ಬೆಂಗಳೂರು(ಜ. 09): ರಾಜ್ಯದಲ್ಲಿ ಲೋಕಾಯುಕ್ತ ಆಯ್ಕೆ ಪ್ರಕ್ರಿಯೆ ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದು, ಮೂವರು ಹೆಸರುಗಳು ಲೋಕಾಯುಕ್ತ ಸ್ಥಾನಕ್ಕೆ ಪ್ರಸ್ತಾಪವಾಗಿದೆ. ಲೋಕಾಯುಕ್ತ ನೇಮಕಾತಿ ಉನ್ನತ ಮಟ್ಟದ ಸಲಹಾ ಸಮಿತಿಯ ಸಭೆಯಲ್ಲಿ ನ್ಯಾ| ವಿಶ್ವನಾಥ ಶೆಟ್ಟಿ, ನ್ಯಾ| ಎನ್.ಕೆ.ಕುಮಾರ್ ಮತ್ತು ನ್ಯಾ| ಆನಂದ್ ಬೈರಾರೆಡ್ಡಿ ಅವರುಗಳನ್ನು ಲೋಕಾಯುಕ್ತ ಸ್ಥಾನಕ್ಕೆ ಪರಿಗಣಿಸಲಾಗಿದೆ. ಸಭೆಯಲ್ಲಿ ಈ ಮೂವರ ಹೆಸರನ್ನು ವಿಧಾನಸಭೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸೂಚಿಸಿದರು. ವಿಧಾನ ಪರಿಷತ್ ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ಮತ್ತು ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು ಈ ಮೂವರು ಹೆಸರಿಗೆ ಬೆಂಬಲ ಸೂಚಿಸಿದರು. ರಾಜ್ಯ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಕೂಡ ಈ ಮೂವರಲ್ಲಿ ಯಾರೇ ಆದರೂ ತಮ್ಮ ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಮೂವರ ಪೈಕಿ ನ್ಯಾ| ವಿಶ್ವನಾಥ್ ಶೆಟ್ಟಿಯವರ ಹೆಸರು ಅಂತಿಮವಾಗುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶೆಟ್ಟಿಯವರ ನೇಮಕಾತಿಗೆ ಆಸಕ್ತಿ ತೋರಿದ್ದಾರೆ. ಇಂದು ಸಂಜೆಯೊಳಗೆ ನ್ಯಾ| ವಿಶ್ವನಾಥ ಶೆಟ್ಟಿಯವರ ಹೆಸರನ್ನು ರಾಜ್ಯಪಾಲರಿಗೆ ಶಿಫಾರಸು ಮಾಡುವ ನಿರೀಕ್ಷೆ ಇದೆ. ಎಲ್ಲವೂ ಓಕೆ ಆದರೆ, ಒಂದು ವರ್ಷದ ನಂತರ ರಾಜ್ಯಕ್ಕೆ ಲೋಕಾಯುಕ್ತರು ಬಂದಂತಾಗುತ್ತದೆ.

ಯಾರು ಈ ನ್ಯಾ| ಶೆಟ್ಟಿ?
1944ರಲ್ಲಿ ಜನಿಸಿದ ನ್ಯಾ| ವಿಶ್ವನಾಥ್ ಶೆಟ್ಟಿ ಮೂಲತಃ ಉಡುಪಿಯವರು. ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್'ನಲ್ಲಿ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಅಖಿಲ ಭಾರತ ವಕೀಲರ ಸಂಘದ ಅಧ್ಯಕ್ಷರಾಗಿ, ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಮೊದಲ ಅಧ್ಯಕ್ಷರಾಗಿ, ರಾಜ್ಯ ಹೈಕೋರ್ಟ್'ನ ಕಾನೂನು ಸೇವಾ ಘಟಕದ ಅಧ್ಯಕ್ಷರಾಗಿ ಅವರು ಸೇವೆ ಸಲ್ಲಿಸಿದ್ದಾರೆ.