ್ರದರ್ಶನ ಮಾಡಲಿಲ್ಲ. ಆದರೆ ನಂತರದಲ್ಲಿ ಡ್ರಾಮಾಟ್ರಿಕ್ಸ್ ಹಾಗೂ ಇನ್ನಿತರೆ ತಂಡಗಳು ಪ್ರದರ್ಶಿಸಿದವು.

ನಿಮ್ಮ ತಂಡದಲ್ಲಿ ಅಲ್ಲದೇ ಬೇರಾವ ತಂಡದಲ್ಲಿ ಅಭಿನಯಿಸಿದ್ದಿರಿ?

ಖ್ಯಾತ ನಿರ್ದೇಶಕರಾದ ಚಸ್ವಾ ಅವರ ಹಳ್ಳಿಯೂರ ಹಮ್ಮೀರ, ರಾಜೇಂದ್ರ ಕಾರಂತರ ಗಂಗಾವರಣ, ಪ್ರಮೋದ್ ಶಿಗ್ಗಾಂವ್ ಅವರ ನಾಟಕಗಳಲ್ಲಿ ಅಲ್ಲದೇ ಸಮುದಾಯದ ನಾಟಕಗಳಲ್ಲಿ ಅಭಿನಯಿಸಿದ್ದೇನೆ.

ನಾಟಕಕಾರ, ನಟ, ಕಾದಂಬರಿಕಾರನಾಗಿದ್ದು ಹೇಗೆ?

ಪುರಹರದ ಎಂಟು ಪ್ರದರ್ಶನಗಳ ನಂತರ ನಾನು ರಂಗಭೂಮಿಯಿಂದ ಹೊರಗಿರಲು ನಿರ್ಧರಿಸಿ ಕಾದಂಬರಿ ಬರೆಯಲು ತೊಡಗಿದೆ. ಆಗ ಬರೆದದ್ದೇ ನನ್ನ ಮೊದಲ ಕಾದಂಬರಿ 'ಕರ್ಮ್' ಅದನ್ನು ಬರೆದು ಮೊಟ್ಟಮೊದಲ ಬಾರಿಗೆ ಪ್ರತಿಕ್ರಿಯೆಗಾಗಿ ಎಸ್‌'ಎಲ್ ಬೈರಪ್ಪ ಅವರಿಗೆ ಕೊಟ್ಟೆ. ಕೆಲವು ದಿನಗಳಾದರೂ ಪ್ರತಿಕ್ರಿಯೆ ಬರಲಿಲ್ಲ. ಆದರೆ ಬೈರಪ್ಪನವರು ಕಾದಂಬರಿಯನ್ನು ಓದಿದ್ದಾರೆಂದೂ, ಚೆನ್ನಾಗಿದೆಯೆಂದೂ ಶತವಾಧಾನಿ ಆರ್ ಗಣೇಶ್ ಅವರು ನನಗೆ ತಿಳಿಸಿದ ಮೇಲೆ ಧೈರ್ಯ ಬಂತು. ಕರ್ಮದ ಸಬ್ಜೆಕ್ಟ್ ಓದಿ ಬೈರಪ್ಪನವರು ನಿಮ್ಮ ವಯಸ್ಸು ಎಷ್ಟೆಂದು ಕೇಳಿದ್ದರು! ಬೈರಪ್ಪ ಅವರಲ್ಲಿ ಕೂತು ಸಣ್ಣ ಪುಟ್ಟ ತಿದ್ದುಪಡಿ ಮಾಡಿಕೊಂಡು ನಂತರವಷ್ಟೆ ಮುದ್ರಣಕ್ಕೆ ಹೋಗಿದ್ದು. ನಾನಿವತ್ತು ಕಾದಂಬರಿಕಾರನಾಗಿ ಗುರುತಿಸಿಕೊಳ್ಳಲು ಈ ಕಾದಂಬರಿಯೇ ಕಾರಣ. ಬೈರಪ್ಪನವರಲ್ಲದೆ ರಷ್ಯಾದ ದಸ್ತೋವಸ್ಕಿ ಅವರೂ ಸಾಕಷ್ಟು ನನಗೆ ಪ್ರೇರಣೆ ಕೊಟ್ಟಿದ್ದಾರೆ. ನನ್ನ ತಂದೆಗೆ ಓದುವ ಪ್ರೀತಿ ಇತ್ತು. ಆದರೆ ನನ್ನ ಮನೆಯಲ್ಲಿ ಯಾರು ಸಾಹಿತಿಗಳಿಲ್ಲ. ನಾನು ಸ್ವಯಾಂಚಾರ್ಯ!

