ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಹಿಳೆಯರಿಗೆ ನಿರೀಕ್ಷಿಸಿದ ಮಟ್ಟದಲ್ಲಿ ಟಿಕೆಟ್‌ ಪ್ರಾಪ್ತವಾಗಿಲ್ಲ ಎಂಬ ಪ್ರಶ್ನೆಗೆ  ಮಧ್ಯಪ್ರದೇಶ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಕಮಲ್‌ನಾಥ್‌ ಅವರು ನೀಡಿದ ಉತ್ತರ ಇದೀಗ ವಿವಾದದ ಸ್ವರೂಪ ಪಡೆದಿದೆ. 

ಭೋಪಾಲ್‌: ಮಧ್ಯಪ್ರದೇಶದ ವಿಧಾನಸಭೆ ಚುನಾವಣೆಯ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಆರ್‌ಎಸ್‌ಎಸ್‌ ಕುರಿತಾಗಿ ಪ್ರಕಟಿಸಿದ ವಿವಾದ ತಣ್ಣಗಾಗುವ ಮುನ್ನವೇ, ಮಧ್ಯಪ್ರದೇಶ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಕಮಲ್‌ನಾಥ್‌ ಅವರು ಮಹಿಳೆಯರ ಕುರಿತಾಗಿ ಆಡಿರುವ ಮಾತುಗಳು ವಿವಾದದ ಸ್ವರೂಪ ಪಡೆದಿವೆ.

ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಹಿಳೆಯರಿಗೆ ನಿರೀಕ್ಷಿಸಿದ ಮಟ್ಟದಲ್ಲಿ ಟಿಕೆಟ್‌ ಪ್ರಾಪ್ತವಾಗಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಗೆಲ್ಲುವ ಸಾಮರ್ಥ್ಯವಿರುವ ಎಲ್ಲ ಮಹಿಳೆಯರಿಗೂ ಟಿಕೆಟ್‌ ನೀಡಲಾಗಿದೆ. ಕೇವಲ ಮೀಸಲಾತಿ ಅಥವಾ ಅಲಂಕಾರಕ್ಕಾಗಿ ಮಹಿಳೆಯರಿಗೆ ಟಿಕೆಟ್‌ ಕೊಡುವ ಹಾದಿಯನ್ನು ನಾವು ತುಳಿದಿಲ್ಲ’ ಎಂದು ಹೇಳಿದ್ದಾರೆ. 

ಈ ಹೇಳಿಕೆಯನ್ನೇ ಪ್ರಚಾರದ ಸರಕಾಗಿ ಬಳಸಿಕೊಂಡಿರುವ ಬಿಜೆಪಿ, ಈ ಹೇಳಿಕೆ ಕುರಿತು ಕಮಲ್‌ನಾಥ್‌ ಅವರು ಕ್ಷಮಾಪಣೆ ಕೋರಬೇಕು ಎಂದು ಆಗ್ರಹಿಸಿದೆ. ಇತ್ತೀಚೆಗಷ್ಟೇ, ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದು ಅಧಿಕಾರದ ಗದ್ದುಗೆಗೇರಿದಲ್ಲಿ, ಸರ್ಕಾರಿ ಕಟ್ಟಡಗಳಲ್ಲಿ ಆರ್‌ಎಸ್‌ಎಸ್‌ ಸಭೆಗಳ ಮೇಲೆ ನಿಷೇಧ ಹೇರಲಾಗುತ್ತದೆ. ಅಲ್ಲದೆ, ಸರ್ಕಾರಿ ಸಿಬ್ಬಂದಿಗಳು ಆರ್‌ಎಸ್‌ಎಸ್‌ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿರುವುದನ್ನು ನಿಷೇಧಿಸಲಾಗುತ್ತದೆ ಎಂದು ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿತ್ತು.