‘ಸಮಾಜದಲ್ಲಿ ಬ್ರಾಹ್ಮಣ ಉಚ್ಚ ಸ್ಥಾನ ಹೊಂದಿದ್ದಾನೆ’| ಕಿಡಿ ಹೊತ್ತಿಸಿದ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಹೇಳಿಕೆ| ‘ತ್ಯಾಗ, ತಪಸ್ಸಿನಿಂದ ಬ್ರಾಹ್ಮಣ ಸಮಾಜದಲ್ಲಿ ಉಚ್ಚ ಸ್ಥಾನ ಪಡೆದಿದ್ದಾನೆ’| ರಾಜಸ್ಥಾನದ ಕೋಟಾದಲ್ಲಿ ನಡೆದ ಬ್ರಾಹ್ಮಣ ಮಹಾಸಭಾ ಸಮಾವೇಶ| ಓಂ ಬಿರ್ಲಾ ಹೇಳಿಕೆ ಖಂಡಿಸಿದ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್| ‘ನಾವು ಬಿರ್ಲಾ ಗೌರವಿಸುವುದು ಸ್ಪೀಕರ್ ಎಂಬ ಕಾರಣಕ್ಕೆ ಹೊರತು ಬ್ರಾಹ್ಮಣ ಎಂಬ ಕಾರಣಕ್ಕಲ್ಲ’|
ನವದೆಹಲಿ(ಸೆ.11): ಸಮಾಜದಲ್ಲಿ ಬ್ರಾಹ್ಮಣ ಯಾವಾಗಲೂ ಉಚ್ಚ ಸ್ಥಾನ ಹೊಂದಿದ್ದು, ತ್ಯಾಗ ಮತ್ತು ತಪಸ್ಸಿನಿಂದ ಬ್ರಾಹ್ಮಣ ಈ ಸ್ಥಾನ ಅಲಂಕರಿಸಿದ್ದಾನೆ ಎಂಬ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಹೇಳಿಕೆ ತೀವ್ರ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ರಾಜಸ್ಥಾನದ ಕೋಟಾದಲ್ಲಿ ನಡೆದ ಬ್ರಾಹ್ಮಣ ಮಹಾಸಭಾ ಸಮಾವೇಶದಲ್ಲಿ ಮಾತನಾಡಿದ್ದ ಓಂ ಬಿರ್ಲಾ, ಸಮಾಜದಲ್ಲಿ ಬ್ರಾಹ್ಮಣರಿಗೆ ಇರುವ ಉಚ್ಚ ಸ್ಥಾನ ಮುಂದುವರೆಯಬೇಕು ಎಂಬರ್ಥದಲ್ಲಿ ಹೇಳಿಕೆ ನೀಡಿದ್ದರು.
ಈ ಕುರಿತು ಟ್ವೀಟ್ ಮಾಡಿದ್ದ ಬಿರ್ಲಾ, ತ್ಯಾಗ ತಪಸ್ಸಿನಿಂದ ಪಡೆದ ಈ ಉಚ್ಚ ಸ್ಥಾನವನ್ನು ಬ್ರಾಹ್ಮಣ ಸಮುದಾಯ ಕಾಪಾಡಿಕೊಂಡು ಹೋಗಬೇಕಿದೆ ಎಂದು ಹೇಳಿದ್ದರು.
ಇನ್ನು ಬಿರ್ಲಾ ಹೇಳಿಕೆಯನ್ನು ಟೀಕಿಸಿರುವ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್, ಬಿರ್ಲಾ ಹೇಳಿಕೆ ಜಾತಿ ವ್ಯವಸ್ಥೆಯ ಕ್ರೂರತೆ ಹಾಗೂ ಅದರ ಅಸಮಾನತೆಯ ಪ್ರತಿಬಿಂಬ ಎಂದು ಟೀಕಿಸಿದ್ದಾರೆ.
ಅಲ್ಲದೇ ನಾವೆಲ್ಲಾ ಬಿರ್ಲಾ ಅವರನ್ನು ಲೋಕಸಭೆಯ ಸ್ಪೀಕರ್ ಎಂಬ ಕಾರಣಕ್ಕೆ ಗೌರವಿಸುತ್ತೇವೆಯೇ ಹೊರತು ಅವರು ಬ್ರಾಹ್ಮಣ ಎಂಬ ಕಾರಣಕ್ಕೆ ಅಲ್ಲ ಎಂದು ಸಿಬಲ್ ಕಿಡಿಕಾರಿದ್ದಾರೆ.