ಒಂದರ ಹಿಂದೆ ಒಂದು ಕಾದಂಬರಿಗಳು ಬಂದವಲ್ಲ?

ಕನ್ನಡಿಗರು ಮೊದಲ ಕಾದಂಬರಿಗೆ ಕೊಟ್ಟ ಪ್ರೋತ್ಸಾಹದಿಂದ ಎರಡನೆಯದು 'ನನ್ನಿ' ಆಯ್ತು. ನಂತರ ಗ್ರಸ್ತ ಆಯ್ತು. ನಾನು ನಟನೂ ಅಲ್ಲ. ನಾಟಕಕಾರ ರನೂ ಅಲ್ಲ. ಕಾದಂಬರಿಕಾರನಾಗಿಯೇ ಉಳಿಯುತ್ತೇನೆ. 'ಕರ್ಮ' 5 ಮುದ್ರಣ ಕಂಡಿದೆ. ಇಂಗ್ಲಿಷ್‌'ಗೂ ಭಾಷಾಂತರಗೊಂಡಿದೆ. 'ನನ್ನಿ' ಮತ್ತು 'ಗ್ರಸ್ತ' ಎರಡನೆಯ ಮುದ್ರಣ ಕಂಡಿವೆ. ನನ್ನಿ ಮಲಯಾಳಂಗೆ ಭಾಷಾಂತರಗೊಳ್ಳುತ್ತಿದೆ. ಬಹುಶಃ ಬೈರಪ್ಪನವರು ನನ್ನ ಮೊದಲ 'ಕರ್ಮ' ಕಾದಂಬರಿಯನ್ನು ಮೆಚ್ಚದಿದ್ದಿದ್ದರೆ ನಾನು ಕಾದಂಬರಿಕಾರನಾಗಿ ಇರುತ್ತಿರಲಿಲ್ಲ. ಅನ್ನುವುದು ಮಾತ್ರ ಸತ್ಯ.

ಮೂರು ಕಾದಂಬರಿಗಳ ನಂತರ ಮತ್ತೆ ನೀವು ಮತ್ತೊಂದು ನಾಟಕ ಬರೆದಿರಿ. ಆಗ ನಿಮ್ಮ ಮನಸ್ಥಿತಿ ಹೇಗಿತ್ತು?

'ಭಾವ' ಎನಗೆ ಹಿಂಗಿತು ಎಂಬ ನಾಟಕವದು. ಸ್ಕ್ರಿಪ್ಟ್‌'ನಲ್ಲಿದ್ದಾಗ ಓದಿದ ಕೆಲವರು ಕಾದಂಬರಿಯ ಛಾಯೆ ಇದೆಯೆಂದರು. ನನಗೂ ಕಾದಂಬರಿಯ ಮೂಡ್‌'ನಿಂದ ಹೊರಗೆ ಬಂದು ನಾಟಕ ಬರೆಯಲು ಬಾರಿ ಕಷ್ಟವಾಯ್ತು. ತಿದ್ದಿ ಸರಿಪಡಿಸಿದೆ. ಈಗದು ಪ್ರೊಡಕ್ಷನ್ ಕೂಡ ಆಗ್ತಿದೆ. ರೀಡಿಂಗ್ ಆಗಿದೆ. ಇಷ್ಟರಲ್ಲೇ ರಂಗದ ಮೇಲೂ ಬರುತ್ತದೆ. ಈ ನಾಟಕವು ಮೊದಲೆರಡಕ್ಕಿಂತ ಭಿನ್ನವಾಗಿದೆ. ಪ್ರಸಿದ್ಧ ವೃದ್ಧ ಸಾಹಿತಿ ಹಾಗೂ ಆ ಅಪ್ಪನ ಖ್ಯಾತಿಯ ಪ್ರಭಾವದಿಂದ ಹೊರ ಬರಲು ಹೆಣಗುವ ಮಗನ ಪಾತ್ರಗಳು ಇಲ್ಲಿವೆ.

ಆದರೆ ಈ ಎಲ್ಲಾ ನಾಟಕ ರಚನೆಗಳಿಗೆ ಸ್ಫೂರ್ತಿಯಾದವರು ಯಾರು?

