ಭೋಪಾಲ್‌[ಜು.25]: ಕರ್ನಾಟಕದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ರೀತಿ ರಾಜ್ಯದಲ್ಲಿಯೂ ಕಾಂಗ್ರೆಸ್‌ ಸರ್ಕಾರ ಪತನವಾದರೆ, ಅದಕ್ಕೆ ತಮ್ಮನ್ನು ದೂರಬೇಡಿ ಎಂದು ಮಧ್ಯಪ್ರದೇಶ ಮಾಜಿ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಎಚ್ಚರಿಕೆ ನೀಡಿದ ಬೆನ್ನಲ್ಲೇ, ‘ಮೇಲಿನಿಂದ’ ನಮಗೆ ಸೂಚನೆ ಬಂದರೆ 24 ಗಂಟೆಯಲ್ಲಿ ಮಧ್ಯಪ್ರದೇಶ ಸಿಎಂ ಕಮಲ್‌ನಾಥ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಉರುಳಿಬೀಳಲಿದೆ ಎಂದು ರಾಜ್ಯದ ಪ್ರತಿಪಕ್ಷ ನಾಯಕ ಗೋಪಾಲ್‌ ಭಾರ್ಗವ ಎಚ್ಚರಿಸಿದ್ದಾರೆ.

ಬುಧವಾರ ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಮುಖ್ಯಮಂತ್ರಿ ಕಮಲ್‌ನಾಥ್‌, ‘ಮಧ್ಯಪ್ರದೇಶದ ಶಾಸಕರಾರ‍ಯರು ಸಹ ಮಾರಾಟಕ್ಕಿಲ್ಲ. ಹೀಗಾಗಿ, ಈ ಸರ್ಕಾರ ಸುಭದ್ರವಾಗಿದ್ದು, 5 ವರ್ಷ ಪೂರೈಸಲಿದೆ’ ಎಂದು ಹೇಳಿದರು. ಈ ಮೂಲಕ ಸರ್ಕಾರ ಬಿದ್ದರೆ, ತಮ್ಮನ್ನು ಹೊಣೆಗಾರರನ್ನಾಗಿಸಬೇಡಿ ಎಂದಿದ್ದ ಮಾಜಿ ಸಿಎಂ ಶಿವರಾಜ್‌ ಸಿಂಗ್‌ ಚೌಹಾನ್‌ ಅವರಿಗೆ ತಿರುಗೇಟು ನೀಡಿದ್ದರು.

ಈ ವೇಳೆ ಮಧ್ಯಪ್ರವೇಶಿಸಿದ ಪ್ರತಿಪಕ್ಷ ಬಿಜೆಪಿ ನಾಯಕ ಭಾರ್ಗವ ಅವರು, ‘ನಮ್ಮ ನಂಬರ್‌-1 ಹಾಗೂ ನಂಬರ್‌-2 ಅವರಿಂದ ಒಂದು ಸೂಚನೆ ಸಿಕ್ಕರೆ ಸಾಕು. ಈ ಸರ್ಕಾರ 24 ಗಂಟೆಯಲ್ಲಿ ಪತನವಾಗಲಿದೆ’ ಎಂದು ಹೇಳಿದರು. ಅಲ್ಲದೆ, ಕಮಲ್‌ನಾಥ್‌ ಸರ್ಕಾರ ಕಳೆದ 7 ತಿಂಗಳಿಂದ ಅಧಿಕಾರದಲ್ಲಿದೆ. ಇದು ಸಾಕಷ್ಟಾಯಿತು ಎಂದು ಹೇಳಿದರು.