ಗಿರೀಶ್ ಕಾರ್ನಾಡರ ನಾಟಕ ಕಟ್ಟುವಿಕೆ, ಪ್ರೆಸೆಂಟೇಷನ್‌'ಗಳು ಅದ್ಭುತ. ಹಾಗಾಗಿ ಕಾರ್ನಾಡರು ನನಗಿಷ್ಟ. ಅವರ ಯಯಾತಿ, ತುಘಲಕ್‌'ಗಳಿಷ್ಟ. ನೊಬೆಲ್ ಪ್ರಶಸ್ತಿಯನ್ನೇ ತಿರಸ್ಕರಿಸಿದ್ದ ಫ್ರೆಂಚ್ ನಾಟಕ ರಚನೆಕಾರ ಸಾರ್ತೃ ಇಷ್ಟ. ಅವರ 'ನೋ ಎಕ್ಸಿಟ್' ನಾಟಕ ತುಂಬಾ ಕಾಡುತ್ತೆ.

ಮುಂದಿನ ನಿಮ್ಮ ಜರ್ನಿಯಲ್ಲಿನ ಆಯ್ಕೆ ನಾಟಕವೋ? ಕಾದಂಬರಿಯೋ?

ಖಂಡಿತ ಕಾದಂಬರಿ. ಇಲ್ಲೇ ಅಗೆಯುತ್ತಿದ್ದೇನೆ. ಒಂದೇ ಕಡೆ ಅಗೆದರೆ ನೀರು ಸಿಗಬಹುದು. ಕಾದಂಬರಿ ಬರೆಯುವವರು ಕಡಿಮೆ. ನಾಟಕಗಳನ್ನು ಬರೀತೀನಿ, ಇಲ್ಲವೆಂದಲ್ಲ. ಆದರೆ ಕಾದಂಬರಿಕಾರನಾಗಿಯೇ ನೆಲೆ ಕಟ್ಟಿ ಕೊಳ್ತೇನೆ. ನಟನೆಯನ್ನು ಹೇಗೂ ನಿಲ್ಲಿಸಿದ್ದೇನೆ. ಚಪ್ಪಾಳೆಗಳಿಂದ ಹೊರ ಬರಲು ನಿರ್ಧರಿಸಿದ್ದೇನೆ. ತಮಾಷೆಗೆ ಹೀಗೆನ್ನುತ್ತಿರುತ್ತೇನೆ, ನಾನು ಭರವಸೆಯ ನಟ. ಮೆಚ್ಚಬಹುದಾದ ನಾಟಕಕಾರ. ಜೀನಿಯಸ್ ಅನ್ನೋದು ಕಾದಂಬರಿಯಲ್ಲಿ ಮಾತ್ರ ಎಂದು!

ಒಂದೇ ದಿನ ಎರಡು ನಾಟಕ

ಯಥೋ ಭಾವಸ್ತತೋ ರಸಃ ಅಶ್ವಘೋಷ ಥಿಯೇಟರ್ ಟ್ರಸ್ಟ್ ತಂಡದವರ ಉದ್ಘಾಟನೆ ಹಾಗೂ ಎರಡು ನಾಟಕಗಳ ಪ್ರದರ್ಶನ

ಸ್ಥಳ: ಪ್ರಭಾತ್ ಕೆ ಎಚ್ ಕಲಾಸೌಧ, ಹನುಮಂತನಗರ, ಬೆಂಗಳೂರು. ಮಾ. 11ರ ಸಂಜೆ 4.30ಕ್ಕೆ ನಂದೀಶ್ ದೇವ್ ನಿರ್ದೇಶನದ ನಾಟಕ -'ಬೀದಿ ಬಿಂಬ ರಂಗದ ತುಂಬ' ಹಾಗೂ ಸಂಜೆ 6.30ಕ್ಕೆ ದಿಲೀಪ್ ಬಿ ಎಂ ನಿರ್ದೇಶನದ ನಾಟಕ 'ಪುರಹರ' ಪ್ರದರ್ಶನವಿದೆ. ಎರಡೂ ನಾಟಕಗಳ

ರಚನೆ ಕರಣಂ ಪವನ್ ಪ್ರಸಾದ್ ಅವರದ್ದು.

- ಸಂಕೇತ್ ಗುರುದತ್ತ

 

Comments 0
Add Comment

    Siddaramaiah Followers Prompted Chaos in Amit Shah Meeting Says Srinivas Prasad

    video | Friday, March 30th, 2018
    Suvarna Web Desk